ಲಾಕ್ ಡೌನ್ ಕಳೆದುಹೋದ ನೀತಿ, ಇನ್ನು ಮುಂದೆ ಲಾಕ್ ಡೌನ್ ಇಲ್ಲ: ಡಾ.ಸುಧಾಕರ್ ಸ್ಪಷ್ಟನೆ

Prasthutha|

ಬೆಂಗಳೂರು: ಲಾಕ್ ಡೌನ್ ಎಂಬುದು ಕಳೆದುಹೋದ ನೀತಿ. ಇನ್ನು ಮುಂದೆ ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.3.5ರಷ್ಟಿದೆ. ಇದು ಹೆಚ್ಚಾಗದಂತೆ ತಡೆಯಲು ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಸಾರ್ವಜನಿಕರು ಲಾಕ್ ಡೌನ್ ಬಗ್ಗೆ ಆತಂಕ ಪಡುವ ಆತಂಕವಿಲ್ಲ ಎಂದು ಹೇಳಿದ್ದಾರೆ.

ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆದುಕೊಂಡರೆ ಕೋವಿಡ್ ಸೋಂಕಿನ ತೀವ್ರತೆ ಕಡಿಮೆ ಇರಲಿದೆ. ರಾಜ್ಯದಲ್ಲಿ ಎರಡು ಡೋಸ್ ಲಸಿಕ ಪಡೆದವರ ಪ್ರಮಾಣ ಶೇ. 80ರಷ್ಟಿದೆ. 100% ಆದರೆ ಮನೆಯಲ್ಲೇ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಗೆ ಹೋಗುವ, ಐಸಿಯುಗೆ ದಾಖಲಾಗುವ ಪ್ರಮೇಯ ಬರುವುದಿಲ್ಲ. ಸಾವಿನ ಪ್ರಮಾಣ ಕೂಡ ಇರುವುದಿಲ್ಲ ಎಂದರು.

- Advertisement -

ಎರಡು ವರ್ಷಗಳ ಅನುಭವದಿಂದ ಕೋವಿಡ್‌ ನಿಯಂತ್ರಣ ಮತ್ತು ಚಿಕಿತ್ಸೆಯ ಕುರಿತು ಅರಿವು ಇದೆ. ಈಗ ಕೋವಿಡ್‌ ಹರಡುವುದನ್ನು ಲಾಕ್‌ಡೌನ್‌ ಜಾರಿಗೊಳಿಸುವುದರಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಲಸಿಕೆ ಮತ್ತು ಮುನ್ನೆಚ್ಚರಿಕೆಯಿಂದ ಮಾತ್ರವೇ ಕೋವಿಡ್‌ ನಿಯಂತ್ರಣ ಸಾಧ್ಯ ಎಂದು ಹೇಳಿದರು.

ʼಓಮೈಕ್ರಾನ್‌ ತಳಿಯ ಕೊರೊನಾ ವೈರಾಣುವಿನ ಸೋಂಕು ಹರಡದಂತೆ ತಡೆಯುವುದು ಅಸಾಧ್ಯ. ಸಹಜವಾಗಿಯೇ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ. ಆದರೆ, ಯಾವುದೇ ತೊಂದರೆ ಆಗುವುದಿಲ್ಲ. ಜನರು ಹೆಚ್ಚು ಮುನ್ನೆಚ್ಚರಿಕೆಯಿಂದ ಇರಬೇಕುʼ ಎಂದು ಸುಧಾಕರ್‌ ತಿಳಿಸಿದರು.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ದೃಢಪ್ರಮಾಣ ದರ ಶೇ 3.95 ತಲುಪಿದೆ. ಈ ಪ್ರಮಾಣ ಇನ್ನಷ್ಟು ಏರಿಕೆಯಾಗಲಿದೆ. ಕೋವಿಡ್‌ ನಿಯಂತ್ರಣ ಕುರಿತು ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಲಸಿಕೆ ಪಡೆಯುವುದರಿಂದ ಮಾತ್ರ ಕೋವಿಡ್‌ನಿಂದ ರಕ್ಷಣೆ ಸಾಧ್ಯ. ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಇರಲಿದೆ ಮತ್ತು ಸಾವಿನಿಂದಲೂ ಪಾರಾಗಬಹುದು. ಎಲ್ಲರೂ ಲಸಿಕೆ ಪಡೆಯುವ ಮೂಲಕ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಆರೋಗ್ಯ ಸಚಿವರು ಮನವಿ ಮಾಡಿದರು.

Join Whatsapp