ಅನುದಾನದ ಲೆಕ್ಕ ಕೇಳಿ ಎಎಪಿಯಿಂದ ಅ. 15ಕ್ಕೆ ಪರಿಶೋಧನಾ ಯಾತ್ರೆ

Prasthutha|

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನ ಹಾಗೂ ಖರ್ಚಾಗಿರುವ ಮೊತ್ತದ ಕುರಿತು ಶಾಸಕರು ಲೆಕ್ಕ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯು ಅಕ್ಟೋಬರ್ 15ರಂದು ಪರಿಶೋಧನಾ ಯಾತ್ರೆ ಹಮ್ಮಿಕೊಂಡಿದೆ.

- Advertisement -

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಎಪಿ ಮುಖಂಡ ಪ್ರಕಾಶ್ ನಾಗರಾಜ್, “ಸರ್ಕಾರವು ಕ್ಷೇತ್ರಕ್ಕೆ ಬಿಡುಗಡೆ ಮಾಡಿರುವ ಅನುದಾನವೆಷ್ಟು ಹಾಗೂ ಅದನ್ನು ಶಾಸಕರು ಹೇಗೆ ಖರ್ಚು ಮಾಡಿದ್ದಾರೆ ಎಂದು ತಿಳಿಯುವ ಹಕ್ಕು ಜನರಿಗೆ ಇದೆ. ಶಾಸಕರಿಂದ ಈ ಮಾಹಿತಿಯನ್ನು ಪಡೆದು ಜನರಿಗೆ ತಿಳಿಸಲು ಅಕ್ಟೋಬರ್ 15ರ ಶನಿವಾರ ಬೆಳಗ್ಗೆ 10 ಗಂಟೆಗೆ ಬಸವನಗುಡಿಯ ರಾಮಕೃಷ್ಣ ಆಶ್ರಮ ಸಮೀಪದ ವಿವೇಕಾನಂದ ಪ್ರತಿಮೆ ಮುಂಭಾಗದಿಂದ ಆಮ್ ಆದ್ಮಿ ಪಾರ್ಟಿಯು ಲೆಕ್ಕ ಕೇಳಿ ಪರಿಶೋಧನಾ ಯಾತ್ರೆ ಆರಂಭವಾಗಿ ಕ್ಷೇತ್ರದಾದ್ಯಂತ ನಡೆಯಲಿದೆ ” ಎಂದು ತಿಳಿಸಿದರು.

“ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅಧಿಕಾರಾವಧಿಯಲ್ಲಿ ಚಿಕ್ಕಪೇಟೆ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಸ್ವಪಕ್ಷದ ಶಾಸಕರೆಂಬ ಕಾರಣಕ್ಕೆ ರಾಜ್ಯ ಸರ್ಕಾರವು ನೂರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೂ ಇಲ್ಲಿನ ರಸ್ತೆಗಳು, ಮೂಲಸೌಕರ್ಯಗಳು ಕಳಪೆಯಾಗಿವೆ. ಇಲ್ಲಿನ ಯಾವ ಸಮಸ್ಯೆಯನ್ನೂ ಶಾಸಕರು ಬಗೆಹರಿಸಿಲ್ಲ. ಹಾಗಾದರೆ ಆ ಹಣವು ಎಲ್ಲಿಗೆ ಹೋಯಿತು ಎಂಬ ಪ್ರಶ್ನೆಯು ಜನರನ್ನು ಕಾಡುತ್ತಿದೆ. ಮತ ನೀಡಿ ಗೆಲ್ಲಿಸಿದ ಕ್ಷೇತ್ರದ ಜನತೆಗೆ ಈ ಸಂಬಂಧ ಮಾಹಿತಿ ನೀಡುವ ಜವಾಬ್ದಾರಿಯಿಂದ ಶಾಸಕರು ನುಣುಚಿಕೊಳ್ಳಬಾರದು” ಎಂದು ಪ್ರಕಾಶ್ ನಾಗರಾಜ್ ಹೇಳಿದರು.

- Advertisement -

“ಚಿಕ್ಕಪೇಟೆ ಕ್ಷೇತ್ರದ ಹಲವು ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿವೆ. ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ಸೇವೆಗಳು ದೊರೆಯುತ್ತಿಲ್ಲ. ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಸಮಸ್ಯೆಯಿಂದ ವಾಹನ ಸವಾರರು ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ. ಶಾಸಕರು ಇವ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ವಂಚಿಸುತ್ತಿದ್ದಾರೆ” ಎಂದು ಪ್ರಕಾಶ್ ನಾಗರಾಜ್ ಹೇಳಿದರು.

Join Whatsapp