ಮಹಾನ್ ಪ್ರವಾದಿ ಮುಹಮ್ಮದ್ ಪೈಗಂಬರ್…

Prasthutha|

- Advertisement -

✍🏽ಮುಷ್ತಾಕ್ ಹೆನ್ನಾಬೈಲ್

ಮದೀನಾ ನಗರದ ಬೀದಿಯದು. ಆ ಅಜ್ಜಿ ಬೆಳಿಗ್ಗೆಯಿಂದಲೇ ಬೊಬ್ಬೆ ಹಾಕುತ್ತಿದ್ದಳು. ಬನ್ನಿ ಸ್ವಲ್ಪ ನನ್ನತ್ತ ನೋಡಿ, ನಾನು ಈ ನಗರ ತೊರೆಯಬೇಕಿದೆ, ಇಲ್ಲಿ ಬದುಕುವ ಪರಿಸ್ಥಿತಿ ಇಲ್ಲ. ಎಲ್ಲಿ ನೋಡಿದರೂ ವಂಚಕರು. ನಾನೆಂದೂ ಮತ್ತೆ ಈ ನಗರಕ್ಕೆ ಬರಲಾರೆ, ನನ್ನ ಈ ಭಾರವಾದ ಮೂಟೆಗಳನ್ನು ಹೊತ್ತು ನಗರದ ಹೊರಭಾಗಕ್ಕೆ ನನ್ನನ್ನು ತಲುಪಿಸಿ ಎಂಬುದೇ ಆ ಹಣ್ಣು ಹಣ್ಣು ಮದುಕಿಯ ಬೊಬ್ಬೆಯಾಗಿತ್ತು. ದೂರದ ಪಯಣ, ಭಾರವಾದ ಮೂಟೆಗಳು ಮತ್ತು ರಣಬಿಸಿಲಾದ್ದರಿಂದ ಯಾವ ಕೂಲಿಯವನೂ ಅಜ್ಜಿಯ ಕರೆಗೆ ಸ್ಪಂದಿಸುತ್ತಿರಲಿಲ್ಲ. ಹೆಚ್ಚುಕಡಿಮೆ ಮುದುಕಿ ಮತ್ತು ಮೂಟೆಗಳನ್ನು ಹೊತ್ತುಕೊಂಡೇ ನಡೆಯಬೇಕಾದ್ದರಿಂದ ಕೂಲಿಯವರು ಅತ್ತ ನೋಡಿದರೂ ನೋಡದಂತೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದರು. ಆ ಮುದುಕಿಯ ಮುಖದಲ್ಲಿ ನೋವು, ಹತಾಶೆ, ಆತಂಕ, ನಿರಾಸೆಗಳು ಗೂಡು ಕಟ್ಟಿದಂತಿದ್ದವು. ಸಹಾಯಕ್ಕಾಗಿ ಬೊಬ್ಬೆ ಹೊಡೆದು ಹೊಡೆದು ಆಯಾಸಗೊಂಡು ಹತಾಶಳಾಗಿ ದಾರಿಯ ಪಕ್ಕದ ಮನೆಯೊಂದರ ಗೋಡೆಗೊರಗಿದಾಗ ಅಜ್ಜಿಯ ಕಣ್ಣುಗಳಿಂದ ಕಣ್ಣೀರು ಅವಳಿಗರಿವಿಲ್ಲದಂತೆ ಕೆನ್ನೆಯ ಮೇಲಿಳಿಯಿತು. ಮದೀನಾದ ಬೀದಿಗಳಲ್ಲಿ ಬಾಲ್ಯದಲ್ಲಿ ಆಡಿ ಬೆಳೆದ ನೆನಪುಗಳು ಒತ್ತರಿಸಿ ಬರತೊಡಗಿದವು. ತಂದೆ ತಾಯಿಗಳ ಮಡಿಲಲ್ಲಿ ಮಗುವಾಗಿದ್ದಾಗಿನ ನೆನಪುಗಳಿಂದ ಹಿಡಿದು ಪತಿಯ ಕೈಹಿಡಿದು ನಲಿದ ಆ ದಿನಗಳೆಲ್ಲ ನೆನಪಾದವು.

- Advertisement -

ಈಗ ಈ ನಗರದಲ್ಲಿ ಬದುಕಿರುವವರಿಗಿಂತ ಸತ್ತವರೇ ಪುಣ್ಯವಂತರು ಎಂಬ ಭಾವನೆ ಆ ಅಜ್ಜಿಯಲ್ಲಿ ದಟ್ಟವಾಗಿತ್ತು. ಇದನ್ನೆಲ್ಲ ನೋಡುವುದಕ್ಕಿಂತ ಮುಂಚೆ ನನ್ನ ಈ ಮಂಜಾದ ಕಣ್ಣುಗಳು ಮುಚ್ಚಿಹೋಗಿದ್ದರೆ ನಾನೆಷ್ಟು ಪುಣ್ಯವಂತೆಯಾಗುತ್ತಿದ್ದೆ ಎಂದು ಅವಳಷ್ಟಕ್ಕೆ ಆ ಮುದುಕಿ ಬಡಬಡಿಸುತ್ತಿದ್ದರು. ಹೇಗಿದ್ದ ಯಸ್ರೀಬ್ (ಮದೀನಾ) ಹೇಗಾಗಿ ಹೋಯ್ತು. ಇನ್ನೂ ಈ ನಗರಕ್ಕೆ ಏನೇನೆಲ್ಲ ಕಾದಿದೆಯೋ ಎಂದು ಮುದುಕಿ ಆಲೋಚಿಸುವ ಹೊತ್ತಿಗೆ ಸೂರ್ಯ ನಡುನೆತ್ತಿಯ ಮೇಲೆ ಬಂದಿತ್ತು. ಮದುಕಿಯ ಕಣ್ಣೀರು ಮಾತ್ರವಲ್ಲ, ಭಾರವಾದ ಮೂಟೆಗಳನ್ನು ಹೊತ್ತು ಜೊತೆಗೆ ನಡೆಯುವವನು ಬರುತ್ತಾನೆ ಎಂಬ ಆಸೆಯೂ ಬತ್ತಿಹೋಗಿತ್ತು. ಬಳಲಿದ ಮುದುಕಿ ತನ್ನ ಸಾಮಾನುಗಳ ಮೂಟೆಗಳ ಮೇಲೆಯೇ ಹತಾಶಳಾಗಿ ಬಿದ್ದುಕೊಂಡಳು. ಆಯಾಸದಿಂದ ಬಳಲಿ ಇನ್ನೇನು ನಿದ್ದೆ ಹತ್ತಿತು ಎಂಬಷ್ಟರಲ್ಲಿ, ಅದೇ ಹೊತ್ತಿಗೆ ಸರಿಯಾಗಿ ಆ ದಾರಿಯಾಗಿ ಒಬ್ಬ ಯುವಕ ಬರುತ್ತಾನೆ. ಹೀಗೊಬ್ಬಳು ಮುದುಕಿ ಬೀದಿಯಲ್ಲಿ ಅಸಹಾಯಕಳಾಗಿದ್ದಾಳೆ ಎಂಬ ಸುದ್ದಿ ಕೇಳಿಯೇ ಆ ಯುವಕ ಅಲ್ಲಿಗೆ ಹುಡುಕಿ ಬಂದಿದ್ದ.

” ಬಾ ಅಜ್ಜಿ, ನಿನ್ನ ಭಾರವಾದ ಈ ಮೂಟೆಗಳನ್ನು ಹೊತ್ತುಕೊಂಡು ನಿನ್ನೊಂದಿಗೆ ನಾನು ಬರುತ್ತೇನೆ. ನೀನು ಹೇಳುವ ಜಾಗಕ್ಕೆ ನಿನ್ನನ್ನು ತಲುಪಿಸುತ್ತೇನೆ” ಎಂದ ಆ ಯುವಕ, ತಡಬಡಿಸಿ ಎದ್ದ ಅಜ್ಜಿಯೊಂದಿಗೆ ಹೆಜ್ಜೆಯಿಡುತ್ತಾನೆ. ಸ್ವಲ್ಪ ದೂರದ ಮರುಭೂಮಿಯ ಪಯಣದ ನಂತರ ಮೂಟೆಗಳನ್ನು ಹೊತ್ತ ಆ ಯುವಕ ಅಜ್ಜಿಗೆ” ಓ ಅಜ್ಜಿ.. ಇಳಿ ವಯಸ್ಸು ನಿನ್ನದು. ನಿನ್ನ ಬಾಳ ಮುಸ್ಸಂಜೆಯಲ್ಲಿ ನೀನಿರುವೆ. ಯಾವುದೋ ಅವರ್ಣನೀಯ ನೋವು, ಆತಂಕ, ಹತಾಶೆ ನಿನ್ನ ಮುಖದ ಮೇಲೆ ನಾನು ಕಾಣುತ್ತಿದ್ದೇನೆ. ದೇಹದ ಬಳಲಿಕೆ ಮಾತ್ರವಲ್ಲ ಬದುಕಿನಲ್ಲೂ ಬಹಳ ಬಳಲಿರುವೆ ಎನ್ನುವುದು ನಿನ್ನ ಮುಖ ಮತ್ತು ಕಣ್ಣುಗಳು ಹೇಳುತ್ತಿವೆ. ಬಾಡಿದ ಮುಖವನ್ನು ಹೊತ್ತು ಈ ಬರಡಾದ ಮರುಭೂಮಿಯಲ್ಲಿ, ಅದೂ ಕೂಡ ಬಿರು ಬಿಸಿಲಿನಲ್ಲಿ ನೀನು ಹೋಗುತ್ತಿರುವುದಾದರೂ ಎಲ್ಲಿಗೆ ಅಜ್ಜಿ?” ಎಂದು ಕೇಳುತ್ತಾನೆ.

ಆಗ ಅಜ್ಜಿ ” ಮಗನೇ, ಮುಹಮ್ಮದನೆಂಬುವನೊಬ್ಬ ಮದೀನಾ ನಗರಕ್ಕೆ ಬಂದಿದ್ದಾನೆ. ಮಹಾ ಮಾಯಾವಿ, ವಂಚಕನಂತೆ, ಸಮ್ಮೋಹನಾ ವಿದ್ಯಾ ಪಾರಂಗತನಂತೆ. ಅವನ ಮಾತು ಕೇಳುತ್ತಿದ್ದಂತೆ ಎದುರಿಗಿದ್ದವರು ಮನೆ-ಮಠಗಳನ್ನು ತೊರೆದು ಅವನ ಹಿಂದೆಯೇ ಹೋಗುತ್ತಾರಂತೆ. ಮಕ್ಕಾ ಮತ್ತು ಮದೀನಾದ ಎಷ್ಟೋ ಮನೆಗಳಲ್ಲಿ ಅದೆಷ್ಟೋ ಜನರು ಮುಹಮ್ಮದನ ಮಾಯಾಜಾಲಕ್ಕೆ ಸಿಲುಕಿ ಅವನ ಹಿಂದೆಯೇ ತಿರುಗಾಡುತ್ತಿರುವ ಸುದ್ದಿ ಬಂದಿದೆ. ಇಂದಲ್ಲ ನಾಳೆ, ಎಲ್ಲಿಯಾದರೂ ಆ ಮುಹಮ್ಮದ್ ನನ್ನ ಮನೆಗೂ ಬಂದಾನು, ನಾನೂ ಕೂಡ ನನ್ನ ಬದುಕಿನ ಈ ಸಂಧ್ಯಾಕಾಲದಲ್ಲಿ ಪೂರ್ವಜರು ನಂಬಿದ ರೀತಿ ನೀತಿಗಳನ್ನು ಬಿಟ್ಟು ಪಥಭೃಷ್ಟಳಾಗುವೆನೋ ಅಥವ ಗಂಡ-ಮಕ್ಕಳಿಲ್ಲದೆ ಅನಾಥಳಾಗಿರುವ ಮತ್ತು ಅಸಹಾಯಕಳಾಗಿರುವ ನಾನು ಆ ಮುಹಮ್ಮದನ ಮಾತಿಗೆ ಮರುಳಾಗುವೆನೋ ಎಂದು ಆತಂಕಗೊಂಡು, ಸುದೀರ್ಘ ಬದುಕಿಡೀ ಬದುಕಿದ ನನ್ನ ಈ ಮದೀನಾ ನಗರವನ್ನೇ ತೊರೆಯುತ್ತಿದ್ದೇನೆ” ಎನ್ನುತ್ತಾಳೆ. ಅಜ್ಜಿಯ ಮಾತನ್ನು ಆ ಯುವಕ ಮೌನವಾಗಿ ಆಲಿಸುತ್ತಾನೆ.

ಮುಂದುವರಿದ ಅಜ್ಜಿ ಆ ಯುವಕನ ಗುಣಗಾನ ಮಾಡುತ್ತಾಳೆ. ” ಮಗನೇ, ಅದೆಂಥ ಯುವಕ ನೀನು, ಮದೀನಾದ ಬೀದಿಯಲ್ಲಿ ಅಕ್ಷರಶಃ ಅನಾಥಳಾಗಿ ಬಿದ್ದಿದ್ದ ನನ್ನನ್ನು ಯಾರೂ ಮಾತನಾಡಿಸದ ಕಾಲಕ್ಕೆ ನೀನು ಬಂದು ಮಾತನಾಡಿಸಿದೆ ಮಗನೆ. ಈ ಮರೂಭೂಮಿಯ ರಣಬಿಸಿಲಿನಲ್ಲಿ ಬೆನ್ನ ಮೇಲೆ ಮೂಟೆಗಳನ್ನು ಹೊತ್ತು ನಡೆದದ್ದಲ್ಲದೆ, ನಡೆಯಲಾರದ ನನ್ನನ್ನು ಈಗ ಹೆಗಲ ಮೇಲೆ ಹೊತ್ತಿರುವೆ. ನಿನ್ನಂತಹ ಮಹಾನ್ ಮಗನನ್ನು ಹೆತ್ತ ನಿನ್ನ ತಂದೆ ತಾಯಿಗಳು ಅದೆಂತಹ ಭಾಗ್ಯವಂತರು. ನಿನ್ನಂಥ ಮಗನನ್ನು ಪಡೆಯುವ ಭಾಗ್ಯ ನನಗಿಲ್ಲವಾಯಿತಲ್ಲ. ನಿನ್ನಂಥವರು ದಿಕ್ಕಿಗೊಬ್ಬರು ಹುಟ್ಟಿದರೆ ಈ ಲೋಕ ಬೆಳಗುವುದು ಮಗನೇ. ಆದರೇನು ಮಾಡುವುದು ನೀನಿರುವ ಆ ಮದೀನಾದಲ್ಲಿ ಆ ವಂಚಕ ಮುಹಮ್ಮದ್ ಬಂದಿದ್ದಾನಲ್ಲ. ಹುಷಾರಾಗಿರು ನೀನು. ಒಂದಲ್ಲ ಒಂದು ದಿನ ನಿನ್ನ ಮನೆಗೂ ಬಂದು ನಿನ್ನನ್ನೂ ವಂಚಿಸಿಯಾನು” ಎನ್ನುತ್ತಾಳೆ ಅಜ್ಜಿ.

ಸಂಜೆ, ಹೊತ್ತು ಸರಿದು ಸೂರ್ಯ ಮರೆಯಾದ ನಂತರ ಮದೀನಾ ನಗರದ ಹೊರವಲಯದ ದೂರದ ಪ್ರದೇಶವನ್ನು ಈ ಅಜ್ಜಿ ಮತ್ತು ಯುವಕ ತಲುಪುತ್ತಾರೆ. ಅಜ್ಜಿ ಬಯಸಿದ ತಾಣ ತಲುಪಿದ ನಂತರ” ಅಜ್ಜಿ ..ನೀನು ಅರಸಿ ಬಂದ ಸುರಕ್ಷಿತ ತಾಣ ತಲುಪಿಯಾಯಿತು. ನಾನು ಬಿಟ್ಟುಬಂದ ಮದೀನಾ ನಾನು ತಲುಪಬೇಕಿದೆ. ನಾನಿನ್ನು ಹೊರಡುತ್ತೇನೆ” ಎಂದು ಆ ಯುವಕ ಹೊರಡಲು ಅಣಿಯಾಗುತ್ತಾನೆ. ತಡೆದ ಅಜ್ಜಿ” ಮಗನೇ ನಿನಗೊಂದು ಮಾತು ಹೇಳಲೇ? ನೀನು ಹೊತ್ತು ಬಂದಿರುವ ನನ್ನ ಈ ಮೂಟೆಗಳಲ್ಲಿ ನಾವಿಬ್ಬರೂ ಸಾಯುವವರೆಗೆ ಬದುಕಲು ಸಾಕಾಗುವಷ್ಟು ಸಂಪತ್ತೂ ಇದೆ. ಹೇಗೂ ನನಗೆ ಮಕ್ಕಳಿಲ್ಲ, ನೀನೂ ಕಷ್ಟಪಟ್ಟು ಬಿಸಿಲಿನಲ್ಲಿ ದುಡಿಯಬೇಕಿದೆ. ನಾನಾದರೂ ಮುಹಮ್ಮದನ ಹಿಡಿತದಿಂದ ಪಾರಾದೆ. ಮದೀನಾದಲ್ಲಿ ಮುಹಮ್ಮದ್ ಎದುರಾಗುವ ಆತಂಕ ಈಗ ನಿನಗೂ ಇದೆ. ನೀನು ಮನಸ್ಸು ಮಾಡಿದರೆ ಇಬ್ಬರ ಬದುಕೂ ಬೆಳಗುತ್ತದೆ. ಆ ಮುಹಮ್ಮದನಿಂದಲೂ ರಕ್ಷಣೆಯಾಗುತ್ತದೆ. ನೀನು ನನ್ನೊಂದಿಗೇ ನನ್ನ ಮಗನಂತೆ ಇದ್ದು ಬಿಡು ಮಗನೆ..ನಾನೆಷ್ಟು ದಿನ ಇನ್ನು ಬದುಕುತ್ತೇನೆ? ನೀನು ಬದುಕಿ ಬಾಳಬೇಕು. ಇಲ್ಲಿಯೇ ಇರು” ಎಂದು ಒತ್ತಾಯಿಸುತ್ತಾಳೆ.

ಅಜ್ಜಿಯ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿದ ಆ ಯುವಕ ಆವರಿಸಿದ ಆ ಕತ್ತಲೆಯಲ್ಲಿ ಮದೀನಾದತ್ತ ಹೆಜ್ಜೆಯಿಡಲು ಆರಂಭಿಸುತ್ತಾನೆ. ” ಆಗಲಿ ಮಗನೆ.. ನಿನ್ನಿಷ್ಟಂದತೆಯೇ ಆಗಲಿ..ದುಪ್ಪಟ್ಟು ಕೂಲಿಯನ್ನು ತೆಗೆದುಕೊಂಡು ಹೋಗು. ಮರೂಭೂಮಿಯ ರಣಬಿಸಿಲಿನ ಈ ಪಯಣದಲ್ಲಿ ನನ್ನ ಹೆಜ್ಜೆಯ ಹಿಂದೆ ಹೆಜ್ಜೆಯಿಡುತ್ತಾ ಬಹಳ ಮಮತೆಯಿಂದ ನಾನು ಸೇರಬೇಕಾದ ತಾಣವನ್ನು ಸುಗಮವಾಗಿ ತಲುಪಿಸಿದೆ ನೀನು” ಎಂದು ಅಜ್ಜಿ ಹಣ ನೀಡಲು ಹಣ ಇಟ್ಟಿದ್ದ ಮೂಟೆಯ ಗಂಟು ಬಿಚ್ಚಲು ತೊಡಗುತ್ತಾಳೆ. ತಡೆದ ಯುವಕ” ಅಜ್ಜಿ..ಮದೀನಾದ ಬೀದಿಯಲ್ಲಿ ಅಸಹಾಯಕಳಾಗಿ ಹತಾಶಳಾಗಿದ್ದ ನಿನ್ನ ಮನದಿಂಗಿತವನ್ನು ನೇರವೇರಿಸುವುದು ಧರ್ಮಕಾರ್ಯವೆಂದು ಬಗೆದು ಬಂದೆನೇ ಹೊರತು ಹಣದ ಆಸೆಗೆ ನಾನು ಬಂದವನಲ್ಲ. ಅಷ್ಟಕ್ಕು ನಾನು ಕೂಲಿಯವನೂ ಅಲ್ಲ. ಹಸಿದವನಿಗೆ ಅನ್ನ ನೀಡದೆ, ಸರ್ವರಿಗೂ ಹಕ್ಕು- ಸಮಾನತೆ ನೀಡದೆ, ಅಸಹಾಯಕರಿಗೆ ಸಹಾಯ ಮಾಡದೇ ಕೇವಲ ಆರಾಧಿಸಿದ ಮಾತ್ರಕ್ಕೆ ಒಲಿಯುವವ ನನ್ನ ದೇವನಲ್ಲ. ನಾನು ಮಾಡಿದ್ದು ದೇವ ಕಾರ್ಯ, ಇದುವೇ ನನ್ನ ಐಹಿಕ ಪ್ರತಿಫಲಾಪೇಕ್ಷೆಯಿಲ್ಲದ ಧರ್ಮ ಕಾರ್ಯ. ನನಗೆ ನಿನ್ನಿಂದ ಏನೂ ಬೇಡ ಅಜ್ಜಿ” ಎಂದು ಕತ್ತಲೆಯಲ್ಲಿ ನಡೆಯತೊಡಗುತ್ತಾನೆ. ಯುವಕನ ಮಾತು ಕೇಳಿ ಅಜ್ಜಿಯ ಹೃದಯ ಭಾರವಾಗುತ್ತದೆ. ಕಣ್ನುಗಳು ತೇವಗೊಳ್ಳುತ್ತವೆ.” ಆಗಲಿ ಮಗನೆ.. ಹೋಗುವ ಮುಂಚೆ ಕನಿಷ್ಠ ನಿನ್ನ ಹೆಸರನ್ನಾದರೂ ಹೇಳಿ ಹೋಗು” ಎಂದು ಅಜ್ಜಿ ಯುವಕನ ಹಿಂದೆ ಹಿಂದೆ ಬರುತ್ತಾಳೆ. ಹಿಂತಿರುಗಿ ನೋಡಿದ ಆ ಯುವಕ ” ಓ ಅಜ್ಜಿ ..ಯಾವ ಮುಹಮ್ಮದನ ಹೆಸರನ್ನು ಕೇಳಿ ನೀನು ಗಡಗಡ ನಡುಗುತ್ತಿದ್ದಿಯೋ ಮತ್ತು ಬದುಕಿಡೀ ಬಾಳಿ ಬದುಕಿದ ಮದೀನಾದ ನಗರವನ್ನೇ ತೊರೆದು ಬಂದಿದ್ದಿಯೋ, ಆ ಮುಹಮ್ಮದ್ ನಾನೇ..”ಎನ್ನುತ್ತಾನೆ. ಕತ್ತಲೆಯನ್ನು ಸೀಳಿಕೊಂಡು ಬಂದ ಆ ಮಾತಿಗೆ ಅಜ್ಜಿ ಗರಬಡಿದವಳಂತೆ ನಿಂತುಬಿಡುತ್ತಾಳೆ. ಇತಿಹಾಸದ ಪುಟಗಳನ್ನು ತಿರುವಿದಾಗ ಇದೇ ಅಜ್ಜಿ ಎರಡು ದಿನಗಳ ನಂತರ ಮದೀನಾ ನಗರಕ್ಕೆ ಮತ್ತೆ ಮರಳಿದ ಉಲ್ಲೇಖವಿದೆ. ಈ ಬಾರಿ ಮಾತ್ರ ಇದೇ ಅಜ್ಜಿ ಅದೇ ಜಾಗದಲ್ಲಿ ಮತ್ತೆ ಬೊಬ್ಬೆ .” ಯಾರಾದರೂ ನನಗೆ ಮುಹಮ್ಮದರ ಮನೆ ತಲುಪಿಸಿ”

ಮಹಾನರ ಮಹಾನತೆಯನ್ನು ಅರಿತ ನಂತರ ತೊರೆಯುವುದು ಅಷ್ಟು ಸುಲಭವಲ್ಲ. ಇಂದು ಮನುಕುಲದ ಮಹಾನ್ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ)ರ ಜನ್ಮದಿನ. ಈ ದಿನ ಮುಹಮ್ಮದ್ ಎಂಬ ಜೀವ ಮಾತ್ರ ಜನಿಸಿದ್ದಲ್ಲ, ಜೀವಜಗತ್ತಿನ ಅಗಣಿತ ಅವಕಾಶ, ಹಕ್ಕು ಮತ್ತು ಕರ್ತವ್ಯಗಳನ್ನು ಶಾಶ್ವತವಾಗಿ ಶಾಸನರೂಪದಲ್ಲಿ ಬರೆದಿಟ್ಟ ಮಹಾ ಶಾಸನಕಾರ ಜನಿಸಿದ ದಿನವೂ ಹೌದು. ಮಹಿಳೆಯರು ಮತ್ತು ಮಕ್ಕಳ ಬದುಕು ಕಸಿಯುವ ಮದ್ಯಪಾನ ಮುಕ್ತ ಸಮಾಜದ ಪ್ರಬಲ ಪ್ರತಿಪಾದಕ ಮತ್ತು ಅನುಷ್ಠಾನಕಾರನೂ ಮುಹಮ್ಮದರ ರೂಪದಲ್ಲಿ ಇಂದೇ ಜನಿಸಿದ್ದು. ಬಡವರ ಶೋಷಣೆಗೆ ಕಾರಣವಾಗುವ ಬಡ್ಡಿಯನ್ನು ತಿನ್ನುವುದನ್ನು ಕಠಿಣ ಕಾನೂನುಗಳ ಮೂಲಕ ತಡೆದ ಮಹಾನ್ ಕಾನೂನುಗಳು, ಕರಿಯರು ಶೂದ್ರರಿಗೆ ಬದುಕುವ ಸ್ವಾತಂತ್ರ್ಯ ಮತ್ತು ಸಮಾನತೆ, ದಮನಿತರು ಪ್ರಭುತ್ವ ಮತ್ತು ದಬ್ಬಾಳಿಕೆಯನ್ನು ಪ್ರಶ್ನಿಸುವ ಪ್ರೇರಣೆಗಳು ಹುಟ್ಟಿದ ದಿನವೂ ಇಂದೇ. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಭೂಮಿಯ ಮೇಲೆ ಹೆಣ್ಣಿಗೆ ಆಸ್ತಿಯ ಹಕ್ಕು, ಶಿಕ್ಷಣದ ಹಕ್ಕು, “ಮಹರ್” ಎಂಬ ವಧುದಕ್ಷಿಣೆಯ ಹಕ್ಕು, ಮರುಮದುವೆಯ ಹಕ್ಕು, ಒಲ್ಲದ ಗಂಡನನ್ನು ತಿರಸ್ಕರಿಸುವ ಹಕ್ಕು, ಪ್ರಾರ್ಥನೆಯ ನೇತೃತ್ವದ ಹಕ್ಕುಗಳಂತಹ ಅಸಂಖ್ಯಾತ ಸ್ತ್ರೀಯರ ಹಕ್ಕುಗಳು ಹುಟ್ಟಲು ಈ ಹುಟ್ಟೇ ಕಾರಣವಾಯಿತು. ಭೂಮಿಯ ಮೇಲೆ ಮನುಷ್ಯ ಹುಟ್ಟಿದಂದಿನಿಂದ ಇದ್ದ ಗುಲಾಮೀ ಪದ್ದತಿಯ ನಿವಾರಣಾ ಕಾನೂನು ಅನುಷ್ಠಾನವಾಗಲು ಮತ್ತು ಕರಿಯನು ಬಿಳಿಯನೊಂದಿಗೆ ಸಮಾನತೆ ಸಾಧಿಸುವಂತಾಗಲು ಜಗತ್ತು ಈ ಹುಟ್ಟಿನವರೆಗೆ ಕಾಯಬೇಕಾಯಿತು. ಕಾರ್ಮಿಕನ ಬೆವರು ಆರುವ ಮುಂಚೆ ಕೂಲಿಯನ್ನು ಪಡೆಯುವ ಶಾಸನ ಪರಿಚಯಿಸಿದ್ದು ಮತ್ತು ಕಟ್ಟುನಿಟ್ಟಾಗಿ ಅನುಷ್ಠಾನಿಸಿದ್ದು ಇದೇ ಹುಟ್ಟು. ಹೀಗೆ ಮುಹಮ್ಮದ್ ಎಂಬ ಅದೊಂದೇ ಹುಟ್ಟಿನಲ್ಲಿ ಹುಟ್ಟಿದಷ್ಟು ಅನುಗ್ರಹಗಳು ಜಗತ್ತಿನ ಸಾರ್ವಕಾಲಿಕ ಇತಿಹಾಸದಲ್ಲಿ ಮೊದಲೆಂದೂ ಹುಟ್ಟಿರಲಿಲ್ಲ, ಮತ್ತೆಂದೂ ಹುಟ್ಟಲೂ ಇಲ್ಲ.

ಮುಹಮ್ಮದ್ ಎಂಬ ಹೆಸರು ಜಗತ್ತಿನಲ್ಲಿ ಅತಿಹೆಚ್ಚು ಬಳಕೆಯಾದ ಹೆಸರು. ಸರ್ವಶಕ್ತನಿಂದ ಇವರ ಮೂಲಕ ಅವತೀರ್ಣಗೊಂಡ ಗ್ರಂಥ ಕುರ್ ಆನ್ ಜಗತ್ತಿನಲ್ಲಿ ಅತಿಹೆಚ್ಚು ಓದಲ್ಪಡುವ ಗ್ರಂಥ. ಇವರ ಶಾಸನಗಳು ಜಗತ್ತಿನಲ್ಲಿ ಅತಿಹೆಚ್ಚು ದೇಶಗಳು ಅನುಸರಿಸುತ್ತಿವೆ. ಜಗತ್ತಿನ ಎಲ್ಲ ದೇಶಗಳ ಸಂವಿಧಾನ ಮತ್ತು ಕಾನೂನುಗಳ ಮೇಲೆ ಪ್ರವಾದಿ ಮುಹಮ್ಮದರ ವ್ಯಾಪಕ ಪ್ರಭಾವ ಮತ್ತು ಪ್ರೇರಣೆಯಿದೆ. ಊಹೆಗೆ ನಿಲುಕದ ವ್ಯಕ್ತಿತ್ವ, ಕೊಟ್ಯಾಂತರ ಜನರ ಕಣ್ಮಣಿ. ಈ ಜಗತ್ತಿನಲ್ಲಿ ಪ್ರವಾದಿ ಮುಹಮ್ಮದರಷ್ಟು ಪ್ರೀತಿ ಮತ್ತು ದ್ವೇಷಕ್ಕೆ ಒಳಗಾದ ವ್ಯಕ್ತಿತ್ವ ಮತ್ತೊಂದಿಲ್ಲ. ಇವರ ಬಗ್ಗೆ ಬರೆದಷ್ಟು ಪುಸ್ತಗಳು ಬೇರೆ ಯಾರ ಬಗ್ಗೆಯೂ ಬರೆಯಲ್ಪಟ್ಟಿಲ್ಲ. ಹುಟ್ಟಿ ಸರಿಸುಮಾರು1450 ವರ್ಷ ಕಳೆದು, ಜೀವನವೆನ್ನುವುದು ತೆರೆದಿಟ್ಟ ಪುಸ್ತಕವೇ ಆದರೂ ಕೂಡ ಈ ನಿರಕ್ಷರಿ ಪ್ರವಾದಿ ಅಕ್ಷರ ಮತ್ತು ಜ್ಞಾನಗಳಿಗೆ ಇಂದಿಗೂ ನಿಲುಕಿಲ್ಲ.

” ವಾರದ ವಿಚಾರ” ಮಾಲಿಕೆ 116
ಮುಷ್ತಾಕ್ ಹೆನ್ನಾಬೈಲ್ fb wall ನಿಂದ

Join Whatsapp