ಶಿರವಸ್ತ್ರ ಧರಿಸದಿರಲು ಒಪ್ಪದ್ದಕ್ಕೆ ಪತ್ರಿಕೋದ್ಯಮ ವಿದ್ಯಾರ್ಥಿನಿಗೆ ಮಾಧ್ಯಮದಲ್ಲಿ ಅವಕಾಶ ನಿರಾಕರಣೆ!

Prasthutha: September 4, 2020

ನವದೆಹಲಿ : ಶಿರವಸ್ತ್ರ (ಹಿಜಬ್) ಧರಿಸುವ ಕಾರಣಕ್ಕಾಗಿ ತಮ್ಮನ್ನು ಸುದ್ದಿ ನಿರೂಪಕಿ(ಆ್ಯಂಕರ್)ಯಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿನಿಯೋರ್ವರಿಗೆ ದೆಹಲಿ ಮೂಲದ ಹಿಂದಿ ಚಾನೆಲ್ ಒಂದು ತಿಳಿಸಿರುವ ಬಗ್ಗೆ ‘ಮಕ್ತೂಬ್ ಮೀಡಿಯಾ’ ವರದಿ ಮಾಡಿದೆ. 24ರ ಹರೆಯದ ಪತ್ರಿಕೋದ್ಯಮ ಅಂತಿಮ ವರ್ಷದ ವಿದ್ಯಾರ್ಥಿನಿ ಘಝಲ ಅಹ್ಮದ್ ಎಂಬ ಯುವತಿಗೆ ಈ ರೀತಿ ಹೇಳಲಾಗಿದೆ.ಟೆಲಿಫೋನ್ ಮೂಲಕ ಸಂದರ್ಶನದ ಮೊದಲ ಹಂತ ಯಶಸ್ವಿಯಾಗಿ ನಡೆದಿತ್ತು. ನಂತರ ತಾವು ಶಿರವಸ್ತ್ರ ಧರಿಸಕೂಡದು, ಶಿರವಸ್ತ್ರ ಧರಿಸಿದರೆ ತಮಗೆ ಉದ್ಯೋಗ ಸಿಗುವುದಿಲ್ಲ ಎಂದು ಚಾನೆಲ್ ನವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಹಿಂದಿ ನ್ಯೂಸ್ ಪೋರ್ಟಲ್ ಒಂದಕ್ಕೆ ನ್ಯೂಸ್ ಆ್ಯಂಕರ್ ಹುದ್ದೆಗೆ ಘಝಲ ಅರ್ಜಿ ಸಲ್ಲಿಸಿದ್ದರು. ಆ.30ರಂದು ಅವರಿಗೆ ಫೋನ್ ಕರೆ ಬಂದಿತ್ತು. ದೂರವಾಣಿಯಲ್ಲೇ ಅವರ ಸಂದರ್ಶನ ಪಡೆಯಲಾಗಿತ್ತು. ವೇತನ, ಉದ್ಯೋಗ ಆರಂಭಿಸುವ ದಿನದ ಬಗ್ಗೆ ಎಲ್ಲಾ ಚರ್ಚೆ ನಡೆದ ಬಳಿಕ, ನಾನು ಹಿಜಬ್ ಧರಿಸುತ್ತೇನೆ, ನಿಮಗೆ ಇದರಿಂದ ತೊಂದರೆ ಏನಾದರೂ ಇದೆಯೇ? ಎಂಬುದಾಗಿ ಕೇಳಿದೆ ಎಂದು ಘಝಲ ಹೇಳಿದ್ದಾರೆ.
ಎರಡು ಮೂರು ನಿಮಿಷ ಮಾತುಕತೆ ಮೌನವಾಯಿತು. ಫೋನ್ ಕರೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಾನು ಕೇಳುತ್ತಲೇ ಇದ್ದೆ. ಸ್ವಲ್ಪ ಸಮಯದ ನಂತರ, ನಿಮಗೆ ಅರ್ಥವಾಗುವುದಿಲ್ಲ, ಶಿರವಸ್ತ್ರ ಧರಿಸುವವರನ್ನು ದೊಡ್ಡ ದೊಡ್ಡ ಚಾನೆಲ್ ಗಳೇ ತೆಗೆದುಕೊಳ್ಳುವುದಿಲ್ಲ, ನಮ್ಮದು ಸಣ್ಣ ಪೋರ್ಟಲ್ ಅಷ್ಟೇ ಎಂದು ಸಂದರ್ಶಕರು ಹೇಳಿದುದಾಗಿ ಘಝಲ ತಿಳಿಸಿದ್ದಾರೆ.

ತಾನು ಈಗಾಗಲೇ ‘ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ಮತ್ತು ‘ಎನ್ ಡಿಟಿವಿ’ ಯಲ್ಲಿ ಇಂಟರ್ನ್ ಶಿಪ್ ಮಾಡಿದ್ದೇನೆ. ತನ್ನ ಧರ್ಮದ ಗುರುತಿನಿಂದ ತನ್ನ ಪತ್ರಿಕೋದ್ಯಮದ ಸಮಗ್ರತೆ ಮತ್ತು ಉತ್ಪಾದಕತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದೆ. ಆದರೆ, ಸಂದರ್ಶಕರು ಅದನ್ನು ಒಪ್ಪಲಿಲ್ಲ ಎಂದು ಘಝಲ ತಿಳಿಸಿದ್ದಾರೆ.

“ಇದು ಭಾರತ, ಯಾವೊಂದು ಸುದ್ದಿ ವಾಹಿನಿಯೂ ಇಲ್ಲಿ ವರೆಗೆ ಹಿಜಬ್ ಧರಿಸುವ ವ್ಯಕ್ತಿಗೆ ಅವಕಾಶ ನೀಡಿಲ್ಲ. ಹಿಜಬ್ ಧರಿಸಿದವರನ್ನು ಉದ್ಯೋಗಕ್ಕೆ ತೆಗೆದುಕೊಂಡರೆ, ತನ್ನ ಸುದ್ದಿ ವಾಹಿನಿ ಮುಚ್ಚಬೇಕಾದೀತು. ಅದಕ್ಕಿಂತ ಬದಲು ತಾವು ಏನಾದರೂ ಬರೆಯುತ್ತಿರಿ ಎಂಬುದಾಗಿ ಸಂದರ್ಶಕರು ತಿಳಿಸಿದರು ಎಂದು ಘಝಲ ತಿಳಿಸಿದ್ದಾರೆ.
“ಆತನೂ ಒಬ್ಬ ಮುಸ್ಲಿಂ, ಆದರೂ ಆತ ನನಗೆ ನಿರಾಸೆಗೊಳಿಸಿದ. ನಿರಾಕರಣೆಯಿಂದ ನೋವಾಗಿದೆ. ಆದರೂ, ನಾನು ಪತ್ರಕರ್ತಳಾಗುತ್ತೇನೆ’’ ಎಂದು ಘಝಲ ಹೇಳಿದ್ದಾರೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!