ಲಸಿಕಾ ಅಭಿಯಾನ ತೀವ್ರಗೊಳಿಸಲು ಜಿಲ್ಲಾಧಿಕಾರಿಯ ಕಟ್ಟುನಿಟ್ಟಿನ ತಾಕೀತು

Prasthutha|

ಮಂಗಳೂರು: ಜಿಲ್ಲೆಯಲ್ಲಿ ಇನ್ನೂ ಕೂಡ ಕೋವಿಡ್ ವ್ಯಾಕ್ಸಿನ್ನ ಮೊದಲ ಡೋಸ್ ಶೇ. 100ರಷ್ಟು ಪೂರ್ಣಗೊಳ್ಳದ ಬಗ್ಗೆ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಲಸಿಕೆ ನೀಡುವ ಕಾರ್ಯಕ್ಕೆ ಹೆಚ್ಚಿನ ಗಮನ ನೀಡುತ್ತಿಲ್ಲ, ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೂಲಕ ಈ ತಿಂಗಳ ಅಂತ್ಯದೊಳಗೆ ಮೊದಲ ಡೋಸ್ ಪೂರ್ಣಗೊಳಿಸುವಂತೆ ಅವರು ಸೂಚಿಸಿದ್ದಾರೆ, ಆ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಲಸಿಕಾ ಅಭಿಯಾನವನ್ನು ತೀವ್ರಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಕಟ್ಟುನಿಟ್ಟಿನ ತಾಕೀತು ಮಾಡಿದರು.

- Advertisement -

ಅವರು ಜ.19ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ವರ್ಚ್ಯುವಲ್ ಮಾಧ್ಯಮದ ಮೂಲಕ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಭೆ ನಡೆಸಿದರು.
ಮೊದಲ ಡೋಸ್ ನೀಡಿಕೆಯಲ್ಲಿ ಜಿಲ್ಲೆ ಶೇ. 100ರ ಗುರಿ ತಲುಪಲೇಬೇಕು, ಅದಕ್ಕಾಗಿ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು, ಬಿಲ್ ಕಲೆಕ್ಟರ್ ಗಳು, ನೀರುಗಂಟಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜನ ಪ್ರತಿನಿಧಿಗಳು, ಆರೋಗ್ಯ ನಿರೀಕ್ಷಕರು, ವೈದ್ಯಾಧಿಕಾರಿಗಳೊಂದಿಗೆ ಸಂಬಂಧಿಸಿದವರೆಲ್ಲರೂ ಹೆಚ್ಚು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 3-4 ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳು ಇದೆ, ಆದರೆ ಗಾಬರಿ ಪಡುವ ಅಗತ್ಯವಿಲ್ಲ, ಅದಕ್ಕೆ ನಾವು ಸಿದ್ದವಾಗಬೇಕು, ಜಿಲ್ಲೆಯ ಶೇ.96% ಜನರಿಗೆ ಲಸಿಕೆ ನೀಡಿರುವ ಕಾರಣ ಕೋವಿಡ್ ಅಥವಾ ಓಮಿಕ್ರಾನ್ ಸೋಂಕು ಕಂಡುಬಂದರೂ ಅವರಲ್ಲಿ ಆಸ್ಪತ್ರೆಗೆ ದಾಖಲಾಗುವ ಗಂಭೀರತೆ ಕಡಿಮೆ ಪ್ರಮಾಣದಲ್ಲಿರುತ್ತದೆ, ಕೋಂಆರ್ಬಿಟ್ ಗಳಿಗೂ ಲಸಿಕೆ ಅತ್ಯಂತ್ಯ ಮುಖ್ಯವಾಗಿದೆ, ವ್ಯಾಕ್ಸಿನ್ ಪಡೆಯದೇ ಬಾಕಿ ಉಳಿದ ಶೇ.4ರಷ್ಟು ಜನರೇ ಕೋವಿಡ್ ಹಾಗೂ ಅದರ ರೂಪಾಂತರಿ ಓಮಿಕ್ರಾನ್ನಿಂದ ಬಾಧೆಗೆ ಒಳಗಾಗಿ ತೊಂದರೆ ಅನುಭವಿಸುತ್ತಾರೆ, ಆದುದರಿಂದ ವೈಯಕ್ತಿಕವಾಗಿ ವ್ಯಾಕ್ಸಿನ್ ನೀಡಲು ಹೆಚ್ಚಿನ ಗಮನ ಹರಿಸಬೇಕು, ವ್ಯಾಕ್ಸಿನ್ ಪಡೆಯದವರನ್ನು ಪತ್ತೆ ಹಚ್ಚಲು ಪ್ರತಿ ಮನೆ ಮನೆಯನ್ನೂ ಪರಿಶೀಲಿಸಬೇಕು. ಜನರಿಗೆ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸಿ, ಲಸಿಕೆ ಕೊಡಿಸಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಲಸಿಕೆ ಪಡೆಯದವರನ್ನು ಗುರುತಿಸಿ ಅವರಿಗೆ ವ್ಯಾಕ್ಸಿನ್ ನೀಡುವ ಮೂಲಕ ಶೇ. 100ರಷ್ಟು ಗುರಿ ಸಾಧಿಸಬೇಕು, ಇದಕ್ಕಾಗಿ ಫೀಲ್ಡ್ಗೆ ಇಳಿದು ಕೆಲಸ ಮಾಡಬೇಕು, ಇಲ್ಲದಿದ್ದಲ್ಲೀ ನಿದ್ಯಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

- Advertisement -

ಲಸಿಕೆ ಪಡೆಯಲು ಹೆಚ್ಚಿನ ಪ್ರತಿರೋಧ ವ್ಯಕ್ತವಾಗುವೆಡೆ ತಾವೇ ಖುದ್ದಾಗಿ ಭೇಟಿ ನೀಡುವುದಾಗಿ ತಿಳಿಸಿದ ಜಿಲ್ಲಾಧಿಕಾರಿಯವರು, 15 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಯುದ್ದೋಪಾದಿಯಲ್ಲಿ ಲಸಿಕೆ ಕೊಡಿಸಬೇಕು. ಜನ ಪ್ರತಿನಿಧಿಗಳು ಈ ಅಭಿಯಾನಕ್ಕೆ ಕೈ ಜೋಡಿಸಬೇಕು, ಕ್ಷೇತ್ರದ ಅಭಿವೃದ್ಧಿಗೆ ಆಯಾ ಪ್ರದೇಶವಾರು ಸಂಪೂರ್ಣ ಲಸಿಕೆ ಕೊಡಿಸುವುದು ಸಂಬಂಧಿಸಿದ ಜನಪ್ರತಿನಿಧಿಗಳ ಜವಬ್ದಾರಿಯಾಗಿದೆ, ಆಯಾ ಪ್ರದೇಶಗಳ ಧಾರ್ಮಿಕ ಮುಖಂಡರನ್ನು ಈ ಕಾರ್ಯಕ್ಕೆ ಆಹ್ವಾನಿಸಬೇಕು. ತಾಲೂಕು ಮಟ್ಟದಲ್ಲಿ ಈ ಪ್ರಕ್ರಿಯೆಗೆ ವಾಹನಗಳ ಅಗತ್ಯವಿದ್ದರೆ ತಹಶಿಲ್ದಾರರ ಮೂಲಕ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು. ಜಿಲ್ಲೆಯ ಸಹಾಯಕ ಆಯುಕ್ತರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಚ್ಯುವಲ್ ಮಾಧ್ಯಮದ ಮೂಲಕ ಭಾಗವಹಿಸಿದ್ದರು.

Join Whatsapp