ಮೂವರ್ಸ್ ಆ್ಯಂಡ್ ಪ್ಯಾಕರ್ಸ್ ನಕಲಿ ವೆಬ್ ಸೈಟ್ ತೆರೆದು ವಂಚನೆ: ಇಬ್ಬರ ಬಂಧನ

Prasthutha|

ಬೆಂಗಳೂರು: ವಿಆರ್ ಎಲ್ ಸಂಸ್ಥೆ ಹೆಸರಿನಲ್ಲಿ ಮೂವರ್ಸ್ ಆ್ಯಂಡ್ ಪ್ಯಾಕರ್ಸ್ ಎಂಬ ನಕಲಿ ವೆಬ್ ಸೈಟ್ ತೆರೆದು ವಂಚಿಸುತ್ತಿದ್ದ ಇಬ್ಬರು ಖದೀಮರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಹೈದರಾಬಾದ್ ಮೂಲದ ರಾಜುರಾಮ್ ಶಿರವಿ ಅಲಿಯಾಸ್ ದಘಾಲ್ ರಾಮ್ (35) ಮತ್ತು ಗೊರಗುಂಟೆ ಪಾಳ್ಯದ ದಿನೇಶ್ ಕುಮಾರ್ ಅಲಿಯಾಸ್ ಶಿವಪ್ರಸಾದ್ (23) ಬಂಧಿತ ಆರೋಪಿಗಳಾಗಿದ್ದಾರೆ.

ವಿಆರ್ ಎಲ್ ಹೆಸರಿನಲ್ಲಿ ಮೂವರ್ಸ್ ಆ್ಯಂಡ್ ಪ್ಯಾಕರ್ಸ್ ಎಂಬ ನಕಲಿ ವೆಬ್ ಸೈಟ್ ತೆರೆದು, ಮನೆಯ ಸಾಮಾಗ್ರಿ ಮತ್ತು ವಾಹನಗಳನ್ನು ಪಡೆದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ಮೇರೆಗೆ ಇನ್ಸ್ ಪೆಕ್ಟರ್ ಸಂತೋಷ್ ರಾಮ್ ಅವರು ಸ್ಥಳಕ್ಕೆ ಪಿಎಸ್ ಐ ಕಳುಹಿಸಿ, ಆರೋಪಿಯನ್ನು ಹಿಡಿದು, ವಿಚಾರಣೆ ಮಾಡಿ, ಮೊಬೈಲ್ ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಾಗಿದೆ.

- Advertisement -

ಸ್ಥಳದಲ್ಲೇ ಆರೋಪಿ ದಿನೇಶ್ ನನ್ನು ಪೊಲೀಸರು ಬಂಧಿಸಿದ್ದು, ಹೈದರಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಹೈದರಾಬಾದ್ ಗೆ ತೆರಳಿ ಆತನನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

ಆರೋಪಿಗಳು ಪ್ಯಾಕರ್ಸ್ ಆ್ಯಂಡ್ ಮೂವರ್ಸ್ ಸಂಸ್ಥೆಗಳ ನಕಲಿ ವೆಬ್ ಸೈಟ್ ತೆರೆದು ಸಂಪರ್ಕ ಸಂಖ್ಯೆ ನೀಡುತ್ತಿದ್ದರು. ಈ ವೆಬ್ಸೈಟ್ ಗಳಲ್ಲಿ ನೀಡಲಾದ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಮಾಡುವ ಗ್ರಾಹಕರ ಬಳಿ ಮೊದಲಿಗೆ ಕಡಿಮೆ ಮೊತ್ತಕ್ಕೆ ವಸ್ತುಗಳನ್ನು ಸಾಗಿಸಲು ಒಪ್ಪುತಿದ್ದರು.

ಬಳಿಕ ಗ್ರಾಹಕರ ಮನೆಗೆ ತೆರಳಿ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ತರುತ್ತಿದ್ದರು. ಮಾರನೇ ದಿನ ದುಬಾರಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು. ಹಣ ಕೊಡಲು ನಿರಾಕರಿಸಿದರೆ, ವಸ್ತು ವಾಪಸ್ ನೀಡುವುದಿಲ್ಲ ಎಂದು ಹೆದರಿಸ್ತುತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳು ನಗರದಲ್ಲಿ ಇದೇ ರೀತಿ ಹಲವರಿಂದ ದುಬಾರಿ ಹಣ ಸುಲಿದಿರುವ ಸಾಧ್ಯತೆ ಇದ್ದು, ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಡಿಸಿಪಿ ಡಾ.ಅನೂಪ್ ಶೆಟ್ಟಿ  ತಿಳಿಸಿದ್ದಾರೆ.

Join Whatsapp