ಚಿಕಿತ್ಸೆ ನಿರಾಕರಣೆ: 8 ವರ್ಷಗಳಿಂದ ಇಸ್ರೇಲ್ ಜೈಲಿನಲ್ಲಿದ್ದ ಫೆಲೆಸ್ತೀನ್ ಖೈದಿ ಸಾವು

Prasthutha|

ಎರಡನೇ ಇಂತಿಫಾದದಲ್ಲಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ

ಫೆಲೆಸ್ತೀನ್: ಕಳೆದ ಎಂಟು ವರ್ಷಗಳಿಂದ ಇಸ್ರೇಲ್ ಜೈಲಿನಲ್ಲಿದ್ದ ಫೆಲೆಸ್ತೀನ್ ಖೈದಿಯೋರ್ವ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

- Advertisement -

ಇಸ್ರೇಲಿ ಆಕ್ರಮಣಕ್ಕೆ ಪ್ರತಿರೋಧ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷ 8 ತಿಂಗಳು ಜೈಲು ಶಿಕ್ಷೆ ವಿಧಿಸಲ್ಪಟ್ಟ 45ರ ಹರೆಯದ ದಾವೂದ್ ಅಲ್ ಖತೀಬ್  ನಿನ್ನೆ ಸಂಜೆ ಆಫರ್ ಜೈಲಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್ ಜೈಲಿನ ಅಧಿಕಾರಿಗಳು ಗಂಭೀರ ಸ್ಥಿತಿಯಲ್ಲಿದ್ದ ದಾವೂದ್ ಗೆ ಸಾಕಷ್ಟು ವೈದ್ಯಕೀಯ ಸೌಲಭ್ಯ ನೀಡಲಿಲ್ಲ ಎಂದು ಫೆಲೆಸ್ತೀನಿಯನ್ ಮೂಲಗಳು ಆರೋಪಿಸಿವೆ. ನಿನ್ನೆ ಸೆಲ್ ನಲ್ಲಿ ಕುಸಿದು ಬಿದ್ದ ದಾವೂದ್ ಸಂಜೆ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಫೆಲೆಸ್ತೀನಿಯನ್ ಫತಹ್ ಬಣದ ಸದಸ್ಯ ದಾವೂದ್ ನನ್ನು ಎರಡನೇ ಇಂತಿಫಾದದಲ್ಲಿ ಬಂಧಿಸಲಾಗಿತ್ತು. ಈ ವ್ಯಕ್ತಿ 2002ರಿಂದ ಇಸ್ರೇಲಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದರು. ಸೆಲ್ ನಲ್ಲಿ ಕುಸಿದುಬಿದ್ದ ದಾವೂದ್ ನನ್ನು ರಕ್ಷಿಸಲು ಜೈಲು ಅಧಿಕಾರಿಗಳು ಮತ್ತು ವೈದ್ಯಕೀಯ ತಂಡ ಪ್ರಯತ್ನಿಸಿದರೂ, ಅದು ವಿಫಲವಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಈತನ್ಮಧ್ಯೆ, ಅವರ ಸಾವಿಗೆ ಕಾರಣ ಏನು ಎಂಬುದನ್ನು ಬಿಡುಗಡೆ ಮಾಡಿಲ್ಲ ಎಂದು ಫೆಲೆಸ್ತೀನಿಯನ್ ಮೂಲಗಳು ತಿಳಿಸಿವೆ. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಇಸ್ರೇಲ್ ಜೈಲು ಅಧಿಕಾರಿಗಳು ಅವರಿಗೆ ಸಾಕಷ್ಟು ಚಿಕಿತ್ಸೆ ನೀಡಲಿಲ್ಲ ಎಂದೂ ವರದಿಗಳು ಹೇಳುತ್ತಿವೆ. ಅವರಿಗೆ ನೋವು ನಿವಾರಕಗಳನ್ನಷ್ಟೇ ನೀಡಲಾಗಿವೆ  ಎಂದು ಫೆಲೆಸ್ತೀನ್ ಆರೋಪಿಸಿದೆ.  1967ರಿಂದ 226 ಫೆಲೆಸ್ತೀನಿಯರು ಇಸ್ರೇಲ್ ಕಾರಾಗೃಹದಲ್ಲಿ ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಪ್ರಾಧಿಕಾರ ಹೇಳಿದೆ.

- Advertisement -