ಇಂಧನ ತೈಲ ಬೆಲೆ ಏರಿಕೆಯು ಸರ್ಕಾರದ ದುರಾಸೆ ಮತ್ತು ಶೋಷಣೆ: ಸುಪ್ರಿಯಾ ಶ್ರೀನೇಟ್

Prasthutha|

ಬೆಂಗಳೂರು: ಸರ್ಕಾರದ ದುರಾಸೆ ಹಾಗೂ ಶೋಷಣೆಯಿಂದ ಇಂಧನ ತೈಲ ಬೆಲೆ ಹೆಚ್ಚುತ್ತಿದೆ ಎಂದು
ಎಐಸಿಸಿ ರಾಷ್ಟ್ರೀಯ ವಕ್ತಾರರಾದ ಸುಪ್ರಿಯಾ ಶ್ರೀನೇಟ್ ಹೇಳಿದ್ದಾರೆ.

- Advertisement -

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಬಿಕ್ಕಟ್ಟು ಹಾಗೂ ಪಿಡುಗಿನ ಸಮಯದಲ್ಲಿ ಜನಸಾಮಾನ್ಯರು ತತ್ತರಿಸಿದ್ದು, ಈ ಮಧ್ಯೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಿದೆ. ಜನ ಭಯಾನಕ ವೈರಸ್ ಹಾಗೂ ಮೋದಿ ಸರ್ಕಾರದ ಆರ್ಥಿಕ ದುರಾಡಳಿತದ ವಿರುದ್ಧ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಉದ್ಯೋಗ ನಷ್ಟ, ವೇತನ ಕಡಿತವಾಗಿದೆ. ಈ ಪರಿಸ್ಥಿತಿಯಲ್ಲಿ ಜನರ ಕೈಗೆ ಹಣ ನೀಡಬೇಕಾದ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ಬೇಜವಾಬ್ದಾರಿ ತೋರುತ್ತಿದೆ ಎಂದು ಟೀಕಿಸಿದರು.

ಯುಪಿಎ ಸರ್ಕಾರದ ಉತ್ತಮ ಕೆಲಸದ ಮೂಲಕ ದೇಶದ 27 ಕೋಟಿ ಜನರನ್ನು ಬಡತನ ರೇಖೆಗಿಂತ ಹೊರಕ್ಕೆ ತಂದಿತ್ತು. ಆದರೆ ಬಿಜೆಪಿ ಸರ್ಕಾರದ ದುರಾಡಳಿತ ದೇಶದ 23 ಕೋಟಿ ಜನ ಬಡತನ ರೇಖೆಗಿಂತ ಕೆಳಕ್ಕೆ ದೂಡಿದೆ. ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಶೇ.97ರಷ್ಟು ಜನ ಕಡಿಮೆ ವೇತನ ಪಡೆಯುವಂತಾಗಿದೆ. ಪರಿಣಾಮ ಭಾರತೀಯರು 1.25 ಲಕ್ಷ ಕೋಟಿ ಕಾರ್ಮಿಕ ನಿಧಿ ಹಣ ಪಡೆಯುವಂತಾಗಿದೆ ಎಂದರು.

- Advertisement -

ಆರ್ಥಿಕ ನಿರ್ವಹಣೆ ವೈಫಲ್ಯ: ದೇಶದ ಜಿಡಿಪಿ ಕುಸಿಯುತ್ತಿರುವಾಗ ಹಣದುಬ್ಬರ ಮಹಾಪರಾಧ. ಜನರ ಆದಾಯ ಕುಸಿದಿರುವಾಗ ಅಗತ್ಯ ವಸ್ತುಗಳ ಮೇಲೆ ಹೆಚ್ಚು ವ್ಯಯಿಸುವಂತೆ ಮಾಡುವಂತಾಗಿದೆ. ಇದು ಕೇವಲ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ವಿಚಾರ ಮಾತ್ರವಲ್ಲ. ಅಡುಗೆ ಎಣ್ಣೆ, ಬೇಳೆ ಕಾಳುಗಳು, ಚಹಾ, ಕಾಫಿ, ಸೋಪುಗಳ ಬೆಲೆ ಕೂಡ ಹೆಚ್ಚಾಗಿವೆ. ಇತ್ತೀಚಿನ ಹಣದುಬ್ಬರ ಸಂಖ್ಯೆ ಎಚ್ಚರಿಕೆಯ ಗಂಟೆಯಾಗಿದೆ. ಚಿಲ್ಲರೆ ಹಣದುಬ್ಬರವು ಆರ್ ಬಿ ಐನ ಗುರಿ ಶೇ.6ಕ್ಕಿಂತ ಹೆಚ್ಚಾಗಿದ್ದು, ಶೇ.6.3ರಷ್ಟು ತಲುಪಿದೆ. ೆಂದ ಻ಅವರು, ಹಣದುಬ್ಬರದ ಮಾಹಿತಿಯ ಪಟ್ಟಿ ನೀಡಿದರು.

ಲಾಭ ಮಾಡುತ್ತಿರುವ ಸರ್ಕಾರ: ಮೋದಿ ಸರ್ಕಾರ ಜನರಿಗೆ ದ್ರೋಹ ಬಗೆದಿದೆ. ಅತಿಯಾದ ಹಣದುಬ್ಬರವು ಅತಿಯಾದ ಬೇಡಿಕೆ ಅಥವಾ ಜನರ ಕೈಯಲ್ಲಿ ಹೆಚ್ಚಿನ ಹಣವಿರುವ ಕಾರಣದಿಂದ ಉಂಟಾಗಿಲ್ಲ. ಬದಲಿಗೆ ಜನರ ಆದಾಯ ಕುಸಿದು ಜನರ ಕೈಯಲ್ಲಿ ಹಣವಿಲ್ಲದಂತಾಗಿದೆ. ಈ ಪರಿಸ್ಥಿತಿಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿರುವುದು ಸರ್ಕಾರದ ಶೋಷಣೆ, ದುರಾಸೆ ಹಾಗೂ ಆರ್ಥಿಕತೆ ನಿರ್ವಹಣೆಯಲ್ಲಿನ ವೈಫಲ್ಯ. ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರ ಕಚ್ಚಾ ತೈಲ ಬೆಲೆ ಕುಸಿತದ ಲಾಭವನ್ನು ಜನರಿಗೆ ನೀಡಲು ನಿರಾಕರಿಸಿದೆ. ಜನರಿಗೆ ಲಾಭ ನೀಡುವ ಬದಲು ತಾನೇ ಲಾಭ ಮಾಡಿಕೊಳ್ಳಲು ಮುಂದಾಗಿದೆ. ಕಳೆದ 7 ವರ್ಷಗಳಲ್ಲಿ 13 ಬಾರಿ ಅಬಕಾರಿ ಸುಂಕ ಹೆಚ್ಚಿಸಿ ಸರ್ಕಾರ 23 ಲಕ್ಷ ಕೋಟಿ ರೂಪಾಯಿ ಆದಾಯ ಮಾಡಿಕೊಂಡಿದೆ ಎಂದು ಅವರು ಹೇಳಿದರು.

ತೈಲಬಾಂಡ್ ಗಳ ಸುಳ್ಳು ಪ್ರಚಾರ: ಕೇಂದ್ರ ಸರ್ಕಾರ ಕಳೆದ 7 ವರ್ಷಗಳಿಂದ ಅಧಿಕಾರ ನಡೆಸಿದ್ದರೂ ಬೆಲೆ ಏರಿಕೆ ವಿಚಾರದಲ್ಲಿ ನಾಚಿಕೆ ಇಲ್ಲದೆ ಈ ಹಿಂದಿನ ಸರ್ಕಾರವನ್ನು ಟೀಕಿಸಲು ಮುಂದಾಗಿದೆ. ಗ್ರಾಹಕರನ್ನು ರಕ್ಷಿಸಲು ತೈಲ ಬಾಂಡ್ ಗಳನ್ನು ಪರಿಚಯಿಸಲಾಯಿತು. ಕಳೆದ 7 ವರ್ಷಗಳಲ್ಲಿ ತೈಲ ಬಾಂಡ್ ಗಳಿಂದ ಆಗಿರುವ ಹೊರೆ ಅತ್ಯಲ್ಪ. ಮೋದಿ ಸರ್ಕಾರ ಈ ಅವಧಿಯಲ್ಲಿ ಜನರಿಂದ ಸುಂಕದ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ಕೇವಲ ಶೇ.3.5ರಷ್ಟನ್ನು ಮಾತ್ರ ತೈಲಬಾಂಡ್ ಗೆ ವ್ಯಯಿಸಿದೆ ಎಂದರು.
ಇಂಧನ ದರ ಇಳಿಕೆ, ಪರಿಷ್ಕೃತ ಆಮದು ಸುಂಕ, ಸಮಂಜಸ ಜಿಎಸ್ಟಿಗೆ ಒತ್ತಾಯ: ಈ ಆರ್ಥಿಕ ನಿರ್ವಹಣೆ ವೈಫಲ್ಯ ಸರ್ಕಾರದ ಆರ್ಥಿಕತೆ ಕುರಿತ ಅಜ್ಞಾನಕ್ಕೆ ಸಾಕ್ಷಿಯಾಗಿದೆ. ನಮ್ಮ ಜಿಡಿಪಿಯ ಶೇ.60ರಷ್ಟು ಬಳಕೆಯಾಗುತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದ ಜನ ಉದ್ಯೋಗ ಕಳೆದುಕೊಂಡಿದ್ದು,ವೇತನ ಕಡಿತವಾಗಿರುವುದರಿಂದ ಬೇಡಿಕೆ ಕುಸಿದಿದೆ. ಇದನ್ನು ಸರಿಪಡಿಸಿ, ಬೇಡಿಕೆ, ಬಂಡವಾಳ ಹಾಗೂ ಉದ್ಯೋಗ ಮರುಕಳಿಸಲು ಜನರ ಕೈಗೆ ಹಣ ನೀಡುವ ನ್ಯಾಯ್ ಯೋಜನೆ ಅಗತ್ಯವಾಗಿದೆ. ಜನರ ಮೇಲಿನ ಹೊರೆ ಇಳಿಸಲು ಸರ್ಕಾರ ಕೂಡಲೇ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿ ಬೆಲೆ ಇಳಿಸಬೇಕು. ಆಮದು ಸುಂಕ ಪರಿಶೀಲಿಸಬೇಕು. ದಿನಬಳಕೆ ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ ಎಂದು ತಿಳಿಸಿದರು.

Join Whatsapp