ವಾರಾಂತ್ಯ ಕರ್ಫ್ಯೂ ಅವೈಜ್ಞಾನಿಕ, ರಾಜಕೀಯ ಪ್ರೇರಿತ: ಎಸ್ ಡಿಪಿಐ ಟೀಕೆ

Prasthutha|

ಮಂಗಳೂರು: ರಾಜ್ಯ ಸರ್ಕಾರವು ಕೊರೋನಾ ರೂಪಾಂತರಿ ವೈರಸ್ ಓಮಿಕ್ರಾನ್ ನೆಪದಲ್ಲಿ ವಾರಾಂತ್ಯ ಕರ್ಫ್ಯೂ ಹಾಗೂ ಕಟ್ಟುನಿಟ್ಟಿನ ಕ್ರಮ ಅವೈಜ್ಞಾನಿಕ ಮತ್ತು ರಾಜಕೀಯ ಪ್ರೇರಿತವಾಗಿದೆ. ಆಡಳಿತ ಪಕ್ಷವು ರಾಜಕೀಯದಾಟಕ್ಕಾಗಿ ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಆರೋಪಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಎರಡು ವರ್ಷಗಳಲ್ಲಿ ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಮಾಡಿದ ಲಾಕ್ ಡೌನ್ನಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಹಲವಾರು ಕುಟುಂಬಗಳ ಆಧಾರಸ್ತಂಭವಾಗಿದ್ದವರು ಕೊರೋನಾದಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜನಸಾಮಾನ್ಯರ ಜೀವನೋಪಾಯ ಉತ್ತೇಜಿಸಲು ಯಾವುದೇ ರೀತಿಯ ಪರಿಹಾರವನ್ನಾಗಲಿ, ವಿಶೇಷ ಪ್ಯಾಕೇಜ್ನ್ನಾಗಲಿ ಸಮರ್ಪಕವಾಗಿ ಘೋಷಿಸದೆ ಜನಸಾಮಾನ್ಯರ ಕನಸುಗಳನ್ನು ಭಗ್ನಗೊಳಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ತನ್ನ ಆಡಳಿತ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಓಮಿಕ್ರಾನ್ ಹೆಸರಿನಲ್ಲಿ ಮತ್ತೆ ವಾರಾಂತ್ಯ ಕರ್ಫ್ಯೂ ಹಾಗೂ ಕಟ್ಟುನಿಟ್ಟಿನ ಕ್ರಮದ ಹೆಸರಿನಲ್ಲಿ ಮತ್ತೊಮ್ಮೆ ಜನಸಾಮಾನ್ಯರ ಜನಜೀವನದ ಮೇಲೆ ಸವಾರಿ ಮಾಡಲು ಹೊರಟಿದೆ. ಬೆಂಗಳೂರು ಮಹಾನಗರದಲ್ಲಿ ಓಮಿಕ್ರಾನ್ ಪ್ರಕರಣ ಹೆಚ್ಚಳವಾಗುತ್ತಿರುವ ನೆಪದಲ್ಲಿ ಇಡೀ ರಾಜ್ಯವನ್ನೇ ಲಾಕ್ ಮಾಡಲು ಹೊರಟಿರುವುದು ರಾಜಕೀಯ ಪ್ರೇರಿತವಾಗಿದೆ. ಸರಕಾರದ ಸಭೆ ಸಮಾರಂಭಗಳು ಎಗ್ಗಿಲ್ಲದೇ ನಡೆಯಲು ಅವಕಾಶ ಮಾಡಿಕೊಟ್ಟುಕೊಂಡು ಕೌಟುಂಬಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಓಮಿಕ್ರಾನ್ ಹೆಸರಿನಲ್ಲಿ ನಿರ್ಬಂಧಿಸಲಾಗುತ್ತಿದೆ. ವಾರಾಂತ್ಯ ಕರ್ಫ್ಯೂ ಗೊಂದಲದ ಗೂಡಾಗಿದ್ದು ಕೂಡಲೇ ಸರಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Join Whatsapp