ವಿಚಾರಣೆಯ ನೆಪದಲ್ಲಿ ಮತ್ತೊಬ್ಬ ಮುಸ್ಲಿಮ್ ಯುವಕನಿಗೆ ಪೊಲೀಸ್ ಚಿತ್ರಹಿಂಸೆ: ಠಾಣೆಯಲ್ಲಿ ಗಡ್ಡ ಕತ್ತರಿಸಿ ಥಳಿಸಿದ ಪೊಲೀಸರು

Prasthutha|

ಬೆಂಗಳೂರು: ವಿಚಾರಣೆಯ ನೆಪದಲ್ಲಿ ಮುಸ್ಲಿಮ್ ಯುವಕನೊಬ್ಬನನ್ನು ಠಾಣೆಗೆ ಕರೆದೊಯ್ದ ಪೊಲೀಸರು ಅಮಾನವೀಯವಾಗಿ ಥಳಿಸಿ ಚಿತ್ರಹಿಂಸೆ ನೀಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.
ತೌಸೀಫ್ ಚಿತ್ರಹಿಂಸೆಗೆ ಯುವಕನಾಗಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

- Advertisement -


ಕನ್ನಡಪರ ಹೋರಾಟಗಾರ ಹಾಗೂ ಸಮಾಜಸೇವಕರೊಬ್ಬರ ಪುತ್ರನಾಗಿರುವ ತೌಸೀಫ್ ಅವರಿಗೆ ಪೊಲೀಸರು ಹಲ್ಲೆ ನಡೆಸಿದ್ದರಿಂದ ಅವರ ಕೈ, ಕಾಲು ಹಾಗೂ ಬೆನ್ನಿನಲ್ಲಿ ಊತ ಕಾಣಿಸಿಕೊಂಡಿದ್ದು, ಪೊಲೀಸರ ಕ್ರೌರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ತೌಸಿಫ್ ಅವರ ಮನೆಯಲ್ಲಿ ಬಾಡಿಗೆಗಿದ್ದ ಹುಡುಗಿಯೊಬ್ಬಳಿಗೆ ಬಿಹಾರದ ವ್ಯಕ್ತಿಯೊಬ್ಬ ವಾಟ್ಸಪ್ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಹುಡುಗಿ ಮನೆ ಮಾಲೀಕ ತೌಸೀಫ್ ಗೆ ತಿಳಿಸಿದ್ದಾಳೆ. ಈ ಬಗ್ಗೆ ವಿಚಾರಿಸಲು ತೌಸಿಫ್ ಬಿಹಾರದ ಹುಡುಗನನ್ನು ಕರೆದಿದ್ದಾನೆ. ಅಷ್ಟಕ್ಕೇ ಬೆದರಿದ ಬಿಹಾರದ ಹುಡುಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.


ಡಿಸೆಂಬರ್ 1ರ ಮಧ್ಯರಾತ್ರಿ ಒಂದು ಗಂಟೆಗೆ ತೌಸಿಫ್ ಮನೆಗೆ ಏಕಾಏಕಿ ನುಗ್ಗಿದ ಪೊಲೀಸರು ತೌಸೀಫ್ ನನ್ನು ವಿಚಾರಣೆಯ ನೆಪದಲ್ಲಿ ಠಾಣೆಗೆ ಕರೆದೊಯ್ಯುತ್ತಾರೆ. ಎಎಸ್ ಐ ಎನ್.ಕೆ.ಹರೀಶ್ ಮತ್ತು ಸಿಬ್ಬಂದಿ ತೌಸೀಫ್ ನೊಂದಿಗೆ ಕ್ರೂರವಾಗಿ ವರ್ತಿಸಿ ಆತನ ಗಡ್ಡವನ್ನು ಕತ್ತರಿಸಿ, ಚಿತ್ರಹಿಂಸೆ ನೀಡುತ್ತಾರೆ ಎಂದು ಸಂತ್ರಸ್ತ ಕುಟುಂಬ ತಿಳಿಸಿದೆ.

- Advertisement -


ಆರು ಜನ ಪೊಲೀಸರು, ರಾತ್ರಿ 1ರಿಂದ ಬೆಳಗಿನ ಜಾವದ ವರೆಗೂ ನೀಡಿದ ಚಿತ್ರಹಿಂಸೆಯಿಂದಾಗಿ ತೌಸೀಫ್ ಅಸ್ವಸ್ಥಗೊಂಡಿದ್ದು, ಆದರೂ ಬಿಡದ ಪೊಲೀಸರು ಬ್ಯಾಟ್ ಗಳಿಂದ ಸಿಕ್ಕಸಿಕ್ಕಲ್ಲಿ ಹಲ್ಲೆ ನಡೆಸಿ, ಕರೆಂಟ್ ಶಾಕ್ ಕೊಟ್ಟು, ನೆಲಕ್ಕೆ ಬೀಳುವಂತೆ ಮಾಡಿದ್ದಾರೆ. ಈ ವೇಳೆ ಕುಡಿಯಲು ನೀರು ಕೇಳಿದಾಗ ಮೂತ್ರ ಕುಡಿಯುವಂತೆ ಹೇಳಿದ್ದು, ಆತನ ಗುಪ್ತಾಂಗಕ್ಕೆ ಬ್ಯಾಟ್ ನಿಂದ ಹೊಡೆದ ಪರಿಣಾಮ ಮೂತ್ರ ವಿಸರ್ಜನೆ ಮಾಡಲಾಗದೆ ಸಂಕಷ್ಟದಲ್ಲಿದ್ದಾನೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.
ಈ ಹಿಂದೆ ಮುಸ್ಲಿಮ್ ಯುವಕನೊಬ್ಬನಿಗೆ ಅಮಾನವೀಯವಾಗಿ ಹಲ್ಲೆ ನಡೆಸಿ ಕೈ ಕತ್ತರಿಸುವಂತೆ ಮಾಡಿದ ವರ್ತೂರು ಪೊಲೀಸರ ಕ್ರೌರ್ಯ ಇನ್ನೂ ಜನಮಾನಸದಿಂದ ಮಾಯವಾಗುವ ಮುನ್ನವೇ ಬ್ಯಾಟರಾಯನಪುರ ಪೊಲೀಸರು ಮತ್ತೊಬ್ಬ ಮುಸ್ಲಿಮ್ ಯುವಕನ ಮೇಲೆ ಕ್ರೌರ್ಯ ಮೆರೆದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವರ್ತೂರು ಪ್ರಕರಣದಲ್ಲಿ ಈಗಾಗಲೇ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಠಾಣೆಯ ಮುಂಭಾಗ ಪ್ರತಿಭಟನೆ

ಯುವಕನ ಮೇಲೆ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ನೇತೃತ್ವದಲ್ಲಿ ಸ್ಥಳೀಯ ಯುವಕರು, ಕುಟುಂಬಸ್ಥರು ಶನಿವಾರ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವೇಳೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪ್ರತಿಭಟನಕಾರರ ಅಹವಾಲು ಆಲಿಸಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು.

Join Whatsapp