ತ್ರಿವರ್ಣ ಧ್ವಜ ಹಾರಿಸಿದ ಆರೆಸ್ಸೆಸ್‌ ಗೆ ಇತಿಹಾಸ ನೆನಪಿಸಿದ ನೆಟ್ಟಿಗರು

Prasthutha|

ನವ ದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ ರಂಗೇರುತ್ತಿದೆ. ಪ್ರತೀ ಮನೆ ಮನೆಗಳಲ್ಲೂ ರಾಷ್ಟ್ರಧ್ವಜ ಹಾರಾಡತೊಡಗಿದೆ. ಹೆಚ್ಚೇಕೆ ಆರೆಸ್ಸೆಸ್ ತನ್ನ ನಾಗಪುರದ ಮುಖ್ಯ ಕಚೇರಿ ಸಹಿತ ಇತರ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಅಮೃತ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದೆ.

- Advertisement -

ಆದರೆ ಈ ಎಲ್ಲಾ ಬೆಳವಣಿಗೆಯನ್ನು ಅಚ್ಚರಿಯ ಕಣ್ಣಿನಿಂದ ನೋಡಿರುವ ಜನಸಾಮಾನ್ಯರು ಈ ದಿಢೀರ್ ರಾಷ್ಟ್ರಧ್ವಜ ಪ್ರೇಮದ ಹಿಂದೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಆರೆಸ್ಸೆಸ್ ನಾಯಕ ಕೇಶವ ಬಲಿರಾಮ್ ಹೆಡ್ಗೇವಾರ್ ಸಹಿತ ಕೆಲ ನಾಯಕರಿಗೆ ತ್ರಿವರ್ಣ ಧ್ವಜದೊಂದಿಗೆ ಸಹಮತವಿರಲಿಲ್ಲ. ಅಲ್ಲದೇ ಸ್ವಾತಂತ್ರ್ಯದ ಐದು ದಶಕದ ಬಳಿಕವಷ್ಟೇ ಆರೆಸ್ಸೆಸ್ ತನ್ನ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತ್ತು.

ಆದರೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆರೆಸ್ಸೆಸ್ ತನ್ನ ಸಾಮಾಜಿಕ ಜಾಲತಾಣದ ಖಾತೆಯ ಪ್ರೊಫೈಲ್ ಚಿತ್ರ ರಾಷ್ಟ್ರ ಧ್ವಜಕ್ಕೆ ಬದಲಾಯಿಸುವುದರೊಂದಿಗೆ ತನ್ನ ಕಚೇರಿಯಲ್ಲೂ ತ್ರಿವರ್ಣ ಧ್ವಜ ಹಾರಿಸಿದೆ.

ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ನೆಟ್ಟಿಗರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಆರೆಸ್ಸೆಸ್‌ನ ಹಳೇ ಇತಿಹಾಸ ಕೆದಕಿದ್ದಾರೆ.

1930 ಜನವರಿ 21ರಂದು ಆರೆಸ್ಸೆಸ್‌ ಮುಖಂಡ ಹೆಡ್ಗೇವಾರ್ ಭಗವಾಧ್ವಜ ರಾಷ್ಟ್ರ ಧ್ವಜವಾಗಬೇಕೆಂದು ಸುತ್ತೋಲೆ ಹೊರಡಿಸಿದ್ದು, 1947 ಆ. 14 ರ ಆರೆಸ್ಸೆಸ್ ಮುಖವಾಣಿ ‘ಆರ್ಗನೈಝರ್’ನ ಸಂಪಾದಕೀಯ ಈ ಸುತ್ತೋಲೆಗೆ ಮತ್ತಷ್ಟು ಪುಷ್ಟಿ ನೀಡಿತ್ತು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ ಈ ಸಂಪಾದಕೀಯದ ಬಗ್ಗೆ ಬರೆದಿರುವ ಸಾಮಾಜಿಕ ಜಾಲತಾಣದ ಬಳಕೆದಾರರು ‘ನಾಳೆ ಅಧಿಕಾರಕ್ಕೆ ಬಂದ ನಂತರ ತ್ರಿವರ್ಣ ಧ್ವಜ ಹಾರಾಡಿಸಲು ನಮ್ಮ ಬಳಿ ಕೇಳಿಕೊಳ್ಳಬಹುದು. ಆದರೆ ಹಿಂದುತ್ವವಾದಿಗಳಿಗೆ ಈ ಧ್ವಜವನ್ನು ಒಪ್ಪಿಕೊಳ್ಳಲೋ, ಗೌರವಿಸಲೋ ಸಾಧ್ಯವಿಲ್ಲ. ಮೂರು ಬಣ್ಣದಲ್ಲಿರುವ ಧ್ವಜವು ಕೆಟ್ಟ ಮಾನಸಿಕ ಪ್ರಭಾವ ಸೃಷ್ಟಿಸಬಹುದು. ಅಲ್ಲದೇ ಇದು ದೇಶಕ್ಕೆ ಮಾರಕವಾಗಬಹುದೆಂದು’ ವಿವರಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟೀಷರಿಗೆ ನೆರವಾಗುತ್ತಿದ್ದ, ಮತ್ತು ಕ್ಷಮಾಪಣೆ ಪತ್ರ ಬರೆದು ಜೈಲು ಶಿಕ್ಷೆಯಿಂದ ಬಚಾವಾಗಿ, ಹೋರಾಟದಿಂದ ವಿಮುಖರಾಗಿದ್ದ ಚರಿತ್ರೆಯನ್ನೂ ನೆಟ್ಟಿಗರು ಆರೆಸ್ಸೆಸ್‌ಗೆ ನೆನಪಿಸಿದ್ದಾರೆ.

- Advertisement -