ಬೆಂಗಳೂರಿನ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಒಂದೂವರೆ ತಿಂಗಳಲ್ಲೇ ಮುಚ್ಚಲು ನಿರ್ಧಾರ!

Prasthutha|

ಬೆಂಗಳೂರು : ಕೋವಿಡ್ 19 ಚಿಕಿತ್ಸೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಅನ್ನು ಸೆ.15ರಿಂದ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕೊರೋನ ಸೋಂಕಿತರು ಸಾಂಸ್ಥಿಕ ಕ್ವಾರಂಟೈನ್ ಸೆಂಟರ್ ಗಳಿಗೆ ಹೋಗುವ ಬದಲು ಮನೆಯಲ್ಲಿಯೇ ಐಸೋಲೇಶನ್ ಆಗುತ್ತಿರುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಬಿಬಿಎಂಪಿ ತಿಳಿಸಿದೆ

ಕೇವಲ ಒಂದೂವರೆಗ ತಿಂಗಳ ಹಿಂದೆಯಷ್ಟೇ ಈ ಸೆಂಟರ್ ಉದ್ಘಾಟನೆಯಾಗಿತ್ತು. ಕೋಟ್ಯಂತರ ರೂ. ಇದಕ್ಕಾಗಿ ವಿನಿಯೋಗಿಸಲಾಗಿದೆ. ಆದರೆ, ಇದರ ಉಪಯೋಗ ಹೆಚ್ಚಾಗಿ ಬಳಕೆಯಾಗದೆ, ಈಗ ಇಷ್ಟ ಬೇಗ ಮುಚ್ಚುತ್ತಿರುವುದು ಬಹುದೊಡ್ಡ ನಷ್ಟ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

- Advertisement -

ಮುಖ್ಯಮಂತ್ರಿ ಯಡಿಯೂರಪ್ಪರೊಂದಿಗೆ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಈ ಕೋವಿಡ್ ಸೆಂಟರ್ ನಲ್ಲಿ 10,100 ಹಾಸಿಗೆಗಳ ಸಾಮರ್ಥ್ಯದ ಆರೋಗ್ಯ ಕೇಂದ್ರ ಮಾಡುವ ಉದ್ದೇಶವಿತ್ತು. ಮೊದಲ ದಿನ 5,500 ಹಾಸಿಗೆಗಳಿದ್ದ ಈ ಕೇಂದ್ರವನ್ನು ಜು.27ರಂದು ಉದ್ಘಾಟಿಸಲಾಗಿತ್ತು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಈ ಕೇಂದ್ರವನ್ನು ಉದ್ಘಾಟಿಸಿದ್ದರು.

ಇಲ್ಲಿ ರೋಗಿಗಳ ಆರೈಕೆಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು. ಬೆಡ್, ಫ್ಯಾನ್, ಬಕೆಟ್, ಮಗ್, ಡಸ್ಟ್ ಬಿನ್ ಸೇರಿದಂತೆ ಎಲ್ಲ ಸೌಲಭ್ಯಗಳಿದ್ದವು. ಕೋಟ್ಯಂತರ ರೂ. ಖರ್ಚಾಗಿರುವ ಇದರಲ್ಲೂ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇಲ್ಲಿರುವ ಹಾಸಿಗೆ, ಪೀಠೋಪಕರಣ ಮತ್ತಿತರ ವಸ್ತುಗಳನ್ನು ಸಾರ್ವಜನಿಕ ಆಸ್ಪತ್ರೆಗಳಿಗೆ, ವಿಶ್ವವಿದ್ಯಾಲಯದ ವಸತಿ ನಿಲಯಗಳಿಗೆ ಕಳುಹಿಸಲಾಗುವುದು ಎನ್ನಲಾಗಿದೆ ಎಂದು ‘ನಾನು ಗೌರಿ’ ವರದಿ ಮಾಡಿದೆ.

- Advertisement -