ಕೊರೆವ ಚಳಿಯಲ್ಲಿ ವಿದ್ಯಾರ್ಥಿಗಳಿಂದ ವ್ಯಾಯಾಮ | ವರದಿ ಮಾಡಿದ ಪತ್ರಕರ್ತರ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು

Prasthutha|

ಲಖನೌ : ಬೆಳಗ್ಗಿನ ಕೊರೆವ ಚಳಿಯಲ್ಲಿ ಚಳಿಗೆ ಧರಿಸುವ ಯಾವುದೇ ವಸ್ತ್ರಗಳಿಲ್ಲದೆ ವಿದ್ಯಾರ್ಥಿಗಳಿಂದ ವ್ಯಾಯಾಮ ಮಾಡಿಸಿರುವ ಬಗ್ಗೆ ವರದಿ ಮಾಡಿದ ಮೂವರು ಪತ್ರಕರ್ತರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಭಾನುವಾರ ಉತ್ತರ ಪ್ರದೇಶ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಾನ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಕೊರೆವ ಚಳಿಯಲ್ಲಿ ಯಾವುದೇ ವಸ್ತ್ರವಿಲ್ಲದೆ ವ್ಯಾಯಾಮ ಮಾಡಿಸಿದ ಕುರಿತ ವೀಡಿಯೊ ಆಧರಿಸಿ ಸ್ಥಳೀಯ ವರದಿಗಾರರು ಸುದ್ದಿ ಮಾಡಿದ್ದರು. ಈ ಕುರಿತ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಪತ್ರಕರ್ತರಾದ ಮೋಹಿತ್, ಅಮಿತ್ ಮತ್ತು ಯಾಸೀನ್ ಎಂಬವರ ಮೇಲೆ ಪ್ರಾಥಮಿಕ ಶಿಕ್ಷಣ ಅಧಿಕಾರಿ ನೀಡಿರುವ ದೂರಿನ ಆಧಾರದಲ್ಲಿ ಎಫ್ ಐಆರ್ ದಾಖಲಾಗಿದೆ.

ಆದರೆ, ವ್ಯಾಯಾಮ ಮಾಡಿಸುವ ವೇಳೆ ಮಾತ್ರ ಚಳಿಗೆ ಧರಿಸುವ ಪೋಷಾಕುಗಳನ್ನು ತೆಗೆಸಲಾಗಿತ್ತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಅವರು ಈ ಕುರಿತು ವರದಿ ಮಾಡಿದ ಪತ್ರಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ.

- Advertisement -

ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಅಜಿತ್ ಪಾಲ್ ಸಿಂಗ್, ಕಾನ್ಪುರ ಜಿಲ್ಲಾಧಿಕಾರಿ ದಿನೇಶ್ ಚಂದ್ರ ಸಹಿತ ಹಲವು ಪ್ರಮುಖರು ಭಾಗಿಯಾಗಿದ್ದರು.

“ಸ್ಥಳದಲ್ಲಿಲ್ಲದ ಕೆಲವು ಪತ್ರಕರ್ತರು ಸುದ್ದಿ ಮಾಡಿದ್ದಾರೆ. ಸ್ವೆಟರ್, ಕೋಟ್, ಪ್ಯಾಂಟ್ ಧರಿಸಿ ಯೋಗ ಮಾಡಲು ಸಾಧ್ಯವಿಲ್ಲ ಎಂಬುದು ನಿಮಗೂ ಗೊತ್ತಿದೆ. ವಿದ್ಯಾರ್ಥಿಗಳು ಚೆನ್ನಾಗಿ ಪ್ರದರ್ಶನ ನೀಡಿದ್ದಾರೆ. ನಾವೆಲ್ಲಾ ಅವರನ್ನು ಪ್ರಶಂಸಿದೆವು” ಎಂದು ಜಿಲ್ಲಾಧಿಕಾರಿ ದಿನೇಶ್ ಚಂದ್ರ ಹೇಳಿದ್ದಾರೆ.

ಆದರೆ, ದೂರು ದಾಖಲಾಗಿರುವ ಪತ್ರಕರ್ತರಲ್ಲಿ ಓರ್ವರಾದ ಅಮಿತ್ ಸಿಂಗ್ ತಮ್ಮ ವರದಿಗಾರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಂತಹ ಕಠಿಣ ಚಳಿಯ ಪರಿಸ್ಥಿತಿಯಲ್ಲಿ ಸರಿಯಾದ ಬಟ್ಟೆಗಳಿಲ್ಲದೆ ಯೋಗ ಮಾಡಿಸುವುದನ್ನು ಸಮರ್ಥಿಸಲಾಗದು, ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಅಮಿತ್ ಸಿಂಗ್ ಹೇಳಿದ್ದಾರೆ.   

Join Whatsapp