ಉಡುಪಿ ಹೆಸರಿನಲ್ಲಿ ಹರಿದಾಡುತ್ತಿರುವ ಎಲ್ಲಾ ವಿಡಿಯೋಗಳು ಸುಳ್ಳು: ಖುಷ್ಬು ಸುಂದರ್

Prasthutha|

‘ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ’

- Advertisement -

ಉಡುಪಿ: ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸಿದ ಪ್ರಕರಣ ತನಿಖೆಗೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ. ದಕ್ಷಿಣ ಭಾರತದ ಮಹಿಳಾ ಸದಸ್ಯೆ ಖುಷ್ಬು ಸುಂದರ್ ಉಡುಪಿಗೆ ಆಗಮಿಸಿದ್ದು, ಮೊದಲ ದಿನ ಇಡೀ ಪ್ರಕರಣದ ಸಮಗ್ರ ಮಾಹಿತಿಯನ್ನು ಉಡುಪಿಯ ಎಸ್‌ಪಿ ಹಾಗೂ ಡಿಸಿಯಿಂದ ಪಡೆದುಕೊಂಡಿದ್ದಾರೆ.

ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ ಎನ್ನುವ ವಿಚಾರ ರಾಜ್ಯ, ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಯನ್ನು ಶುರು ಮಾಡಿದ್ದಾರೆ. ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗದ ದಕ್ಷಿಣ ಭಾರತದ ಸದಸ್ಯೆ ಖುಷ್ಬು ಸುಂದರ್ ಉಡುಪಿಗೆ ಆಗಮಿಸಿದ್ದು, ಪ್ರಕರಣದ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಹೆಸರಿನಲ್ಲಿ ಹರಿದಾಡುತ್ತಿರುವ ಎಲ್ಲಾ ವಿಡಿಯೋಗಳು ಸುಳ್ಳು ಎಂದಿದ್ದಾರೆ.

- Advertisement -

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಘಟನೆ ಹಿಂದೆ ಯಾವುದೋ ಒಂದು ಬಿಗ್ ಸ್ಟೋರಿ ಇದೆ ಎಂದು ಯಾರೂ ಕಲ್ಪಿಸುವ ಅಗತ್ಯ ಇಲ್ಲ. ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಇರುವುದರಿಂದ ಸರಿಯಾದ ಹಾದಿಯಲ್ಲಿ ತನಿಖೆ ನಡೆಯುತ್ತದೆ. ರಾಜಕೀಯ ಒತ್ತಡ, ಕೋಮು ಪ್ರಭಾವ ಇಲ್ಲದೆ ರಾಷ್ಟ್ರೀಯ ಮಹಿಳಾ ಆಯೋಗ ತನಿಖೆ ಮಾಡುತ್ತದೆ ಎಂದು ಹೇಳಿದರು.

ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೊಬೈಲ್‌ಗಳನ್ನು ಪೊಲೀಸರು ರೆಟ್ರೀವ್ ಮಾಡಿದ್ದಾರೆ. 40 ಗಂಟೆಗಳ ಕಾಲ ರೆಟ್ರೀವ್ ಮಾಡಿದರೂ ಏನು ಪತ್ತೆಯಾಗಿಲ್ಲ. ಮೂರು ಮೊಬೈಲ್‌ಗಳ ಡೇಟಾ ಸಂಗ್ರಹ ಮಾಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಬೇಕಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಾಕ್ಷ್ಯ ಲಭ್ಯವಾದರೆ ವಿಡಿಯೋ ಬಗ್ಗೆ ಸ್ಪಷ್ಟತೆ ಸಿಗಬಹುದು ಎಂದರು.

ಸೂಕ್ತ ಸಾಕ್ಷಿ ಸಿಗದೇ ಹೋದರೆ ಚಾರ್ಜ್‌ಶೀಟ್‌ ಮಾಡಲು ಸಾಧ್ಯವಿಲ್ಲ. ಸಾಕ್ಷ್ಯವಿಲ್ಲದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸದ್ಯ ಆ ವಿದ್ಯಾರ್ಥಿನಿಯರನ್ನು ನಾವು ಆರೋಪಿತರು ಎಂದು ಕರೆಯಬಹುದು ಅಷ್ಟೇ. ಈ ಪ್ರಕರಣದಲ್ಲಿ ಭಾಗಿಯಾದ ಮೂರು ವಿದ್ಯಾರ್ಥಿನಿಯರ ಅಮಾನತು ಮಾಡಲಾಗಿದೆ. ಈ ಪ್ರಕರಣಕ್ಕೆ ಟೆರರ್ ಲಿಂಕ್ ಇದೆ ಎಂದು ವಾಟ್ಸಪ್ ಸಂದೇಶಗಳು ಹರಿದಾಡುತ್ತಿವೆ. ಪ್ರಕರಣದ ಹಿಂದೆ ಅನೇಕ ವದಂತಿಗಳನ್ನು ಹರಿಯ ಬಿಡಲಾಗಿದೆ. ಘಟನೆಯ ಹಿಂದೆ ಬಿಗರ್ ಥಿಯರಿ ಅಥವಾ ಬಿಗ್ಗರ್ ಸ್ಟೋರಿ ಇದೆ ಎಂದು ಸದ್ಯ ಭಾವಿಸುವುದು ಬೇಡ ಎಂದು ತಿಳಿಸಿದರು.

ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಅಗತ್ಯವಿಲ್ಲ. ಮಹಿಳಾ ಆಯೋಗ ಮತ್ತು ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಒಳಗೊಂಡಿವೆ. ಸರಿಯಾದ ಹಾದಿಯಲ್ಲಿ ಪ್ರಕರಣದ ತನಿಖೆ ಆಗಬೇಕು. ತನಿಖೆಗೆ ಮೊದಲೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ. ಮಹಿಳಾ ಆಯೋಗ ಪ್ರತಿಭಟನೆ ಮಾಡಲು ಇರುವ ಸಂಸ್ಥೆಯಲ್ಲ. ಮಹಿಳಾ ಆಯೋಗ ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಲು ಬಂದಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಮಹಿಳೆಯರ ರಕ್ಷಣೆಗೆ ಇರುವ ಸಂಸ್ಥೆ ಎಂದರು.

ಉಡುಪಿ ಎಸ್‌ಪಿ ಅಕ್ಷಯ್ ಮಚ್ಚೀಂದ್ರ ಹಾಕೆ, ಡಿಸಿ ಡಾ.ವಿದ್ಯಾಕುಮಾರಿ, ಎಡಿಸಿ ವೀಣಾ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾಗಿ ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿಯನ್ನು ಖುಷ್ಬು ಪಡೆದುಕೊಂಡಿದ್ದಾರೆ. ಸಂತ್ರಸ್ತೆ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿ ಜೊತೆ ಖುಷ್ಬು ಮಾಹಿತಿ ಸಂಗ್ರಹ ಮಾಡಲಿದ್ದಾರೆ.

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲ ಕುಂದರ್, ಖುಷ್ಬು ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದು, ಕೆಲ ದಾಖಲೆಗಳನ್ನು ನೀಡಿದ್ದಾರೆ. ಮುಂದಿನ ಎರಡು ದಿನ ಖುಷ್ಬು ಉಡುಪಿಯಲ್ಲಿ ಇರಲಿದ್ದು, ಸಮಗ್ರ ಮಾಹಿತಿ ಮತ್ತು ದಾಖಲೆಗಳ ಸಂಗ್ರಹ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

Join Whatsapp