ಈ ಬಾರಿಯ ಚುನಾವಣೆ ಕನ್ನಡಿಗರ ಅಸ್ಮಿತೆ, ಭವಿಷ್ಯದ ವಿಚಾರದಲ್ಲಿ ನಡೆಯುತ್ತಿದೆ: ಪ್ರಿಯಾಂಕಾ ಗಾಂಧಿ

Prasthutha|

ಟಿ.ನರಸೀಪುರ: ಈ ಬಾರಿಯ ಚುನಾವಣೆ ಕನ್ನಡಿಗರ ಅಸ್ಮಿತೆ, ಭವಿಷ್ಯದ ವಿಚಾರದಲ್ಲಿ ನಡೆಯುತ್ತಿದೆ. ಈ ಚುನಾವಣೆ ನಿಮ್ಮ ಚುನಾವಣೆ, ನಿಮ್ಮ ಮಕ್ಕಳ ಭವಿಷ್ಯ, ನಿಮ್ಮ ಪ್ರದೇಶ ಹಾಗೂ ಸಂಸ್ಕೃತಿಯ ರಕ್ಷಣೆಯ ಚುನಾವಣೆ ಎಂದು ನೀವು ಅರ್ಥಮಾಡಿಕೊಳ್ಳದಿದ್ದರೆ ದೊಡ್ಡ ಪ್ರಮಾದವೇ ಆಗುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಎಚ್ಚರಿಸಿದ್ದಾರೆ.

- Advertisement -


ಟಿ.ನರಸಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಿಯಾಂಕಾ ಗಾಂಧಿ ಮಾತನಾಡಿದರು.
ಪ್ರತಿಯೊಬ್ಬರು ನಾವು ಒಳ್ಳೆಯವರು, ಬೇರೆಯವರು ಕೆಟ್ಟವರು, ಅವರು ತಪ್ಪು ಮಾಡಿದ್ದು, ನಾವು ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ. ನೀವು ಎಲ್ಲರ ಮಾತುಗಳನ್ನು ಆಳಿಸಿ, ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ತೀರ್ಮಾನಿಸಿ ಯಾರಿಗೆ ಮತ ಹಾಕಬೇಕು ಎಂದು ಹೇಗೆ ತೀರ್ಮಾನಿಸುತ್ತೀರಿ? ಇದಕ್ಕೆ ನಾವು ಕೆಲವು ಮೂಲಭೂತ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯ ಎಂದು ಹೇಳಿದರು.


ನಾಲ್ಕು ವರ್ಷಗಳ ಹಿಂದೆ ರಚನೆಯಾದ ಈ ಸರ್ಕಾರ ಜನರ ಬೆಂಬಲದಿಂದ ರೂಪಿತವಾದ ಸರ್ಕಾರವಲ್ಲ. ಕಳೆದ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಆಯ್ಕೆ ಮಾಡಿದ್ದಿರಿ. ಆದರೆ ಬಿಜೆಪಿಯು ಬೇರೆ ಪಕ್ಷಗಳ ಶಾಸಕರನ್ನು ಹಣ ಕೊಟ್ಟು ಖರೀದಿ ಮಾಡಿ ಈ ಸರ್ಕಾರವನ್ನು ರಚಿಸಿದೆ. ಆರಂಭದಿಂದಲೇ ನಿಮ್ಮ ಭರವಸೆ ಮುರಿದಿದ್ದಾರೆ. ಆರಂಭದಿಂದಲೇ ಇವರು ದ್ರೋಹ, ದುರಾಸೆಯ ಆಧಾರದ ಮೇಲೆ ಸರ್ಕಾರ ರಚನೆಯಾಗಿದ್ದು, ಇವುಗಳಿಂದಲೇ ಸರ್ಕಾರ ಬೀಳಲಿದೆ. ಇದರ ಪರಿಣಆಮವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನಗಳು ಕಡಿಮೆಯಾಗುತ್ತಾ ಬಂದಿವೆ ಎಂದು ಪ್ರಿಯಾಂಕಾ ಹೇಳಿದರು.

- Advertisement -


ಕರ್ನಾಟಕದ ಧ್ವಜ ನಮ್ಮ ಹೆಮ್ಮೆಯ ಪ್ರತೀಕವಾಗಿದ್ದು, ಸರ್ಕಾರ ಇದನ್ನು ಅಧಿಕೃತಗೊಳಿಸಲಿಲ್ಲ. ಪದೇ ಪದೆ ನಾಯಕರ ಬದಲಾವಣೆ, ಮಂತ್ರಿ ಮಂಡಲ ವಿಸ್ತರಣೆ ಮಾಡಲಿಲ್ಲ. ಸರ್ಕಾರ ಯಂತ್ರಗಳು ದುರ್ಬಲವಾಯಿತು. ಬಹಳ ಬೇಸರದ ಸಂಗತಿ ಎಂದರೆ 40% ಸರ್ಕಾರ ರಾಜ್ಯದ ಜನರನ್ನು ಲೂಟಿ ಮಾಡಿದೆ. ನಾಚಿಕೆ ಬಿಟ್ಟು ನಿರ್ಲಜ್ಜತೆಯಿಂದ ರಾಜ್ಯ ಲೂಟಿ ಮಾಡಿದೆ. ಗುತ್ತಿಗೆದಾರರು ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡರು. ಗುತ್ತಿಗೆದಾರರ ಸಂಘ, ಶಿಕ್ಷಣ ಸಂಸ್ಥೆಗಳ ಸಂಘಗಳು ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನ, ಪರಿಹಾರ ಸಿಗಲೇ ಇಲ್ಲ. ಪೊಲೀಸ್, ಇಂಜಿನಿಯರ್ ಸೇರಿದಂತೆ ನೇಮಕಾತಿ ಅಕ್ರಮಗಳು ನಡೆದರೂ ಯಾವುದೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿಲ್ಲ. ಕಾರಣ ಇವರೆಲ್ಲರೂ ಬಿಜೆಪಿ ಜತೆ ಕೈ ಜೋಡಿಸಿದ್ದರು. ಬಿಜೆಪಿ ಶಾಸಕರ ಪುತ್ರನ ಬಳಿ 8 ಕೋಟಿ ಲಂಚದ ಹಣ ಸಿಕ್ಕಿ ಬಿದ್ದ ವಿಚಾರ ನಿಮಗೆಲ್ಲ ಗೊತ್ತಿದೆ. ಆತನ ವಿಚಾರಣೆ ನಡೆಸುವ ಬದಲು, ಶಾಸಕರು ತಲೆ ಮರೆಸಿಕೊಂಡರು. ಈ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನೂ ಬಿಡಲಿಲ್ಲ, ಮಕ್ಕಳು ತಿನ್ನುವ ಮೊಟ್ಟೆಯನ್ನು ಬಿಡಲಿಲ್ಲ, ಎಲ್ಲದರಲ್ಲೂ ಲೂಟಿ ಮಾಡಿದರು. ಈ ಸರ್ಕಾರ 40% ಕಮಿಷನ್ ಮೂಲಕ 1.50 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ಈ ಹಣದಲ್ಲಿ ಜನರಿಗೆ ಎಷ್ಟು ಅನುಕೂಲ ಮಾಡಿಕೊಬಹುದಾಗಿತ್ತು ಎಂಬ ಅಂದಾಜು ಇದೆಯಾ? 2025 ಕಿ.ಮೀ ಹೆದ್ದಾರಿ, 30 ಸಾವಿರ ಸ್ಮಾರ್ಟ್ ತರಗತಿಗಳ ನಿರ್ಮಾಣ ಮಾಡಬಹುದಾಗಿತ್ತು. 750 ಕಿ.ಮೀ ಮೆಟ್ರೋ ಲೈನ್ ನಿರ್ಮಾಣ ಮಾಡಬಹುದಿತ್ತು. ಇದರಿಂದ 30 ಲಕ್ಷ ಮನೆಗಳನ್ನು ಬಡವರಿಗಾಗಿ ಕಟ್ಟಬಹುದಾಗಿತ್ತು. ನಿಮ್ಮಲ್ಲಿ ಎಷ್ಟು ಜನರಿಗೆ ಸರ್ಕಾರಿ ನೌಕರಿ ಸಿಕ್ಕಿದೆ ಎಂದು ಅವರು ಪ್ರಶ್ನಿಸಿದರು.


ರಾಜ್ಯ ಸರ್ಕಾರದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಖಾಲಿ ಇದ್ದರೂ ನೀವು ನಿರುದ್ಯೋಗಿಗಳಿದ್ದು, ಇದರ ಅರ್ಥವೇನು? ನಿಮ್ಮ ಉದ್ಯೋಗಗಳನ್ನು ನೀಡುತ್ತಿಲ್ಲ. ಸರ್ಕಾರ ಎಷ್ಟು ಬರವಸೆಗಳನ್ನು ನೀಡಿದ್ದರೋ ಅಷ್ಟನ್ನು ಮುರಿದಿದ್ದಾರೆ. ಬಿಜೆಪಿ ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಎಂಬ ಪ್ರಣಾಳಿಕೆ ಕೊಟ್ಟಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ ಎಂದು ಕೇಳುತ್ತಿದೆ. ನಾವು ಎಷ್ಟೇ ಪ್ರಶ್ನೆ ಕೇಳಿದರೂ ಬಿಜೆಪಿ ಸರ್ಕಾರ ಯಾವುದಕ್ಕೂ ಉತ್ತರ ನೀಡುತ್ತಿಲ್ಲ. ಬಿಜೆಪಿಯವರು ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದರೂ ಅದರಲ್ಲೂ ಮೋಸ ಮಾಡಿದೆ. ಕೇಂದ್ರದಲ್ಲಿ ಇವರದೇ ಸರ್ಕಾರವಿದೆ. ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು, ಆದರೆ ಅದನ್ನೂ ಈ ಸರ್ಕಾರ ಮಾಡುತ್ತಿಲ್ಲ. ನಿಮ್ಮ ಮುಂದೆ ಬಂದು ಅವರು ಮೀಸಲಾತಿ ಹೆಚ್ಚಳದ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ಮೀಸಲಾತಿ ಹೆಚ್ಚಳಕ್ಕೆ ಅಗತ್ಯ ಕೆಲಸ ಮಾಡಿಯೇ ಇಲ್ಲ ಎಂದು ಆರೋಪಿಸಿದರು.


ನಂದಿನಿ ವಿಚಾರವಾಗಿ ಮಾತನಾಡುವುದಾದರೆ, ನಂದಿನಿ ಕರ್ನಾಟಕದ ಹೆಮ್ಮೆಯಾಗಿದ್ದು, ಈ ಸಹಕಾರಿ ಸಂಸ್ಥೆಯನ್ನು ನಾಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಮೊದಲು 99 ಲಕ್ಷ ಲೀಟರ್ ಹಾಲು ರಾಜ್ಯದಲ್ಲಿ ಉತ್ಪಾದನೆ ಆಗುತ್ತಿತ್ತು. ಆದರೆ ಇಂದು 70 ಲಕ್ಷ ಲವೀಟರ್ ಮಾತ್ರ ಹಾಲು ಉತ್ಪಾದನೆಯಾಗುತ್ತಿದೆ. ಉದ್ದೇಶಪೂರ್ವಕವಾಗಿ ಹಾಲಿನ ಉತ್ಪಾದನೆ ಕಡಿಮೆ ಮಾಡಿದ್ದಾರೆ. ಗುಜರಾತಿನ ಸಹಕಾರಿ ಸಂಸ್ಥೆ ಅಮೂಲ ಅನ್ನು ರಾಜ್ಯಕ್ಕೆ ಪರಿಚಯಿಸುವ ಷಡ್ಯಂತ್ರ ರೂಪಿಸಿದ್ದಾರೆ. ನಿಮಗೆ ನೆನಪಿದ್ದರೆ, ಕಾಂಗ್ರೆಸ್ ಅವಧಿಯಲ್ಲಿ ಅತಿ ಹೆಚ್ಚಿನ ಹಾಲು ಉತ್ಪಾದನೆಯಾಗಿ ಶಾಲಾ ಮಕ್ಕಳಿಗೆ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆಯನ್ನು ಪರಿಚಯಿಸಲಾಯಿತು. ಕ್ಷೀರಧಾರೆ ಕಾರ್ಯಕ್ರಮದ ಮೂಲಕ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದರಿಂದ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿತ್ತು. ನಿಮ್ಮ ಹೆಮ್ಮೆಯ ಕರ್ನಾಟಕ ರಾಜ್ಯವನ್ನು ಬಿಜೆಪಿ ಯಾವ ರೀತಿ ಲೂಟಿ ಮಾಡಿದ್ದಾರೆ ಎಂದು ನಿಮಗೆ ಗೊತ್ತಿರಲಿ ಎಂದು ಎಚ್ಚರಿಸಿದರು.


ಬಿಜೆಪಿ ನಾಯಕರು ಇಲ್ಲಿಗೆ ಬಂದು ವಿಚಿತ್ರವಾಗಿ ಮಾತನಾಡುತ್ತಿದ್ದಾರೆ, ಪ್ರಧಾನಿಗಳು ಬಂದು ವಿರೋಧ ಪಕ್ಷಗಳು ನನ್ನ ಸಮಾಧಿ ತೋಡಲು ಬಯಸುತ್ತಿವೆ ಎಂದು ಹೇಳಿದ್ದಾರೆ. ಇದು ಎಂತಹ ಮಾತುಗಳು. ಈ ದೇಶದಲ್ಲಿ ಯಾರೊಬ್ಬರೂ ಈ ರೀತಿ ಆಲೋಚನೆ ಮಾಡುವುದಿಲ್ಲ. ನಮ್ಮ ಪ್ರಧಾನಿಗಳ ಆರೋಗ್ಯ ಉತ್ತಮವಾಗಿರಲಿ ಎಂದು ನಾವು ಆಶೀಸುತ್ತೇವೆ. ಆದರೆ ಇದು ಚುನಾವಣೆಯ ವಿಚಾರವೇ? ಇಂತಹ ವಿಚಿತ್ರ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಬದಲು, ನಿರುದ್ಯೋಗ, ಬೆಲೆ ಏರಿಕೆಯಂತಹ ಪ್ರಮುಖ ವಿಚಾರಗಳ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಈಚುನಾವಣೆಯಲ್ಲಿ ನಿಮ್ಮ ಸಾಧನೆಗಳ ವಿಚಾರಗಳ ಮೇಲೆ ನೀವು ಹೆಚ್ಚು ಮಾತನಾಡಬೇಕು. ಇದು ನಿಮ್ಮ ಜವಾಬ್ದಾರಿ. ಈ ಚುನಾವಣೆ ಮೋದಿಯವರ ಬಗ್ಗೆ ಅಲ್ಲ, ಇದು ಯಾವುದೇ ರಾಜಕೀಯ ನಾಯಕರ ಬಗ್ಗೆ ಅಲ್ಲ. ಈ ಚುನಾವಣೆ ಕರ್ನಾಟಕ ರಾಜ್ಯದ ವಿಚಾರವಾಗಿದೆ. ಕನ್ನಡಿಗರ ಅಸ್ಮಿತೆ, ಭವಿಷ್ಯದ ಬಗ್ಗೆ ಈ ಚುನಾವಣೆ ನಡೆಯುತ್ತಿದೆ. ನಿಮಗೆ ಎಲ್ಲಾ ರೀತಿಯ ಸಹಾಯ ಮಾಡಬೇಕಿದ್ದ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಪ್ರಿಯಾಂಕಾ ಟೀಕಾಪ್ರಹಾರ ನಡೆಸಿದರು.
ಈ ಚುನಾವಣೆ ನಿಮ್ಮ ಚುನಾವಣೆ, ನಿಮ್ಮ ಮಕ್ಕಳ ಭವಿಷ್ಯ, ನಿಮ್ಮ ಪ್ರದೇಶ ಹಾಗೂ ಸಂಸ್ಕೃತಿಯ ರಕ್ಷಣೆಯ ಚುನಾವಣೆ ಎಂದು ನೀವು ಅರ್ಥಮಾಡಿಕೊಳ್ಳದಿದ್ದರೆ ದೊಡ್ಡ ಪ್ರಮಾದವೇ ಆಗುತ್ತದೆ. ನಾನು ನಿಮ್ಮ ಪರಿಸ್ಥಿತಿ ಬಗ್ಗೆ ಹೇಳಿದ್ದನ್ನು ನಂಬದಿದ್ದರೆ, ನಿಮ್ಮ ಅನುಭವದ ಆಧಾರದ ಮೇಲೆ ನೀವು ಆಲೋಚನೆ ಮಾಡಿ. ಈ ಸರ್ಕಾರ ಬಂದ ನಂತರ ನಿಮ್ಮ ಜೀವನದಲ್ಲಿ ಬದಲಾವಣೆಯಾಗಿದೆಯೇ ಇಲ್ಲವೇ ಎಂದು ಆಲೋಚಿಸಿ. ನಿಮ್ಮ ಜೀವನದಲ್ಲಿ ಸುಧಾರಣೆ ಬಂದಿದೆಯಾ? ಬೆಲೆ ಏರಿಕೆಯಾಗಿದೆಯೋ ಇಲ್ಲವೋ? ಬದುಕಿನಲ್ಲಿ ಕಷ್ಟಗಳು ಹೆಚ್ಚಾಗಿವೆಯೋ ಇಲ್ಲವೋ? ನಿಮ್ಮ ಈ ಅನುಭವಗಳ ಆಧಾರದ ಮೇಲೆ ಆಲೋಚಿಸಿ ಮತ ಚಲಾಯಿಸಿ. ಲೂಟಿ ಮಾಡುವ ಸರ್ಕಾರ ಕಿತ್ತೊಗೆಯಿರಿ. ನಿಮ್ಮ ಹಿತ ಕಾಯುವ ಸರ್ಕಾರ ಆಧಿಕಾರಕ್ಕೆ ತನ್ನಿ. ಕರ್ನಾಟಕದ ಸಂಸ್ಕೃತಿ ಅರ್ಥಮಾಡಿಕೊಂಡು ನಿಮ್ಮ ಹೆಮ್ಮೆ ಹೆಚ್ಚಿಸುವ ಸರ್ಕಾರ ತನ್ನಿ ಎಂದು ಕರೆ ನೀಡಿದರು.

Join Whatsapp