ಕೇಂದ್ರ ಸರ್ಕಾರದಿಂದ ಜನ ಸಾಮಾನ್ಯರ ಮೇಲೆ ತೆರಿಗೆ ಭಯೋತ್ಪಾದನೆ: ಯು.ಟಿ.ಖಾದರ್‌

Prasthutha|

ಬೀದರ್‌: ‘ಕೇಂದ್ರದ ಬಿಜೆಪಿ ಸರ್ಕಾರ ಜನ ಸಾಮಾನ್ಯರ ಮೇಲೆ ತೆರಿಗೆ ಭಯೋತ್ಪಾದನೆ ಮಾಡುತ್ತಿದೆ’ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್‌ ವಾಗ್ದಾಳಿ ನಡೆಸಿದ್ದಾರೆ.

- Advertisement -


ಬೀದರ್ ನ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೆರೆಯ ದೇಶಗಳಿಗೆ ಭಾರತದ ಮೂಲಕ ಪೆಟ್ರೋಲ್‌, ಡಿಸೇಲ್‌ ಪೂರೈಕೆ ಮಾಡುತ್ತಿದ್ದರೂ ಅಲ್ಲಿ ಅವುಗಳ ಬೆಲೆ ಹೆಚ್ಚಿಲ್ಲ. ಕೇಂದ್ರ ಸರ್ಕಾರ ತೈಲೋತ್ಪನ್ನಗಳ ಬೆಲೆ ಹೆಚ್ಚಿಸುವ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರುವಂತೆ ಮಾಡಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮುಜರಾಯಿ ಇಲಾಖೆ ಅಧೀನದ ದೇವಸ್ಥಾನಗಳಲ್ಲಿ ಸಂಗ್ರಹವಾಗುತ್ತಿದ್ದ ಹಣ ಮಸೀದಿಗೆ ಹೋಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಅದಕ್ಕೆ ಸ್ಪಷ್ಟೀಕರಣ ನೀಡಿ ಜನರಲ್ಲಿನ ಗೊಂದಲ ನಿವಾರಿಸಬೇಕು’ ಎಂದು ಖಾದರ್ ಒತ್ತಾಯಿಸಿದರು.


‘ದೇವಸ್ಥಾನಗಳ ಹುಂಡಿಗಳಲ್ಲಿ ದಾನದ ರೂಪದಲ್ಲಿ ಬಂದ ಆದಾಯವನ್ನು ಆಯಾ ದೇವಸ್ಥಾನಗಳ ಅಭಿವೃದ್ಧಿಗಾಗಿಯೇ ಬಳಸಲಾಗುತ್ತಿದೆ. ಶೇಕಡ 10ರಷ್ಟನ್ನು ಮಾತ್ರ ಅನ್ಯ ಕಾರ್ಯಗಳಿಗೆ ಬಳಸಲಾಗುತ್ತಿದೆ’ ಎಂದು ತಿಳಿಸಿದರು.
‘ರಾಜ್ಯ ಸರ್ಕಾರ ಹೊಸದಾಗಿ ಹಿಂದೂ ದೇವಸ್ಥಾನಗಳಿಂದ ಬಂದ ಆದಾಯವನ್ನು ಹಿಂದೂ ದೇವಸ್ಥಾನಗಳಿಗೆ, ಮುಸ್ಲಿಂ ಧಾರ್ಮಿಕ ಕೇಂದ್ರಗಳಿಂದ ಬಂದ ಹಣವನ್ನು ಮಸೀದಿಗಳಿಗೆ ಬಳಸುವಂತೆ ಆದೇಶ ಹೊರಡಿಸಿದೆ. ಅನುದಾನ ಕೊಡುವುದನ್ನು ಬಂದ್‌ ಮಾಡಿಲ್ಲ. ಆದರೆ, ಅಪಪ್ರಚಾರ ಮಾಡುವುದು ಮುಂದುವರಿದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -


ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಹೀಂ ಖಾನ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಡಿ.ಕೆ.ಸಂಜುಕುಮಾರ, ಸುಧಾಕರ ಕೊಳ್ಳೂರ ಉಪಸ್ಥಿತರಿದ್ದರು.

Join Whatsapp