ಬೆಂಗಳೂರು: ಬ್ಯಾಟರಾಯನಪುರ ಪೊಲೀಸರಿಂದ ಯುವಕನ ಮೇಲೆ ಅಮಾನುಷ ದೌರ್ಜನ್ಯ | ಪಾಪ್ಯುಲರ್ ಫ್ರಂಟ್ ಆಕ್ರೋಶ

Prasthutha|

ಬೆಂಗಳೂರು: ಇಲ್ಲಿನ ಬ್ಯಾಟರಾಯನಪುರ ಠಾಣೆಯಲ್ಲಿ ಯುವಕನೊಬ್ಬನಿಗೆ ಪೊಲೀಸರು ಅಮಾನುಷವಾಗಿ ಚಿತ್ರಹಿಂಸೆ ನೀಡಿದ್ದನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾಧ್ಯಕ್ಷ ಸೈಯ್ಯದ್ ಜಾವೇದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಹೇಳಿಕೆ ನೀಡಿರುವ ಸೈಯ್ಯದ್ ಜಾವೇದ್, ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆಗೊಳಗಾಗಿ ಯುವಕ ತನ್ನ ಬಲಗೈ ಕಳೆದುಕೊಂಡ ಘಟನೆ ಮಾಸುವ ಮುನ್ನವೇ ತೌಸೀಫ್ ಎಂಬ ಮುಸ್ಲಿಮ್ ಯುವಕನಿಗೆ ಗಂಭೀರವಾಗಿ ಥಳಿಸಿರುವ ಮತ್ತೊಂದು ಪ್ರಕರಣ ವರದಿಯಾಗಿರುವುದು ಆತಂಕಕಾರಿಯಾಗಿದೆ. ಯುವಕನೋರ್ವ ತಮ್ಮ ಮನೆ ಬಳಿ ಕುಳಿತುಕೊಂಡಿದ್ದನ್ನು ತೌಸೀಫ್ ಆಕ್ಷೇಪಿಸಿದ್ದ. ಆ ನಂತರ ಊರ ಮಂದಿಯ ಮಧ್ಯಸ್ಥಿಕೆಯೊಂದಿಗೆ ಆ ಯುವಕನಿಗೆ ಗುದ್ದದಹಳ್ಳಿಗೆ ಬಾರದಂತೆ ಎಚ್ಚರಿಕೆ ನೀಡಲಾಗಿತ್ತು.

ಆದರೆ ಕಳೆದ ಮೂರು ದಿನಗಳ ಹಿಂದೆ ಆ ಯುವಕ ಮತ್ತೇ ಗುದ್ದದಹಳ್ಳಿಗೆ ಬಂದಿದ್ದ. ಆ ವೇಳೆ ತೌಸೀಫ್ ಆ ಯುವಕನನ್ನು ದೂರ ಕರೆದುಕೊಂಡು ಹೋಗಿ ಪ್ರಶ್ನಿಸಿದ್ದಾನೆ. ಇದೇ ಸಂದರ್ಭದಲ್ಲಿ ಪೊಲೀಸರು ಇಬ್ಬರನ್ನೂ ವಿಚಾರಿಸಿದ ಬಳಿಕ ತೌಸೀಫ್ ನನ್ನು ಬ್ಯಾಟರಾಯನಪುರ ಠಾಣೆಗೆ ಕೊಂಡೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೌಸೀಫ್ ಸ್ವತಃ ತಿಳಿಸಿರುವಂತೆ,  ಠಾಣೆಯಲ್ಲಿ ಸರ್ಕಲ್ ಪೊಲೀಸ್ ಶಂಕರ್ ನಾಯಕ್, ಸಬ್ ಇನ್ಸ್ ಪೆಕ್ಟರ್ ಹರೀಶ್ ಉಪಸ್ಥಿತಿಯಲ್ಲಿ ಇತರ ಸಿಬ್ಬಂದಿ ತನ್ನ ಗಡ್ಡ ಕತ್ತರಿಸಿದ್ದಾರೆ. ಮುಂಜಾನೆ 2 ಗಂಟೆಯಿಂದ ಸುಮಾರು 5 ಗಂಟೆಯ ವರಗೆ ನಿರಂತರ 3 ಗಂಟೆಗಳ ಕಾಲ ಥಳಿಸಿದ್ದಾರೆ. ಬಾಯಾರಿಕೆ ತಣಿಸಲು ನೀರು ಕೇಳಿದಾಗ ಮೂತ್ರ ನೀಡಲಾಗಿದೆ. ತೌಸೀಫ್ ಗೆ ಕಾಲು, ಬೂಟುಗಳಿಂದ ತಲೆ, ಮುಖ, ಭುಜ, ಗುಪ್ತಾಂಗಕ್ಕೆ ಒದೆಯಲಾಗಿದೆ. ತೀವ್ರ ತೆರನಾದ ಥಳಿತದಿಂದ ಯುವಕನ ಕಾಲು ಬಾತುಕೊಂಡಿದೆ.  ನಡೆದಾಡಲೂ ಸಾಧ್ಯವಾಗದೇ ಆತ ಕೊನೆಗೆ ಮೂರ್ಛೆ ತಪ್ಪಿದ್ದಾನೆ. ಯುವಕನ ಮೇಲೆ ಯಾವುದೇ ಪ್ರಕರಣ ದಾಖಲಿಸದ ಪೊಲೀಸರು, ಆತನ ಬಿಡುಗಡೆಗಾಗಿ 1 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು, 30 ಸಾವಿರ ರೂಪಾಯಿ ನೀಡಿದ ಬಳಿಕ ಆತನನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಲಾಗಿದೆ.

- Advertisement -

ಠಾಣೆಯಲ್ಲಿ ಪ್ರಕರಣ ಇತ್ಯರ್ಥಪಡಿಸಲು ಪೊಲೀಸರು ಇಂತಿಷ್ಟು ಮೊತ್ತಕ್ಕೆ ಬೇಡಿಕೆ ಇಡುವ ವಿಚಾರ ಗುಪ್ತವಾಗಿರುವುದೇನಲ್ಲ. ಬ್ಯಾಟರಾಯನ ಠಾಣೆಯಲ್ಲಿ ಕೇಳಿ ಬಂದಿರುವ ಪೊಲೀಸರು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಚಾರವೇ ವಾರದ ಹಿಂದೆ ವರ್ತೂರು ಠಾಣೆಯಲ್ಲೂ ಕೇಳಿ ಬಂದಿತ್ತು. ತಮ್ಮ ಹಣದಾಹಕ್ಕಾಗಿ ಯುವಕರಿಗೆ ಚಿತ್ರಹಿಂಸೆ ನೀಡುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡು, ಜನಸಾಮಾನ್ಯರಿಗೆ ಕಿರುಕುಳ ನೀಡುವ ಇಂತಹ ಅನಿಷ್ಟ ಪದ್ಧತಿಗೆ ಅಂತ್ಯ ಕಾಣಿಸಬೇಕು. ತೌಸೀಫ್ ನಿಗೆ ಗಂಭೀರವಾಗಿ ಥಳಿಸಿರುವ ಪೊಲೀಸರನ್ನು ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು. ಮಾನವ ಹಕ್ಕುಗಳ ಆಯೋಗವು ಕೂಡ ಇಂತಹ  ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಂತ್ರಸ್ತ ಯುವಕನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಬೇಕು ಮತ್ತು 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಬೇಕೆಂದು ಸೈಯ್ಯದ್ ಜಾವೇದ್ ಆಗ್ರಹಿಸಿದ್ದಾರೆ.

Join Whatsapp