ಶೇ.100 ಮತದಾನದ ದಾಖಲೆ ಬರೆದ ಪಶ್ಚಿಮ ಘಟ್ಟದ ವ್ಯಾಪ್ತಿಯ ಬಾಂಜಾರುಮಲೆ ಮತಗಟ್ಟೆ

Prasthutha|

ಮಂಗಳೂರು: ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನ ಮಾಡುವ ಮೂಲಕ ನಕ್ಸಲ್ ಪೀಡಿತ ಎಂಬ ಹಣೆಪಟ್ಟಿ ಹೊತ್ತ ಪಶ್ಚಿಮ ಘಟ್ಟದ ವ್ಯಾಪ್ತಿಯ ಬಾಂಜಾರುಮಲೆ ಮತಗಟ್ಟೆ ದಾಖಲೆ ನಿರ್ಮಿಸಿದೆ.

- Advertisement -

ಬಾಂಜಾರುಮಲೆಯ ಮತಗಟ್ಟೆ ಸಂಖ್ಯೆ 86ರ ಸಮುದಾಯ ಭವನದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ. 2019 ರಲ್ಲಿ ಈ ಮತಗಟ್ಟೆಯಲ್ಲಿ ಒಬ್ಬರ ಗೈರಿನಿಂದಾಗಿ ಶೇ.99 ಮತದಾನವಾಗಿತ್ತು. ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕಿನ ಸ್ವೀಪ್ ಸಮಿತಿ ಅಧ್ಯಕ್ಷ ವೈಜಣ್ಣ ಹಾಗೂ ತಂಡ ಶೇ.100 ಮತದಾನ ಮಾಡುವಂತೆ ಊರ ಜನರಲ್ಲಿ ಜಾಗೃತಿ ಮೂಡಿಸಿದ್ದರ ಪರಿಣಾಮ ಮೊಬೈಲ್ ನೆಟ್ ವರ್ಕ್, ರಸ್ತೆ, ಮೂಲಸೌಕರ್ಯವೇ ಇಲ್ಲದ ಪುಟ್ಟ ಗ್ರಾಮ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

ಯಾವುದೇ ಮತಗಟ್ಟೆಯಲ್ಲಿ ಶೇ.100 ಮತದಾನವಾದಲ್ಲಿ ವಿಶೇಷ ಬಹುಮಾನವನ್ನು ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಘೋಷಿಸಿದ್ದರು. ಶೇ.100 ಮತದಾನದ ಹಿನ್ನೆಲೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವೈಜಣ್ಣ, ಸಿಬ್ಬಂದಿ ಸೇರಿದಂತೆ ಊರಿನ ಮಂದಿಗೆ ಹೂವುಗಳನ್ನು ನೀಡಿ ಅವರು ಅಭಿನಂದಿಸಿದ್ದಾರೆ.

- Advertisement -

ಮತದಾನ ಸಲುವಾಗಿ ಬಾಂಜಾರುಮಲೆಯ 40 ಕುಟುಂಬದ 111 ಮತದಾರರು ಒಂದೆಡೆ ಸೇರಿ ಮತದಾನವನ್ನು ಹಬ್ಬದ ರೀತಿ ಆಚರಿಸಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp