2 ದಿನಗಳಲ್ಲಿ ಇಬ್ಬರು ಶಾಸಕರ ರಾಜೀನಾಮೆ | ಪುದುಚೇರಿಯಲ್ಲಿ ಬಹುಮತ ಕಳೆದುಕೊಂಡ ಕಾಂಗ್ರೆಸ್ ಸರಕಾರ

Prasthutha|

ನವದೆಹಲಿ : ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವ ನಡುವೆ, ಪುದುಚೇರಿಯ ಕಾಂಗ್ರೆಸ್ ಸರಕಾರ ತನ್ನ ಬಹುಮತ ಕಳೆದುಕೊಂಡಿದೆ. ಕಳೆದ ಎರಡು ದಿನಗಳಲ್ಲಿ ಇಬ್ಬರು ಶಾಸಕರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸರಕಾರ ಬಹುಮತ ಕಳೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ.

- Advertisement -

ವಿಧಾನಸಭೆಯಲ್ಲಿ ಚುನಾಯಿತ 30 ಶಾಸಕರ ಬಲವಿದ್ದು, ಅದರಲ್ಲಿ ಕಾಂಗ್ರೆಸ್ 14, ಇಬ್ಬರು ಡಿಎಂಕೆ ಮತ್ತು ಓರ್ವ ಸ್ವತಂತ್ರ ಅಭ್ಯರ್ಥಿಯ ಬೆಂಬಲದೊಂದಿಗೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ಬಹುಮತಕ್ಕೆ 16 ಶಾಸಕರ ಅಗತ್ಯವಿದೆ. ಈಗಾಗಲೇ ಇಬ್ಬರು ಕಾಂಗ್ರೆಸ್ ಶಾಸಕರು ಜನವರಿಯಲ್ಲೇ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದಾರೆ. ಹೀಗಾಗಿ, ಮತ್ತಿಬ್ಬರು ಶಾಸಕರ ರಾಜೀನಾಮೆ ಬಳಿಕ, ಕಾಂಗ್ರೆಸ್ ನಲ್ಲಿ 10 ಶಾಸಕರು ಮಾತ್ರ ಉಳಿದಿದ್ದಾರೆ.

ಇಬ್ಬರು ಶಾಸಕರ ರಾಜೀನಾಮೆ ಬಳಿಕ, ಪ್ರತಿಪಕ್ಷ ಮತ್ತು ಸರಕಾರದ ಪರ 14 ಶಾಸಕರಿದ್ದಾರೆ. ವಿಧಾನಸಭೆಯ ಬಲ ಈಗ 28 ಆಗಿರುವುದರಿಂದ ಬಹುಮತಕ್ಕೆ 15 ಶಾಸಕರ ಅಗತ್ಯವಿದೆ. ಈಗ ಸರಕಾರದ ಬಳಿ 14 ಶಾಸಕರ ಬೆಂಬಲ ಮಾತ್ರ ಇರುವುದರಿಂದ, ಸರಕಾರ ಬಹುಮತ ಕಳೆದುಕೊಂಡಿದೆ.

- Advertisement -

ಕಳೆದ ಕೆಲವು ವಾರಗಳಲ್ಲಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಶಾಸಕರಲ್ಲಿ ಎ. ನಮಸ್ಸಿವಾಯಂ ಮತ್ತು ಇ. ದೀಪ್ಪಾಯಿಂಜನ್ ಬಿಜೆಪಿ ಸೇರಿದ್ದಾರೆ. ಸೋಮವಾರ ಮಲ್ಲಾಡಿ ಕೃಷ್ಣ ರಾವ್ ಮತ್ತು ಇಂದು ಜೋನ್ ಕುಮಾರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಲ್ಲಾಡಿ ಕೃಷ್ಣ ರಾವ್ ಕಳೆದ ವಾರವಷ್ಟೇ ಮುಖ್ಯಮಂತ್ರಿಯೊಂದಿಗೆ ದೆಹಲಿಗೆ ತೆರಳಿದ ನಿಯೋಗದಲ್ಲಿದ್ದರು. ರಾಜ್ಯಪಾಲೆ ಕಿರಣ್ ಬೇಡಿಯವರನ್ನು ಹಿಂದಕ್ಕೆ ಕರೆಸುವಂತೆ ದೆಹಲಿಗೆ ಮುಖ್ಯಮಂತ್ರಿ ನೇತೃತ್ವದ ನಿಯೋಗ ಭೇಟಿ ನೀಡಿತ್ತು.

ನಾಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಈ ನಡುವೆ, ಕಾಂಗ್ರೆಸ್ ನೊಳಗೆ ಈ ಬೆಳವಣಿಗೆಗಳು ನಡೆದಿವೆ.

Join Whatsapp