ರಾಷ್ಟ್ರ ರಾಜಧಾನಿಗೂ ಕಾಲಿಟ್ಟ ‘ಲಿಂಚಿಂಗ್’ ಸಂಸ್ಕೃತಿ: ಮುಸ್ಲಿಮ್ ವೃದ್ಧನ ಮೇಲೆ ಗುಂಪು ಹಲ್ಲೆ

Prasthutha|

ಹೊಸದಿಲ್ಲಿ: ದೇಶದಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರ ಹೆಚ್ಚಾಗುತ್ತಿರುವ ಮಧ್ಯೆಯೇ ರಾಜಧಾನಿ ದೆಹಲಿಗೂ ಗುಂಪು ಹಲ್ಲೆ ಪ್ರಕರಣ ಕಾಲಿಟ್ಟಿದೆ. ದೆಹಲಿಯ ನೋಯ್ಡಾ ಸೆಕ್ಷರ್ 37ರಲ್ಲಿ ಮುಸ್ಲಿಮ್ ವೃದ್ಧರೊಬ್ಬರಿಗೆ ಮೂವರು ಹಿಂದುತ್ವವಾದಿ ಯುವಕರ ಗುಂಪು ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

- Advertisement -

62 ವರ್ಷ ಪ್ರಾಯದ ಖಾಝಿಮ್ ಅಹ್ಮದ್ ಹಲ್ಲೆಗೊಳಗಾದ ವ್ಯಕ್ತಿ. ಸಂಬಂಧಿಕರೊಬ್ಬರ ವಿವಾಹದಲ್ಲಿ ಪಾಲ್ಗೊಳ್ಳಲು ಅಲಿಘಡಕ್ಕೆ ತೆರಳುತ್ತಿದ್ದಾಗ ಯುವಕರ ಗುಂಪೊಂದು ಕಿರುಕುಳ ನೀಡಿ ಕ್ರೂರವಾಗಿ ಥಳಿಸಿದೆ ಎಂದು ದೆಹಲಿಯ ಝಾಕಿರ್ ನಗರ ನಿವಾಸಿಯಾಗಿರುವ ಖಾಝಿಮ್ ಅಹ್ಮದ್ ಆರೋಪಿಸಿದ್ದಾರೆ.


ಮುಸ್ಲಿಮ್ ವೇಷಭೂಷಣವನ್ನು ಕಂಡು ಹಲ್ಲೆಕೋರರು ತಮ್ಮನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ಮುಸ್ಲಿಮರ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಸಂತ್ರಸ್ತ ಖಾಝಿಮ್ ಆರೋಪಿಸಿದ್ದಾರೆ. “ನಾನು ಅಲಿಘಡಕ್ಕೆ ಹೋಗುವ ಬಸ್ ಗಾಗಿ ನೋಯ್ಡಾ ಸೆಕ್ಟರ್ -37 ನಲ್ಲಿ ಕಾಯುತ್ತಿದ್ದಾಗ, ಬಿಳಿ ಕಾರಿನ ಬಳಿ ನಿಂತಿದ್ದ ಕೆಲವರು ನನ್ನನ್ನು ಅವರ ಕಡೆಗೆ ಕರೆದರು. ನಾನು ಅವರ ಬಳಿ ಹೋದಾಗ ನನ್ನನ್ನು ಕಾರಿನೊಳಗೆ ಎಳೆದು, ಬಾಗಿಲು ಹಾಕಿ ತೀವ್ರವಾಗಿ ಹಲ್ಲೆ ನಡೆಸಿದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

- Advertisement -


ಹೊಡೆಯದಂತೆ ಬೇಡಿಕೊಂಡರೂ ನಿರ್ದಾಕ್ಷ್ಯಿಣ್ಯವಾಗಿ ಹಲ್ಲೆ ನಡೆಸುತ್ತಲೇ ಇದ್ದರು. ತೀವ್ರ ಅಸ್ವಸ್ಥಗೊಂಡಾಗ ಅವರು ನನ್ನನ್ನು ಬಿಟ್ಟರು. “ಅವರು ನನ್ನ ಪೈಜಾಮಾವನ್ನು ಹರಿದು, ಸ್ಕ್ರೂ ಡ್ರೈವರ್ ನಿಂದ ನನ್ನ ಮೂಗಿಗೆ ಚುಚ್ಚಿದರು. ನನ್ನಲ್ಲಿದ್ದ ಹಣ, ಮೊಬೈಲ್ ಅನ್ನು ಕಿತ್ತುಕೊಂಡು, ಗಡ್ಡವನ್ನು ಎಳೆದು ಕುತ್ತಿಗೆಗೆ ಟವೆಲ್ ನಿಂದ ಕತ್ತು ಹಿಸುಕಲು ಪ್ರಯತ್ನಿಸಿದರು ಎಂದು ವೃದ್ದ ಖಾಝಿಮ್ ತಿಳಿಸಿದ್ದಾರೆ.
ಈ ಬಗ್ಗೆ ನೋಯ್ಡಾ ಸೆಕ್ಟರ್ 37 ಪೊಲೀಸ್ ಠಾಣೆಯಲ್ಲಿ ಖಾಝಿಮ್ ದೂರು ದಾಖಲಿಸಿದ್ದಾರೆ.


ಘಟನೆಯಿಂದಾಗಿ ವೃದ್ಧ ಖಾಸಿಮ್ ಅವರು ಭಯಭೀತರಾಗಿದ್ದಾರೆ. ಇದು ನನ್ನ ಗುರುತನ್ನು ನೋಡಿ ನಡೆದ ಮೊದಲ ದಾಳಿ ಅಲ್ಲ. ಒಂದು ವರ್ಷದ ಹಿಂದೆ ನಾನು ರೈಲಿನಲ್ಲಿ ಅಲಿಘಡಕ್ಕೆ ಪ್ರಯಾಣಿಸುತ್ತಿದ್ದಾಗ ನನ್ನ ಮೇಲೆ ಗುಜ್ಜಾರ್ ಗಳು ಹಲ್ಲೆ ನಡೆಸಿದ್ದರು ಎಂದು ಖಾಝಿಮ್ ಹೇಳಿದರು. ಎಫ್ಐಆರ್ ಪ್ರತಿಯನ್ನು ಪೊಲೀಸರು ಸೋಮವಾರ ಕುಟುಂಬಕ್ಕೆ ನೀಡಿದ್ದಾರೆ.


ತಂದೆಗೆ ಕುಟುಂಬದ ವೈದ್ಯರು ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಖಾಝಿಮ್ ಅವರ ಮಗ ಅರ್ಹಮ್ ಹೇಳಿದ್ದಾರೆ.
“ನಾವು ಈ ವಿಷಯವನ್ನು ಮಾಧ್ಯಮದಲ್ಲಿ ಮುಂದುವರಿಸಲು ಬಯಸುವುದಿಲ್ಲ. ಏಕೆಂದರೆ ನಾವು ಆಡಳಿತದ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಭಯವಿದೆ. ನಮಗೆ ರಾಜಕೀಯ ಸೇರಿದಂತೆ ಯಾರ ಬೆಂಬಲವೂ ಸಿಗುವುದಿಲ್ಲ ಎಂದು ಅರ್ಹಮ್ ಹೇಳಿರುವುದಾಗಿ ‘ಮಕ್ತೂಬ್’ ವೆಬ್ ಸೈಟ್ ವರದಿ ಮಾಡಿದೆ.

Join Whatsapp