ಎಎಂಯು ಹಿಂಸಾಚಾರ ಪ್ರಕರಣ | ‘ಪ್ರತಿಭಾವಂತ’ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿಗೆ ಜಾಮೀನು

Prasthutha|

►► ಸಿಎಎ ವಿರೋಧಿ ಹೋರಾಟಗಾರ, ಆಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿಯ ಬಿಡುಗಡೆಗೆ ವಿಶೇಷ ಕಾರಣ ನೀಡಿದ ನ್ಯಾಯಾಧೀಶರು


ನವದೆಹಲಿ : ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ(ಎಎಂಯು)ದ ವಿದ್ಯಾರ್ಥಿ ಶರ್ಜೀಲ್ ಉಸ್ಮಾನಿ ಅವರಿಗೆ ಆಲಿಗಢ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕಳೆದ ವರ್ಷ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿದ್ದ ಶರ್ಜೀಲ್, ವಿವಿಯಲ್ಲಿ ನಡೆದಿದ್ದ ಗಲಭೆ ಆರೋಪಗಳಿಗಾಗಿ ಬಂಧಿಸಲ್ಪಟ್ಟಿದ್ದರು. ತಮ್ಮ ಶೈಕ್ಷಣಿಕ ದಾಖಲೆಗಳು ಮತ್ತು ಪ್ರಕರಣದ ಇತರ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವುದನ್ನು ಪರಿಗಣಿಸಿ, ಕೋರ್ಟ್ ಶರ್ಜೀಲ್ ಗೆ ಜಾಮೀನು ಮಂಜೂರು ಮಾಡಿದೆ.
ಎಎಂಯು ಕ್ಯಾಂಪಸ್ ನಲ್ಲಿ ಕಳೆದ ಡಿಸೆಂಬರ್ 15ರಂದು ಸಿಎಎ ವಿರೋಧಿ ಪ್ರತಿಭಟನೆಯ ಬಳಿಕ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿ ಶರ್ಜೀಲ್ ಅವರನ್ನು ಆಲಿಗಢ ಪೊಲೀಸರು ಬಂಧಿಸಿದ್ದರು.

- Advertisement -

“ಆರೋಪಿಯ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಿದರೆ, ಅವರು ಪ್ರತಿಭಾವಂತ ವಿದ್ಯಾರ್ಥಿ ಎಂಬುದು ದೃಢವಾಗುತ್ತದೆ. ಅವರು ಹಲವಾರು ಲೇಖನಗಳನ್ನು ಬರೆದಿದ್ದಾರೆ ಮತ್ತು ಅದು ದಾಖಲೆಗಳಲ್ಲಿ ಲಭ್ಯವಿದೆ. ಅವರು ಈಗ ಜೈಲಿನಲ್ಲಿದ್ದಾರೆ. ಇತರ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಹೀಗಾಗಿ ಆರೋಪಿಯನ್ನು ಇನ್ನೂ ಜೈಲಿನಲ್ಲಿರಿಸಿರುವುದರಿಂದ ಯಾವುದೇ ಉದ್ದೇಶ ಸಾಧಿಸಿದಂತಾಗುವುದಿಲ್ಲ. ಆರೋಪಿಯು ಜೈಲಿನಲ್ಲಿ ಕಳೆದಿರುವ ಅವಧಿ ಮತ್ತು ಅವರ ಶೈಕ್ಷಣಿಕ ದಾಖಲೆಗಳನ್ನು ಪರಿಗಣಿಸಿ, ಆರೋಪಿಗೆ ಜಾಮೀನು ಮಂಜೂರು ಮಾಡಲು ಅರ್ಹವಾದ ಪ್ರಕರಣ ಇದಾಗಿದೆ’’ ಎಂದು ಆಲಿಗಢ ಸೆಶನ್ಸ್ ಕೋರ್ಟ್ ನ ಎಸ್ ಸಿ/ಎಸ್ ಟಿ ಕಾಯ್ದೆ ವಿಶೇಷ ನ್ಯಾಯಾಧೀಶ ನರೇಂದ್ರ ಸಿಂಗ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

50,000 ರೂ. ವೈಯಕ್ತಿಕ ಬಾಂಡ್ ಆಧಾರಿತ ಜಾಮೀನು ಮಂಜೂರಾಗಿದೆ. ಆರೋಪಿಯು ಯಾವುದೇ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಬಾರದು ಮತ್ತು ಅಗತ್ಯವಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎಂದು ಕೊರ್ಟ್ ನಿರ್ದೇಶಿಸಿದೆ. ಶರ್ಜೀಲ್ ಜು.10ರಂದು ಆಝಂಗಢದ ಎಟಿಎಸ್ ನಿಂದ ಬಂಧಿಸಲ್ಪಟ್ಟಿದ್ದರು.

- Advertisement -