ಮದ್ರಸಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ಯುಪಿ ಸರ್ಕಾರ: ಇಂದಿನಿಂದಲೇ ಆದೇಶ ಜಾರಿ

Prasthutha|

ಲಕ್ನೋ: ಉತ್ತರ ಪ್ರದೇಶದ ಎಲ್ಲಾ ಮದ್ರಸಗಳಲ್ಲಿ ಮೇ 12ರಿಂದ ರಾಷ್ಟ್ರಗೀತೆ -ಜನಗಣ ಮನ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶ ಮದ್ರಸಾ ಶಿಕ್ಷಣ ಮಂಡಳಿಯ ರಿಜಿಸ್ಟ್ರಾರ್ ಎಸ್.ಎನ್.ಪಾಂಡೆ ಅವರು ಮೇ 9 ರಂದು ಎಲ್ಲಾ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳಿಗೆ ಈ ಕುರಿತು ಆದೇಶ ಹೊರಡಿಸಿದ್ದಾರೆ.

- Advertisement -

ಮಾರ್ಚ್ 24 ರಂದು ನಡೆದ ಮಂಡಳಿಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ರಾಜ್ಯದ ಎಲ್ಲಾ ಮದರಸಾಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ರಾಷ್ಟ್ರಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಮಝಾನ್ ರಜೆ ಕಳೆದು ಮೇ 12ರ ಗುರುವಾರ ಮದ್ರಸಾಗಳಲ್ಲಿ ನಿಯಮಿತ ತರಗತಿಗಳು ಪ್ರಾರಂಭವಾಗಿದ್ದು, ಇಂದಿನಿಂದಲೇ ಇದು ಜಾರಿಗೆ ಬಂದಿದೆ ಎಂದು ಅವರು ಹೇಳಿದರು.

ತರಗತಿಗಳು ಪ್ರಾರಂಭವಾಗುವ ಮೊದಲು, ರಾಜ್ಯದ ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನರಹಿತ ಮದ್ರಸಾಗಳಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

- Advertisement -

ಆದೇಶ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿಗಳಿಗೆ ವಹಿಸಲಾಗಿದೆ.

ಮದಾರಿಸ್ ಅರೇಬಿಯಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದಿವಾನ್ ಸಾಹೆಬ್ ಝಮಾನ್ ಖಾನ್ ಈ ಕುರಿತು ಮಾತನಾಡಿ, ಇಲ್ಲಿಯವರೆಗೆ ಮದ್ರಸಾಗಳಲ್ಲಿ ಸಾಮಾನ್ಯವಾಗಿ ಹಮ್ದ್ (ಅಲ್ಲಾಹುವಿಗೆ ಸ್ತೋತ್ರಗಳು) ಮತ್ತು ಸಲಾಂ (ಮುಹಮ್ಮದ್ ಪೈಗಂಬರ್ ಗೆ ಸ್ವಲಾತ್)ನೊಂದಿಗೆ ತರಗತಿಗಳು ಪ್ರಾರಂಭವಾಗುತ್ತಿದ್ದವು. ಕೆಲವು ಮದ್ರಸಗಳಲ್ಲಿ ರಾಷ್ಟ್ರಗೀತೆಯನ್ನು ಸಹ ಹಾಡಲಾಗುತ್ತಿತ್ತು. ಆದರೆ ಅದು ಕಡ್ಡಾಯವಾಗಿರಲಿಲ್ಲ. ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ” ಎಂದು ಅವರು ಹೇಳಿದರು.
ಕಳೆದ ತಿಂಗಳು ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಧರಂಪಾಲ್ ಸಿಂಗ್ ಅವರು ಮದ್ರಸಾಗಳಲ್ಲಿ ರಾಷ್ಟ್ರೀಯತೆಯನ್ನು ಕಲಿಸುವುದನ್ನು ಒತ್ತಿ ಹೇಳಿದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ.

Join Whatsapp