ನಕಲಿ ದಾಖಲೆ ನೀಡಿ 5.6 ಕೋಟಿ ಸಾಲ ಪಡೆದ ಮೂವರು ಉದ್ಯಮಿಗಳ ವಿರುದ್ಧ ಸಿಬಿಐ ಕೇಸ್

Prasthutha|


ಬೆಂಗಳೂರು
: ಫೋರ್ಜರಿ ಮಾಡಿ 5.6 ಕೋಟಿ ರೂ. ಸಾಲ ಪಡೆದು ವಂಚಿಸಿರುವ ಹಾಸನ ಮೂಲದ ಮೂವರು ಉದ್ಯಮಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್ ಐಆರ್ ದಾಖಲಿಸಿದ್ದಾರೆ.

- Advertisement -


ನಕಲಿ ಬ್ಯಾಂಕ್ ಖಾತೆ ತೆರೆದು 5.6 ಕೋಟಿ ರೂ ಸಾಲ ಪಡೆದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದು, ಹಾಸನ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಲೆಕ್ಕ ಪರಿಶೋಧನೆಯಲ್ಲಿ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಲೆಕ್ಕ ಪರಿಶೋಧಕರು ಬ್ಯಾಂಕ್ ಖಾತೆ ವಿವರಗಳನ್ನು ನಕಲಿ ಎಂದು ಖಚಿತಪಡಿಸಿದಾಗ ಬ್ಯಾಂಕ್ ಅಧಿಕಾರಿಗಳು ದೂರು ದಾಖಲಿಸಿದ್ದರು.


ರಂಗನಾಥಸ್ವಾಮಿ ಮೋಟಾರ್ಸ್ ಮತ್ತು ರಂಗನಾಥಸ್ವಾಮಿ ಕಮ್ಯುನಿಕೇಷನ್ಸ್ ಪಾಲುದಾರರಾದ ಹಾಸನ ಮೂಲದ ಎನ್.ಪ್ರತಾಪ್, ಎನ್.ಪ್ರದೀಪ್, ವಸಂತ ಮತ್ತು ಇನ್ನಿತರ ಆರೋಪಿಗಳ ವಿರುದ್ಧ ಎಸ್ ಬಿಐ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಪತಿ ದೂರು ನೀಡಿದ್ದರು ಎಂದು ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ಕಳೆದ 2017ರಲ್ಲಿ ರಂಗನಾಥಸ್ವಾಮಿ ಕಮ್ಯುನಿಕೇಷನ್ಸ್ ಮತ್ತು ರಂಗನಾಥಸ್ವಾಮಿ ಮೋಟಾರ್ಸ್ ಸಂಸ್ಥೆಗಳು ಹಾಸನದ ಕೆನರಾ ಬ್ಯಾಂಕ್ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ನಿಂದ ತಮ್ಮ ಸಾಲವನ್ನು ವರ್ಗಾವಣೆ ಮಾಡಿಕೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕ್ ಅನ್ನು ಸಂಪರ್ಕಿಸಿದ್ದವು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಮಾರ್ಚ್ 2017 ರಲ್ಲಿ ಸಾಲವನ್ನು ಮಂಜೂರು ಮಾಡಿತ್ತು ಎಂದು ಮಾಹಿತಿ ನೀಡಿದ್ದಾರೆ.


ಎರಡೂ ಪಾಲುದಾರಿಕೆ ಸಂಸ್ಥೆಗಳ ಕ್ರೆಡಿಟ್ ಸ್ಕೊರ್ ಲೆಕ್ಕಪರಿಶೋಧಕ ವರದಿ, ಬ್ಯಾಲೆನ್ಸ್ ಶೀಟ್ಗಳು, ಲಾಭ ನಷ್ಟದ ದಾಖಲೆಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ ದಾಖಲಾತಿಗಳ ಆಧಾರದ ಮೇಲೆ ಬ್ಯಾಂಕ್ ಸಾಲ ನೀಡಿತ್ತು ಎಂದಿದ್ದಾರೆ.
ಹಿಂದಿನ ಎರಡು ಹಣಕಾಸು ವರ್ಷಗಳು (2014-2015 ಮತ್ತು 2015-2016) ಆದಾಯ ತೆರಿಗೆ ರಿಟರ್ನ್ಸ್ ಮತ್ತು ಸಾಲಗಾರರ ಆರ್ಥಿಕ ವಿಶ್ವಾಸಾರ್ಹತೆ ಮೌಲ್ಯಮಾಪನದ ಆಧಾರದ ಮೇಲೆ ಬ್ಯಾಂಕ್ ಸಂಸ್ಥೆಗಳಿಗೆ ಸಾಲ ನೀಡಿತ್ತು. ಆದರೆ ಪ್ರಾಥಮಿಕ ತನಿಖೆಯ ವೇಳೆ ನಕಲಿ ದಾಖಲೆಗಳನ್ನು ನೀಡಿ ಬ್ಯಾಂಕ್ಗೆ ವಂಚಿಸುವ ಉದ್ದೇಶದಿಂದ ಸಾಲ ಪಡೆದಿರುವುದು ದೃಢಪಟ್ಟಿರುವುದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ

Join Whatsapp