ಒಂದೇ ಕ್ಷೇತ್ರದ ಟಿಕೆಟ್’ಗಾಗಿ ಸಚಿವೆ ಹಾಗೂ ಪತಿಯ ನಡುವೆ ತೀವ್ರ ಪೈಪೋಟಿ !

Prasthutha|

ಲಕ್ನೋ: ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷಾಂತ ಪರ್ವ, ಟಿಕೆಟ್’ಗಾಗಿ ಲಾಬಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ನಡುವೆ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಪಕ್ಷದಿಂದ ಹಾಲಿ ಸಚಿವೆ ಹಾಗೂ ಆಕೆಯ ಪತಿಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

- Advertisement -

ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸ್ವತಂತ್ರ ಖಾತೆ ಸಚಿವೆಯಾಗಿರುವ ಶಾಸಕಿ ಸ್ವಾತಿ ಸಿಂಗ್ ಹಾಗೂ ಆಕೆಯ ಪತಿ ಬಿಜೆಪಿ ರಾಜ್ಯ ಉಪಾಧ್ಯಕ್ಷ  ದಯಾಶಂಕರ್, ಲಕ್ನೋದ ಸರೋಜಿನಿ ನಗರ್ ಕ್ಷೇತ್ರದ ಟಿಕೆಟ್’ಗಾಗಿ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದಾರೆ. ಸರೋಜಿನಿ ನಗರ್ ಕ್ಷೇತ್ರದಲ್ಲಿ  ಫೆಬ್ರವರಿ 23ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದ್ದು, ಪತಿ-ಪತ್ನಿಯರ ನಡುವಿನ ಟಿಕೆಟ್ ಫೈಟ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

2016ರಲ್ಲಿ ಬಿಎಸ್’ಪಿ ಮುಖ್ಯಸ್ಥೆ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ದಯಾಶಂಕರ್ ಬಂಧನಕ್ಕೆ ಒಳಗಾಗಿದ್ದರು. ಬಳಿಕ ಪಕ್ಷದಿಂದ ಅವರನ್ನು ಅಮಾನತು ಮಾಡಲಾಗಿತ್ತು. ದಯಾಶಂಕರ್  ವಿರುದ್ಧ ಬಿಎಸ್’ಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ತನ್ನ ಹಾಗೂ ಕುಟುಂಬದ ವಿರುದ್ಧ ಮಾನಹಾನಿಕಾರಿ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸಿ ದಯಾಶಂಕರ್ ಪತ್ನಿ ಹಾಗೂ ಹಾಲಿ ಶಾಸಕಿ ಸ್ವಾತಿ ಸಿಂಗ್ ಪ್ರತಿದೂರು ನೀಡಿದ್ದರು. ಬಳಿಕ ಬಿಎಸ್’ಪಿ ನಾಯಕರಾದ ನಸೀಮುದ್ದೀನ್ ಸಿದ್ದೀಕಿ ಹಾಗೂ ರಾಮ್ ಅಚಲ್’ರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. 2017ರಲ್ಲಿ ನಡೆದ ಚುನಾವಣೆಯಲ್ಲಿ ಬಿಎಸ್’ಪಿ ನಾಯಕರ ಹೇಳಿಕೆಗಳನ್ನೇ ಪ್ರಧಾನ ಅಸ್ತ್ರವಾಗಿಸಿದ ದಯಾಶಂಕರ್, ಸರೋಜಿನಿ ನಗರ್ ಕ್ಷೇತ್ರದಿಂದ ತನ್ನ ಪತ್ನಿ ಸ್ವಾತಿ ಸಿಂಗ್’ರನ್ನ ಗೆಲ್ಲಿಸಿಕೊಂಡು ಬರುವಲ್ಲಿ ಸಫಲರಾಗಿದ್ದರು. ಇದೀಗ ಇದೇ ಕ್ಷೇತ್ರದ ಟಿಕೆಟ್’ಗಾಗಿ ಪತಿ-ಪತ್ನಿಯರ ನಡುವೆ ಕಿತ್ತಾಟ ಆರಂಭವಾಗಿದೆ.

Join Whatsapp