ಕೂಡಿಟ್ಟ ಹಣವನ್ನು ಕುಮಾರಸ್ವಾಮಿಗೆ ದೇಣಿಗೆಯಾಗಿ ನೀಡಿದ ಮೂವರು ವಿದ್ಯಾರ್ಥಿನಿಯರು

Prasthutha|

ನಾಗಮಂಗಲ: ಜೆಡಿಎಸ್ ‘ಪಂಚ ರತ್ನ ರಥ ಯಾತ್ರೆ’ಯ ಸಂದರ್ಭದಲ್ಲಿ ಮೂವರು ವಿದ್ಯಾರ್ಥಿನಿಯರು  ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಾವು ಕೂಡಿಟ್ಟ ಹಣವನ್ನು ದೇಣಿಗೆಯಾಗಿ ನೀಡಿ ‘ನೀವೇ ಸಿಎಂ ಆಗಬೇಕು ಅಂಕಲ್’ ಎಂದು ಶುಭ ಹಾರೈಸಿದ್ದಾರೆ.

- Advertisement -

ಸೋಮವಾರ ನಾಗಮಂಗಲದಲ್ಲಿ ಪಂಚ ರತ್ನ ರಥ ಯಾತ್ರೆಯ ಸಮಾವೇಶದಲ್ಲಿ ಮೂವರು ವಿದ್ಯಾರ್ಥಿನಿಯರು ಕುಮಾರಸ್ವಾಮಿಗೆ ದೇಣಿಗೆಯನ್ನು ನೀಡಿದ್ದಲ್ಲದೆ ಪಂಚರತ್ನ ಯೋಜನೆಯಡಿ ನಮ್ಮ ಊರಿನಲ್ಲೂ ಹೈಟೆಕ್ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ,  ಪಂಚರತ್ನ ರಥಯಾತ್ರೆ ನನಗೆ ಅನೇಕ ಮಾನವೀಯ ಮುಖಗಳನ್ನು ಪರಿಚಯಿಸುತ್ತಿದೆ. ನಾಗಮಂಗಲದಲ್ಲಿ ರಥಯಾತ್ರೆ ನಿಮಿತ್ತ ನಡೆದ ಬೃಹತ್ ಸಮಾವೇಶದಲ್ಲಿ ನನ್ನನ್ನು ಹುಡುಕಿಕೊಂಡು ಬಂದ ಈ ಮೂವರು ಹೆಣ್ಣುಮಕ್ಕಳ ಮಮತೆ, ಕಾರುಣ್ಯವನ್ನು ಕಂಡು ನನ್ನ ಹೃದಯ ಉಕ್ಕಿಬಂದಿದೆ  ಎಂದರು.

- Advertisement -

ಮೋನಿಶಾ, ಪಾವನಿ, ಶೋಭಾ ಎಂಬ ಮಕ್ಕಳು, ತಾವು ಕೂಡಿಟ್ಟುಕೊಂಡಿದ್ದ ಹಣವನ್ನು ನನಗೆ ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು ಶಿಕ್ಷಣದ ಕುರಿತ ನನ್ನ ದೃಷ್ಟಿಕೋನಕ್ಕೆ ಮತ್ತಷ್ಟು ಸ್ಪಷ್ಟತೆ ನೀಡಿತು. ಈ ಮಾತುಗಳನ್ನು ನಾನು ಶುದ್ಧ ಅಂತಃಕರಣದಿಂದ ಕೇಳಿಸಿಕೊಂಡಿದ್ದೇನೆ. ಅವರ ಬೇಡಿಕೆಯನ್ನು ತಪ್ಪದೇ ಈಡೇರಿಸುತ್ತೇನೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Join Whatsapp