ಉಪ್ಪಿನಂಗಡಿ ಲಾಠಿಚಾರ್ಜ್ ಘಟನೆ ವಿಧಾನಸಭೆಯಲ್ಲಿ ಪ್ರತಿಧ್ವನಿ

Prasthutha|

ಬೆಳಗಾವಿ: ಉಪ್ಪಿನಂಗಡಿಯಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ವಿಷಯ ಬುಧವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.

- Advertisement -

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ ಪ್ರಕರಣಗಳು ಹೆಚ್ಚುತ್ತಿದ್ದು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಘಟನೆಗಳು, ತ್ರಿಶೂಲ ದೀಕ್ಷೆಯಂತಹ ಕಾರ್ಯಕ್ರಮಗಳಿಂದ ಕೋಮು ಸೌಹಾರ್ದಕ್ಕೆ ಸವಾಲಾಗಿದೆ, ಪೊಲೀಸರಿಗೆ ಪರಿಸ್ಥಿತಿ ಎದುರಿಸಲು, ಮುಕ್ತ ಅವಕಾಶ ನೀಡಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಎನ್ಐಟಿಕೆ ಸುರತ್ಕಲ್ ನಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಇಂತಹ ಘಟನೆಗಳಿಗೆ ಸಿಎಂ ಆಕ್ಷನ್ ಗೆ ರಿಯಾಕ್ಷನ್ ಎನ್ನುತ್ತಾರೆ. ಉಪ್ಪಿನಂಗಡಿ, ಬೆಳ್ತಂಗಡಿಯಲ್ಲಿ ಗಲಭೆ ನಡೆದಿವೆ. ಈ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರಿಗೆ ಮುಕ್ತ ಅವಕಾಶ ಕೊಡಿ ಎಂದು ಆಗ್ರಹಿಸಿದರು.

- Advertisement -

ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಕರಾವಳಿಯಲ್ಲಿ ಕೋಮು ಸೌಹಾರ್ದತೆ ಕಾಪಾಡುವ ಕೆಲಸ ಮಾಡುತ್ತೇವೆ. ಪೊಲೀಸರು ಜಾತಿ ಧರ್ಮ ನೋಡದೆ ಕ್ರಮ ಕೈಗೊಳ್ಳುತ್ತಿದ್ದಾರೆ .ಉಪ್ಪಿನಂಗಡಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಅಪರಾಧಿಗಳನ್ನು ಹಿಡಿದುಕೊಂಡು ಬಂದರೆ ಮುನ್ನೂರು ನಾಲ್ಕೂರು ಜನ ಸೇರಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರಿಗೆ ಚೂರಿ ಇರಿತ ಕೂಡಾ ಆಗಿದೆ ಎಂದರು.

ಹೆಲಿಕಾಪ್ಟರ್ ದುರಂತದ ಸಂದರ್ಭದಲ್ಲಿ ರಾವತ್ ಸಾವನ್ನು ಸಂಭ್ರಮಿಸಿದ್ದಾರೆ. ದೋವಲ್ ಯಾವತ್ತು? ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪೊಲೀಸರನ್ನು ನಮ್ಮ ಸರ್ಕಾರ ಕಂಟ್ರೋಲ್ ಮಾಡುತ್ತಿಲ್ಲ. ಕೋಮು ಸೌಹಾರ್ದತೆ ಕಾಪಾಡುವ ಕೆಲಸ ಮಾಡುತ್ತೇವೆ. ಕರಾವಳಿ ಜಿಲ್ಲೆಯಲ್ಲಿ 2021 ರಲ್ಲಿ ಕೇವಲ ಐದು ಕೋಮು ಘಟನೆಗಳು ನಡೆದಿವೆ. ಯಾವುದೇ ಆತಂಕ ಬೇಡ, ಅಂತಹ ಏನಾದರೂ ಘಟನೆ ಇದ್ದರೆ ಸರ್ಕಾರದ ಗಮನಕ್ಕೆ ತನ್ನಿ ಗೃಹ ಸಚಿವರು ಹೇಳಿದರು.

Join Whatsapp