ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಮುಖಂಡರ ನಂಟಿನ ದೀಪ್ ಸಿದು ವಿರುದ್ಧ ಎಫ್ ಐಆರ್ ಇಲ್ಲ!

Prasthutha|

ನವದೆಹಲಿ : ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಿನ್ನೆ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ನಡೆದ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಸುಮಾರು 22 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 9 ರೈತ ಮುಖಂಡರ ವಿರುದ್ಧವೂ ಎಫ್ ಐಆರ್ ದಾಖಲಾಗಿದೆ.

- Advertisement -

ಆದರೆ, ಕೆಂಪುಕೋಟೆಯಲ್ಲಿ ದಾಂಧಲೆಗೆ ಪ್ರಚೋದಿಸಿ, ಬಾವುಟ ಹಾರಿಸಲು ಕುಮ್ಮಕ್ಕು ನೀಡಿದ ಆರೋಪ ಹೊತ್ತಿರುವ, ಬಿಜೆಪಿ ಮುಖಂಡರ ನಂಟಿರುವ ನಟ ದೀಪ್ ಸಿದು ಮೇಲೆ ಯಾವುದೇ ಎಫ್ ಐಆರ್ ಇಲ್ಲಿ ವರೆಗೂ ದಾಖಲಾಗಿಲ್ಲ ಎಂದು ವರದಿಗಳು ತಿಳಿಸಿವೆ.

ದೆಹಲಿ ಪೊಲೀಸರು ಇಲ್ಲಿ ವರೆಗೆ ಪ್ರಕರಣಗಳಿಗೆ ಸಂಬಂಧಿಸಿ ಸುಮಾರು 200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ. ರಾಕೇಶ್ ಟಿಕಾಯತ್, ಯೋಗೇಂದ್ರ ಯಾದವ್ ಸೇರಿ 9 ಪ್ರಮುಖ ರೈತ ಮುಖಂಡರ ಮೇಲೂ ಪ್ರಕರಣ ದಾಖಲಾಗಿದೆ.

- Advertisement -

ದೀಪ್ ಸಿದು ಈ ಹಿಂದೆ ಬಿಜೆಪಿ ಸಂಸದ ಸನ್ನಿ ಡಿಯೊಲ್ ಚುನಾವಣಾ ಪ್ರಚಾರದ ಮ್ಯಾನೇಜರ್ ಆಗಿದ್ದಲ್ಲದೆ, ಪ್ರಚಾರದಲ್ಲಿ ಕೂಡ ಭಾಗಿಯಾಗಿದ್ದನೆನ್ನಲಾಗುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ ಜೊತೆಗೆ ಈತನಿರುವ ಫೋಟೊಗಳು ನಿನ್ನೆಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಕಳೆದ ತಿಂಗಳು ದೀಪ್ ಸಿದು ರೈತ ಪ್ರತಿಭಟನೆಗೆ ಸೇರ್ಪಡೆಗೊಂಡಿದ್ದ. ಆದರೆ, ಈತನ ವರ್ತನೆಯಿಂದ ಅನುಮಾನಗೊಂಡು ರೈತರ ಮುಖಂಡರು ಈತನನ್ನು ಪ್ರತಿಭಟನೆಯಿಂದ ಹೊರಗಿಟ್ಟಿದ್ದರು ಎನ್ನಲಾಗಿದೆ.

ಆದರೆ, ನಿನ್ನೆ ರೈತರ ಪ್ರತಿಭಟನೆ ನಡುವೆ ಗುಂಪೊಂದರ ಜೊತೆಗೆ ಈತ ಕೆಂಪುಕೋಟೆ ಹತ್ತಿ, ಸಿಖ್ ಧ್ವಜ ಹಾರಿಸುವಲ್ಲಿ ಪ್ರಚೋದನೆ ನೀಡಿದ್ದಾನೆ ಎನ್ನಲಾಗುತ್ತಿದೆ. ಗಣರಾಜ್ಯೋತ್ಸವ ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಗಿಬಂದೋಬಸ್ತ್ ಹೊಂದಿರಬೇಕಾಗಿದ್ದ ಕೆಂಪುಕೋಟೆಗೆ ಉದ್ರಿಕ್ತ ಗುಂಪು ಹೇಗೆ ತಲುಪಿತು ಎಂಬುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ದೀಪ್ ಸಿದು, ಕೆಂಪುಕೋಟೆ ಮೇಲೆ ಧ್ವಜ ಹಾರಿಸಿದುದನ್ನು ಸಮರ್ಥಿಸಿಕೊಂಡಿದ್ದಾನೆ.     

Join Whatsapp