ಚದುರಿರುವ ತೃತೀಯ ರಂಗದ ಸರಕಾರದ ಕನಸು ನನಸು ಮಾಡುವ ಶಕ್ತಿ ಎಲ್ಲಿದೆ?

Prasthutha: December 20, 2021
✍️ಪೇರೂರು ಜಾರು

ಇಡೀ ಭಾರತದಲ್ಲಿ ಇಂದು ಬಿಜೆಪಿ ಏಕಮೇವಾದ್ವಿತೀಯ ಪಕ್ಷವೇನೂ ಅಲ್ಲ. ಬಿಜೆಪಿಯೇತರರನ್ನೆಲ್ಲ ಒಗ್ಗೂಡಿಸಿದರೆ ಶೇಕಡಾ 66ರಷ್ಟು ಭಾರತವು ಬೇರೆ ಪಕ್ಷಗಳವರನ್ನು ಆರಿಸಿಕೊಂಡಿದೆ. ಆದರೆ ಆ ಬೇರೆ ಪಕ್ಷಗಳವರೆನ್ನುವವರನ್ನು ಬಿಜೆಪಿಯೇತರ ಎಂದು ಕರೆಯಬಹುದು. ಹಾಗೆ ಕರೆದಾಗ ಅವರೇನೂ ಒಂದಾಗುವುದಿಲ್ಲ. ಒಂದಾಗುವ ಲಕ್ಷಣವೇ ಇಲ್ಲ ಎಂದ ಮೇಲೆ ಬಿಜೆಪಿಯೇತರರ ಬಲದ ಬಗ್ಗೆ ಮಾತನಾಡಿ ಫಲವೇನೂ ಇಲ್ಲ. ಅವು ಚದುರುವ ಬಲಗಳು ಹೊರತು ಒಗ್ಗೂಡುವ ಬಲಗಳಲ್ಲ.

ಒಂದು ಕಿರಣವು ಪಲ್ಲಟ ಮಾಧ್ಯಮದಲ್ಲಿ ಹಾದು ಹೋಗುವಾಗ ಅದರ ಬಣ್ಣಗಳು ಬೇರೆ ಬೇರೆಯಾಗಿ ಕಾಣುತ್ತವೆ. ಈ ರಾಜಕೀಯ ತುಣುಕುಗಳು ಸಹ ಹೊಂದಾಣಿಕೆಯ ವಿಷಯ ಬಂದಾಗ ಬಣ್ಣ ಬದಲಿಸುವ ಊಸರವಳ್ಳಿಗಳಂತೆ ಆಡುವುದರಿಂದ ಬಿಜೆಪಿಯೇತರ ಬಲವನ್ನು ಒಂದು ಎಂದು ಪರಿಗಣಿಸಲಾಗುವುದಿಲ್ಲ.

ಪ್ರಜಾಪ್ರಭುತ್ವದ ಲಕ್ಷಣವೇ ಬಲ ವಿಭಜನೆ

ಇತ್ತೀಚೆಗೆ ಸ್ವೀಡನ್ನಿನಲ್ಲಿ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ಅಧಿಕಾರಕ್ಕೇರಿದ ಮಗ್ದಲಿನಾ ಆಂಡರ್ಸನ್ ಅವರು 12 ಗಂಟೆಗಳಲ್ಲೇ ರಾಜೀನಾಮೆ ನೀಡಿದ್ದನ್ನು ನೀವು ನೋಡಿದಿರಿ. ಏಕೆಂದರೆ ಬಲ ವಿಭಜನೆ, ಬೆಂಬಲಿಸಿದ ಪಕ್ಷವು ಅರ್ಧ ದಿನದಲ್ಲೇ ನಿಲುವು ಬದಲಿಸಿದರೆ ಹೀಗಾಗುತ್ತದೆ. ಕರ್ನಾಟಕದಲ್ಲಿ ದೇವರಾಜ ಅರಸು, ಕುಮಾರಸ್ವಾಮಿ, ದಿವಂಗತ ಧರಂ ಸಿಂಗ್ ಮೊದಲಾದವರು ಈ ಸಮಸ್ಯೆ ಎದುರಿಸಿದ್ದಾರೆ. ಜರ್ಮನಿಯಲ್ಲಿ ಮೆರ್ಕೆಲ್ 16 ವರುಷ ಆಳಿ ಇನ್ನೊಂದು ಅವಧಿಗೆ ಚಾನ್ಸಲರ್ ಆಗಬೇಕೆಂದಿದ್ದರು. ಆದರೆ ಅವರ ಪಕ್ಷಕ್ಕೆ ಬಹುಮತ ಬಾರದ್ದರಿಂದ ಸಮ್ಮಿಶ್ರ ಸರಕಾರ ರಚನೆಯಾಗಿ ಅವರ ಪಕ್ಷದ ಬೇರೆಯವರು ಚಾನ್ಸಲರ್ ಆದರು.

ಭಾರತದಲ್ಲಿ ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ವಿ.ಪಿ.ಸಿಂಗ್ ಮೊದಲಾದವರು ಈ ಸಮಸ್ಯೆ ಎದುರಿಸಿದ್ದಾರೆ. ಮಮತಾ ಬ್ಯಾನರ್ಜಿ ನೇರ ಕಾಂಗ್ರೆಸ್ಸಿನ ಕೂಸು, ಶರದ್ ಪವಾರ್ ಕಾಂಗ್ರೆಸ್ಸಿಗ ಆಗಿ ತನ್ನ ಪಕ್ಷಕ್ಕೆ ತಾನೇ ಬಾಸು ಎಂದವರು. ಇವರಿಬ್ಬರು 2004ರಲ್ಲಿ ಕಾಂಗ್ರೆಸ್ಸನ್ನು ವಿರೋಧಿಸಿ ಹೊರಟಿದ್ದರು. ಶರದ್ ಪವಾರ್‌ ರಂತೂ ಅದಕ್ಕೆ ಮೊದಲೇ ವಿದೇಶಿ ಮಹಿಳೆ ದೇಶದ ಪ್ರಧಾನಿ ಆಗುವುದೆಂದರೇನು ಎಂದು ದೊಡ್ಡ ರಂಪ ಮಾಡಿದ್ದರು.

ಆದರೆ ಈ ಇಬ್ಬರು ನಾಯಕರು 2009ರಲ್ಲಿ ಕಾಂಗ್ರೆಸ್ ಜೊತೆಗೆ ಅದರಲ್ಲೂ ಯುಪಿಎ ಜೊತೆಗೆ ಅಚ್ಚು ಮೆಚ್ಚು ಎಂದು ಎರಡು ಮಗ್ಗುಲಲ್ಲಿ ಬಂದು ಕುಳಿತಿದ್ದರು. ಆದರೆ ಈಗ ಕಾಂಗ್ರೆಸ್ ಏನಾಗಿದೆ ಮತ್ತು ಪ್ರತಿಪಕ್ಷಗಳ ಹಲವರಿಗೆ ಏನಾಗಿದೆ ಎನ್ನುವುದು ಮುಖ್ಯ. ಕಾಂಗ್ರೆಸ್ ಕಳೆದ ಏಳೆಂಟು ವರುಷಗಳಿಂದ ಗುಜರಾತ್, ಅಸ್ಸಾಂ ಮೊದಲಾದ ಕಡೆ ಒಂದೇ ಒಂದು ಸ್ಥಾನ ಗೆಲ್ಲಲಿಲ್ಲ. ಗೆದ್ದುದನ್ನು ಮಧ್ಯಪ್ರದೇಶ, ಗೋವಾ ಮೊದಲಾದ ಕಡೆ ಕಳೆದುಕೊಂಡಿತು. ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳಲ್ಲಿ ತಳ ಕಂಡಿತು.   ಗೆಲ್ಲಬೇಕಾದಲ್ಲಿ ಎಡವಿದ್ದು ಕೇರಳದಿಂದ ಮಣಿಪುರದವರೆಗೆ ಇದೆ.

ಮೂರನೆಯ ರಂಗದ ಒಕ್ಕೂಟ ಸರಕಾರದ ಕನಸು

ಈ ಸ್ಥಿತಿಯಲ್ಲಿ ಮಹತ್ವಾಕಾಂಕ್ಷೆಯುಳ್ಳ ಪ್ರತಿಪಕ್ಷದ ನಾಯಕರು ಕಾಂಗ್ರೆಸ್ಸನ್ನು ತಾನೇ ತಾನಾಗಿ ನಾಯಕ ಎಂದು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಅದನ್ನು ಮಮತಾ ಬ್ಯಾನರ್ಜಿ ನೇರವಾಗಿ ಹೇಳಿದ್ದರೆ, ಅದಕ್ಕೆ ತಮ್ಮ ಮೌನ ಸಮ್ಮತಿಯನ್ನು ಶರದ್ ಪವಾರ್ ನೀಡಿದ್ದಾರೆ ಎನ್ನಬಹುದು. ಮಾಯಾವತಿಯವರು ಕೂಡ ಹಿಂದೆ ಇಂಥ ಒಂದು ಪ್ರಯತ್ನವನ್ನು ಮಾಡಿದ್ದಿದೆ. ಈಗ ಬಿಜೆಪಿಯ ತಂಡದ ಒತ್ತಡಕ್ಕೆ ಸಿಲುಕಿರುವುದರಿಂದ ಉತ್ತರ ಪ್ರದೇಶದಲ್ಲಿ ತನ್ನ ಬುಡ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಅವರು ಈಗ ಮಮತಾರನ್ನು ಬರಮಾಡಿಕೊಳ್ಳಲು ತಯಾರಿಲ್ಲ. ಯಾಕೆಂದರೆ ಈ ಬಾರಿ ಮಮತಾ ಬ್ಯಾನರ್ಜಿಯವರು ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಉದ್ದಕ್ಕೂ ಹೂಡುತ್ತಿದ್ದಾರೆ.

2005ರ ಸುತ್ತಿನಲ್ಲಿ ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮೊದಲಾದವರ ಹೆಸರನ್ನು ಕೂಡ ಮುಂದಿನ ಪ್ರಧಾನಿ ಹುದ್ದೆಗೆ ಏರಬಲ್ಲ ವ್ಯಕ್ತಿತ್ವ ಎಂದು ನಂಬಿದ್ದರು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಹುದ್ದೆಯ ನಿರೀಕ್ಷೆಯಲ್ಲಿದ್ದ ಲಾಲ್ ಕೃಷ್ಣ ಅಡ್ವಾಣಿ ಮೂಲೆಗೆ ಬಿದ್ದರೆ, ಮೋದಿಯವರು ಎಲ್ಲಿಂದಲೋ ಬಂದು ಪ್ರಧಾನಿಯಾದರು. ಆದ್ದರಿಂದ ರಾಜಕೀಯದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡವರು ಬಿಜೆಪಿ ವಿರೋಧವನ್ನು ಕಾಂಗ್ರೆಸ್ಸಿಗೆ ಲಾಭವಾಗುವಂತೆ ಮಾಡಲು ತಯಾರಿರುವುದಿಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಇಲ್ಲದೆ ಮೂರನೆಯ ರಂಗ ಎನಬಹುದಾದ ಇತರೆಲ್ಲ ಪಕ್ಷಗಳು ಒಗ್ಗೂಡಿದರೆ ಅವುಗಳ ಒಟ್ಟು ಮತವು ಬಿಜೆಪಿ ಅಥವಾ ಕಾಂಗ್ರೆಸ್ ಪಡೆದುದಕ್ಕಿಂತ ಹೆಚ್ಚಾಗುವುದು ಸತ್ಯ. ಆದರೆ ಇವರದು ತನ್ನನ್ನು ಬಿಟ್ಟು ಲೆಕ್ಕ ಹಾಕಿಕೊಳ್ಳುವ 12ಜನ ಬುದ್ಧಿವಂತರ ಕತೆ. ತಕ್ಕಡಿಯಿಂದ ಹಾರಲು ಸದಾ ನೆಗೆನಿಲುವಿನಲ್ಲಿ ಇರುವ ಕಪ್ಪೆಗಳಂಥ ಪಕ್ಷಗಳ ಸಂಖ್ಯೆ ಎಷ್ಟು ಎಂದು ನಿಖರವಾಗಿ ಹೇಳುವುದು ಕಷ್ಟ.

ರಾಶಿ ರಾಶಿ ಪಕ್ಷಗಳು

ಭಾರತೀಯ ಚುನಾವಣಾ ಆಯೋಗದಲ್ಲಿ ನೋಂದಣಿ ಆಗಿರುವ ಪಕ್ಷಗಳ ಸಂಖ್ಯೆ 2858 ಇವುಗಳಲ್ಲಿ 8 ಮಾತ್ರ ರಾಷ್ಟ್ರೀಯ ಪಕ್ಷಗಳು. 54 ಪಕ್ಷಗಳು ರಾಜ್ಯ ಅರ್ಥಾತ್ ಪ್ರಾದೇಶಿಕ ಪಕ್ಷಗಳು ಎನಿಸಿವೆ. ಉಳಿದ 2796 ಪಕ್ಷಗಳು ಮಾನ್ಯತೆ ಪಡೆಯದ ಪಕ್ಷಗಳು ಎನಿಸಿವೆ. ಇವುಗಳಲ್ಲಿ ಸಾವಿರಾರು ಪಕ್ಷಗಳು ಲೆಟರ್ ಹೆಡ್‌ ನಾಚೆ ಇರುವುದಿಲ್ಲ. ಇನ್ನು ನೂರಾರು ಪಕ್ಷಗಳು ಯಾರೋ ಒಬ್ಬರು ಒಂದೆರಡು ಬಾರಿ ಸ್ಪರ್ಧಿಸಿ ಸುಮ್ಮನಾದ ಪಕ್ಷವಾಗಿರುತ್ತದೆ. ಅವೆಲ್ಲವನ್ನು ಬಿಟ್ಟರೂ 8 ರಾಷ್ಟ್ರೀಯ ಪಕ್ಷಗಳಲ್ಲಿ ಕಾಂಗ್ರೆಸ್, ಬಿಜೆಪಿ ಬಿಟ್ಟರೆ 6 ಮತ್ತು 54 ಪ್ರಾದೇಶಿಕ ಪಕ್ಷಗಳು. ಒಟ್ಟು ಸೇರಿದರೆ 60. ಈ 60 ಪಕ್ಷಗಳು ಒಗ್ಗೂಡಿ ಸ್ಪರ್ಧಿಸಿದರೆ ತೃತೀಯ ರಂಗವು ಕೇಂದ್ರದಲ್ಲಿ ಒಂದು ಕೈ ನೋಡಲು ಅವಕಾಶ ಇದೆ. ಆದರೆ 60ಕ್ಕೆ ಅರಳು ಮರುಳು ಎನ್ನುವುದು ಇದಕ್ಕೂ ಹೊಂದಾಣಿಕೆಯಾದರೆ ಕಷ್ಟ.

ಇಡೀ ಭಾರತದ 4036 ವಿಧಾನ ಸಭಾ ಸ್ಥಾನಗಳಲ್ಲಿ ಬಿಜೆಪಿಯ ಬಲ ಕೇವಲ 1435 ಅಂದರೆ ಮೂರನೇ ಒಂದು ಪಾಲಿನಷ್ಟು. ಕೆಲವೇ ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ತು ಇದ್ದು, ಅವುಗಳ ಒಟ್ಟು ಸ್ಥಾನ ಸಂಖ್ಯೆ 426ರಲ್ಲಿ ಬಿಜೆಪಿಯು 117 ಸ್ಥಾನ ಮಾತ್ರ ಹೊಂದಿದೆ. ಅಂದರೆ ಮೂರನೇ ಒಂದು ಪಾಲಿಗಿಂತಲೂ ಕಡಿಮೆ. ಲೋಕಸಭೆಯಲ್ಲಿ ಬಿಜೆಪಿಗೆ ಅತುಲ ಬಲವಿದ್ದರೂ ರಾಜ್ಯಗಳಲ್ಲಿ ಅದರ ಬಲವು ಮುಂದಿನ ಚುನಾವಣೆಗೆ ಪರಿಗಣಿಸಲ್ಪಡುತ್ತದೆ. ಆದರೂ ಮೂರನೇ ರಂಗದ್ದೆನ್ನುವ ಪಕ್ಷಗಳ ಸಂಗತಿಯು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಿದೆ.

ವಂಚನೆ ಮುಚ್ಚಿ ಹೋಗಿದ್ದೇಕೆ?

ಶಿವಸೇನೆಯ ಸಂಜಯ್ ರಾವುತ್ ಅವರು ಕಾಂಗ್ರೆಸ್ ಇಲ್ಲದೆ ಬಿಜೆಪಿಯೇತರ ಸರಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿರುವುದು ಈ ಕಾರಣಕ್ಕೆ. ಮಹಾರಾಷ್ಟ್ರದ ಮೂರು ಪಕ್ಷಗಳ ಸರಕಾರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಸೇರಿವೆ ಎಂಬುದು ಬೇರೆ ಮಾತು. ಮೂರ್ನಾಲ್ಕು ದಶಕ ಒಟ್ಟಿಗಿದ್ದ ಶಿವಸೇನೆಗೆ ಬಿಜೆಪಿಯು ವಂಚಿಸಲು ನೋಡಿದ್ದು ವಿಶೇಷ ರಾಜಕೀಯ ದಾಳ ಆಗಬೇಕಿತ್ತು. ಆದರೆ ಪ್ರಚಾರ ಮಾಧ್ಯಮಗಳ ಪೂರ್ವಗ್ರಹ ನಿಲುವಿನಿಂದಾಗಿ ಅದೆಲ್ಲ ಆಗಿಲ್ಲ.

ತೃತೀಯ ರಂಗದ ಸರಕಾರ ಬರಬೇಕಾದರೆ ಪ್ರಚಾರ ಮಾಧ್ಯಮಗಳ ಬೆಂಬಲ ಮತ್ತು ಹಣಕಾಸಿನ ನೆರವು ಬೇಕೇ ಬೇಕು. ಕಾಂಗ್ರೆಸ್, ಬಿಜೆಪಿಯೇತರ ಪಕ್ಷಗಳಲ್ಲಿ ಬಿಎಸ್‌ ಪಿ, ಎಸ್‌ ಪಿಯಂಥ ಕೆಲವು ಪಕ್ಷಗಳಷ್ಟೆ ಹಣ ಬಲ ಹೊಂದಿವೆ. ಡಿಎಂಕೆಯಂಥ ಪಕ್ಷ ಸದ್ಯ ಕಾಂಗ್ರೆಸ್ ಕೂಟ ಬಿಡದು. ಒಂದು ವೇಳೆ ಬಿಟ್ಟರೂ ಡಿಎಂಕೆ ಇರುವಲ್ಲಿ ಎಡಿಎಂಕೆ ಮತ್ತೆ ಕೆಲವು ಇರಲಾರವು. ಈಗಾಗಲೇ ಎನ್‌ ಡಿಎ ಎಂಬ ಬಿಜೆಪಿ ನೇತೃತ್ವದ ಮೈತ್ರಿ ಕೂಟ ಇದೆ. ಎನ್‌ಡಿಎ ಕೂಟವು 27 ಪಕ್ಷಗಳನ್ನು ಒಳಗೊಂಡಿದೆ. ಅವುಗಳಲ್ಲಿ ಮೂರ್ನಾಲ್ಕು ಪಕ್ಷಗಳು ಗಟ್ಟಿಯಾದವು. ಅವು ಸದ್ಯ ತೃತೀಯ ರಂಗದತ್ತ ಇಲ್ಲ.

ಒಟ್ಟಾರೆ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಸರಕಾರ ಎಂಬುದು ಸದ್ಯ ಮಮತಾ ಬ್ಯಾನರ್ಜಿಯವರಿಗೆ ಮಾತ್ರ ಮಹತ್ವಾಕಾಂಕ್ಷೆಯ ವಿಷಯ. ಇತರ ಪಕ್ಷಗಳಿಗೆ ಅಲ್ಲದಿರುವವರೆಗೆ ತೃತೀಯ ರಂಗದ ಸರಕಾರದ ಮಂತ್ರವು 2022ರ ಆರಂಭದಲ್ಲಿ ನಡೆಯುವ ಉತ್ತರ ಪ್ರದೇಶ ಸಹಿತ ಐದು ರಾಜ್ಯಗಳ ಚುನಾವಣೆಗೆ ಮಾತ್ರ ಸೀಮಿತವಾಗಿರುತ್ತದೆ. ಆಮೇಲೆ ಮಂತ್ರ, ಮೈತ್ರಿ ಎಲ್ಲವೂ ಲೋಕ ಸಭಾ ಚುನಾವಣೆಯ ಹೊತ್ತಿಗೆ ಹೊಸ ರೂಪ ಪಡೆಯಲಿವೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!