ಸಚಿವೆ ಜೊಲ್ಲೆಗೆ ಸೇರಿದ ಕಟ್ಟಡದ ಮೇಲೆ ಎಂಇಎಸ್ ಕಾರ್ಯಕರ್ತರ ದಾಳಿ
Prasthutha: December 20, 2021

ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಸೇರಿದ ಕೊಲ್ಹಾಪುರದ ಬಹುಮಹಡಿ ಕಟ್ಟಡದ ಮೇಲೆ ಎಂಇಎಸ್ ಹಾಗೂ ಶಿವಸೇನಾ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಸಚಿವರಾಗಿರುವ ಶಶಿಕಲಾ ಜೊಲ್ಲೆ ಅವರಿಗೆ ಸೇರಿದ ಎಲ್ಲಾ ಕಟ್ಟಡ ಕಾಮಗಾರಿಗಳನ್ನು ಶಿವಸೇನಾ ಕಾರ್ಯಕರ್ತರು ಬಂದ್ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರ ಮಹಾನಗರದಲ್ಲಿ ಹಲವು ಕಡೆ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ಕಟ್ಟಡ ಕಾಮಗಾರಿ ಮೇಲೆ ದಾಳಿ ಮಾಡಿದ್ದಾರೆ. ಕೊಲ್ಹಾಪುರದಲ್ಲಿ ಶಶಿಕಲಾ ಜೊಲ್ಲೆ ಅವರ ಮಾಲೀಕತ್ವದಲ್ಲಿ ಬಹುಮಹಡಿಯ ಕಟ್ಟಡ ನಿರ್ಮಾಣವಾಗುತ್ತಿದೆ. ಸುಮಾರು 50 ಕೋಟಿ ಮೌಲ್ಯದ ಕಟ್ಟಡ ಇದಾಗಿದ್ದು, ನಿರ್ಮಾಣ ಹಂತದಲ್ಲಿದೆ. ಈ ಕಟ್ಟಡಕ್ಕೆ ನುಗ್ಗಿದ ಎಂಇಎಸ್ ಹಾಗೂ ಶಿವಸೇನಾ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಾನಿಗೊಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಶಶಿಕಲಾ ಜೊಲ್ಲೆ, ಕಟ್ಟಡ ಕಾಮಗಾರಿ ಪುನರ್ ಆರಂಭಿಸಲು ಶಿವಸೇನೆ ಕಾರ್ಯಕರ್ತರಲ್ಲಿ ವಿನಂತಿಸಿ ಕಟ್ಟಡ ನಿರ್ಮಾಣಕ್ಕೆ ಯಾವುದೇ ತೊಂದರೆಯನ್ನು ಕೋಡಬೇಡಿ ಎಂದು ಮನವಿ ಮಾಡಿದ್ದಾರೆ.
