ಚಾಮರಾಜನಗರ ಆಕ್ಸಿಜನ್ ದುರಂತ | ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಗಳಿಗೆ 50 ಲಕ್ಷ ಪರಿಹಾರಕ್ಕೆ SDPI ಆಗ್ರಹ

Prasthutha|

ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಗಳಿಗೆ 50 ಲಕ್ಷ ಪರಿಹಾರ ನೀಡಲು SDPI ಆಗ್ರಹಿಸಿದೆ.  

- Advertisement -

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ SDPI ರಾಜ್ಯ ಕಾರ್ಯದರ್ಶಿ ಅಬ್ರಾರ್ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೇ 2 ರ ರಾತ್ರಿ ಆಕ್ಸೀಜನ್ ಪೊರೈಕೆ ಕೊರತೆಯಿಂದ ನಡೆದ ಘಟನೆ ನಡೆದು ಈಗಾಗಲೇ 40 ದಿನಗಳು ಕಳೆದಿವೆ. SDPI ವತಿಯಿಂದ ಘಟನೆ ನಡೆದ ದಿನದಿಂದ ನಿರಂತರವಾಗಿ ಸಂತ್ರಸ್ತರ ಪರವಾಗಿ,  ನ್ಯಾಯಕ್ಕಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದು, ಇಷ್ಟಾದರೂ ಸಹ ಸರ್ಕಾರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

 ಘಟನೆಯಲ್ಲಿ ಸಾವಿಗೀಡಾಗಿದವರ ಮನೆಗಳಿಗೆ ಈಗಾಗಲೇ ನಮ್ಮ ಪಕ್ಷದ ಜಿಲ್ಲಾ ನಾಯಕರು ಭೇಟಿ ನೀಡಿ ಸಂತ್ರಸ್ತರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸಂತ್ರಸ್ತರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ. ಅವರು ಅಳಲು ಏನು. ಸರ್ಕಾರದಿಂದ ಸಂತ್ರಸ್ತರು ಏನು ಬಯಸುತ್ತಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಲಾಗಿದೆ. ಒಟ್ಟಾರೆ ಸಂತ್ರಸ್ತರ ಬೇಡಿಕೆ ಇಷ್ಟೆ.  ಪರಿಹಾರ ಮತ್ತು ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ  ಆಗಲೇ ಬೇಕು ಎಂಬುವುದಾಗಿದೆ. ಈ ನಿಟ್ಟಿನಲ್ಲೇ ಘಟನೆ ನಡೆದ ದಿನದಿಂದಲೂ SDPI ವತಿಯಿಂದ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಹೋರಾಟವನ್ನು ಮಾಡಿ ಕೊಂಡು ಬಂದಿರುತ್ತೇವೆ. ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದೆಯೂ ಸಹ ಮುಂದುವರಿಯಲಿದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

- Advertisement -

ಬೇಡಿಕೆಗಳು:-

▪️ಘಟನೆಯಲ್ಲಿ ಸಾವಿಗೀಡಾಗಿದವರ ಎಲ್ಲಾ 36 ಕುಟುಂಬಸ್ಥರಿಗೆ ತಲಾ ಒಂದು ಕುಟುಂಬಕ್ಕೆ ರೂ. 50 ಲಕ್ಷ ಪರಿಹಾರ ನೀಡ ಬೇಕು.

▪️ಘಟನೆಗೆ ಕಾರಣಕಾರ್ತರಾದ ಚಾಮರಾಜನಗರ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಅವರ ಸೇವೆಯಿಂದ ಅಮಾನತ್ತು ಮಾಡಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು.

▪️ ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿಯೂ ಸಹ ಘಟನೆಗೆ ಒಂದು ಕಾರಣ ಆಗಿದೆ. ಘಟನೆ ನಡೆದ ನಂತರ ಚಾಮರಾಜನಗರಕ್ಕೆ ಭೇಟಿ ನೀಡಿ ಆಕ್ಸಿಜನ್ ಕೊರತೆಯಿಂದ ಕೇವಲ ಮೂರು ಮಂದಿ ಸತ್ತಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ ಆರೋಗ್ಯ ಸಚಿವರು, ಸಂಸದ ಶ್ರೀನಿವಾಸ್ ಪ್ರಸಾದ್ ಹಾಗೂ ಅಸಹಾಯಕ ಶಾಸಕ ಪುಟ್ಟರಂಗ ಶೆಟ್ಟಿ ತಮ್ಮ  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕು.

ನಂತರ ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಮಜೀದ್ ಮಾತನಾಡಿ ನ್ಯಾಯಾಂಗ ತನಿಖಾ ಸಮಿತಿ ತನ್ನ ವರದಿಯಲ್ಲಿ “ಘಟನೆಗೆ ಆಕ್ಸಿಜನ್ ಕೊರತೆಯೇ ಪ್ರಮುಖ ಕಾರಣ” ಎಂದು ಉಲ್ಲೇಖಿಸಿದೆ. ಅಲ್ಲದೇ ಮುಂಚಿತವಾಗಿ ಅಗತ್ಯಕ್ಕೆ ಅನುಸಾರವಾಗಿ ಜಿಲ್ಲಾಡಳಿತ ಆಕ್ಸಿಜನ್ ತರಿಸುವುದರಲ್ಲಿ ವಿಫಲವಾಗಿದೆ. ಘಟನೆಯ ನಂತರ ದಾಖಲೆಗಳನ್ನು ತಿರುಚಲಾಗಿದೆ ಎಂದು ಗಂಭೀರವಾದ ಅಂಶವನ್ನು ವರದಿಯಲ್ಲಿ ವಿವರಿಸಲಾಗಿದೆ. ಬಹಳ ಮುಖ್ಯವಾಗಿ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಾರ್ಯ ವೈಖರಿ ಕುರಿತು ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ. ತನಿಖಾ ಸಮಿತಿ ವರದಿಯ ಗಾಂಭೀರ್ಯತೆ ಬಗ್ಗೆ ತಲೆ ಕೆಡಸಿಕೊಳ್ಳದೆ ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿರುವ ಇವರ ನಡೆ ಅತ್ಯಂತ ಅವಮಾನವೀಯ. ಈ ಸರ್ಕಾರಕ್ಕೆ  ಕಿಂಚಿತ್ತೂ ಮಾನ ಮರ್ಯಾದೆ ಇದ್ದಿದ್ದರೆ ಮೊದಲು ಸುರೇಶ್ ಕುಮಾರ್ ರವರಿಂದ ಈಗಾಗಲೇ ರಾಜೀನಾಮೆ ಪಡೆಯ ಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ರಾತ್ರಿ ಹೊತ್ತಲ್ಲಿ ವರ್ಗಾವಣೆ ಆಗಿ ಬೆಳಗಿನ ಜಾವ ವರ್ಗಾವಣೆ ರದ್ದು ಆಗುತ್ತೆ ಎಂದರೆ ಜಿಲ್ಲಾಧಿಕಾರಿಗಳ ರಾಜಕೀಯ ಪ್ರಭಾವ ಎಷ್ಟಿರಬಹುದು ಎಂದು ಮಜೀದ್ ಪ್ರಶ್ನೆ ಮಾಡಿದರು. ಬಹುಶಃ ಜಿಲ್ಲಾಧಿಕಾರಿಗಳು ಈ ಪ್ರಭಾವ ಆಕ್ಸಿಜನ್ ತರಿಸುವುದರಲ್ಲಿ ತೋರಿಸುತ್ತಿದ್ದರೆ ಈ ದುರ್ಘಟನೆಯೇ ಆಗುತ್ತಿರಲಿಲ್ಲ ಎಂದು ಮಜೀದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧ್ಯಕ್ಷರಾದ ಕಲೀಲ್ ಉಲ್ಲಾ ಮಾತನಾಡಿ ನ್ಯಾಯಾಂಗ ತನಿಖಾ ಸಮಿತಿ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತರಿಂದ ದೂರು ಪಡೆಯಲು ಮೈಸೂರಿನಲ್ಲಿ ಕಛೇರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಸಂತ್ರಸ್ತರಿಗೆ ಅನುಕೂಲಕ್ಕಿಂತ ಅನಾನೂಕೂಲ ಹೆಚ್ಚು. ಆದುದರಿಂದ ದೂರು ನೀಡಲು ಸಮಯಾವಕಾಶ ಹೆಚ್ಚು ಮಾಡಿ ದೂರು ಸಲ್ಲಿಸಲು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೇ ತನಿಖೆ ಸಮಿತಿಯ ಕಛೇರಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಸದಸ್ಯರಾದ ಮಹೇಶ್ ರವರು ಮಾತನಾಡಿ ಆಕ್ಸಿಜನ್ ದುರ್ಘಟನೆ ಸರ್ಕಾರದ ಬೇಜವಾಬ್ದಾರಿತನದಿಂದಲೇ ಆಗಿರುವುದು. ಸಾವಿಗೀಡಾಗಿದವರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸಹ ಇದ್ದು, ಸಂತ್ರಸ್ತರ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದರು.

Join Whatsapp