ಜಯಲಲಿತಾ ನಿವಾಸ ಸ್ಮಾರಕವಲ್ಲ, ಸಹೋದರನ ಮಕ್ಕಳ ಸೊತ್ತು: ಮದ್ರಾಸ್ ಹೈಕೋರ್ಟ್

Prasthutha|

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜೆ. ಜಯಲಲಿತಾ ಅವರ ಚೆನ್ನೈನ ಪೋಯಸ್ ಗಾರ್ಡನ್‌ನ ‘ವೇದ ನಿಲಯಂ’ ಬಂಗಲೆಯನ್ನು ವಶಪಡಿಸಿಕೊಂಡು ಸ್ಮಾರಕವನ್ನಾಗಿ ಪರಿವರ್ತಿಸುವ ಹಿಂದಿನ ಎಐಎಡಿಎಂಕೆ ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ.

- Advertisement -

ಬಂಗಲೆ ವಶಪಡಿಸಿಕೊಂಡಿದ್ದನ್ನು ಪ್ರಶ್ನಿಸಿ ದೀಪಾ ಮತ್ತು ದೀಪಕ್ ಸಲ್ಲಿಸಿದ್ದ ರಿಟ್ ಅರ್ಜಿ ಪರಿಗಣಿಸಿದ ಹೈಕೋರ್ಟ್, ಎಡಪ್ಪಾಡಿ ಕೆ ಪಳನಿಸ್ವಾಮಿ ಸರ್ಕಾರದ ಆದೇಶವನ್ನು ವಜಾ ಮಾಡಿದೆ. ಜಯಲಲಿತಾ ಅವರ ಸಹೋದರ ಜಯಕುಮಾರ್ ಅವರ ಮಕ್ಕಳಾದ ದೀಪಾ ಮತ್ತು ದೀಪಕ್ ಅವರಿಗೆ ಬಂಗಲೆಯನ್ನು ಹಸ್ತಾಂತರಿಸುವಂತೆ ನ್ಯಾಯಮೂರ್ತಿ ಎನ್. ಶೇಷಸಾಯಿ ಮಹತ್ವದ ತೀರ್ಪು ನೀಡಿದ್ದಾರೆ.


ಜಯಲಲಿತಾ ಯಾವುದೇ ಉಯಿಲು ಬರೆದಿಡದ ಕಾರಣ 2020ರಲ್ಲಿ ದೀಪಾ ಮತ್ತು ದೀಪಕ್ ಅವರನ್ನು ಜಯಲಲಿತಾ ಅವರ ಅಧಿಕೃತ ಉತ್ತರಾಧಿಕಾರಿಗಳೆಂದು ಮದ್ರಾಸ್ ಹೈಕೋರ್ಟ್ ಘೋಷಿಸಿತ್ತು. ಬಳಿಕ ಅಂದಿನ ಎಐಎಡಿಎಂಕೆ ಸರ್ಕಾರವು ದೀಪಾ ಮತ್ತು ದೀಪಕ್ ಅವರ ಇಚ್ಛೆಗೆ ವಿರುದ್ಧವಾಗಿ ಬಂಗಲೆಯನ್ನು ವಶಕ್ಕೆ ಪಡೆದಿತ್ತು.

ಜಯಲಲಿತಾ ಸುಮಾರು 50 ವರ್ಷಗಳ ಕಾಲ ವಾಸವಿದ್ದ ಮನೆಯನ್ನು 1960ರ ದಶಕದಲ್ಲಿ ಅವರ ತಾಯಿ ಸಂಧ್ಯಾ ಖರೀದಿಸಿದ್ದರು. 2016ರಲ್ಲಿ ಜಯಲಲಿತಾ ನಿಧನದ ಬಳಿಕ ಅಂದಿನ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಂಕೆ ಸರ್ಕಾರವು, ಮನೆಯನ್ನು ವಶಪಡಿಸಿಕೊಂಡು ಸ್ಮಾರಕವಾಗಿ ಪರಿವರ್ತಿಸುವುದಾಗಿ ಘೋಷಿಸಿತ್ತು. ಇದು ಪಕ್ಷದ ಕೋಟ್ಯಂತರ ಕಾರ್ಯಕರ್ತರ ಇಚ್ಛೆಯಾಗಿದೆ. ಸ್ಮಾರಕ ನಿರ್ಮಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದಿತ್ತು.

ಈಗ ಬಂಗಲೆಯ ಮೌಲ್ಯ ಸುಮಾರು ₹100 ಕೋಟಿಗಳಾಗಿದ್ದು, 1967ರಲ್ಲಿ ಜಯಲಲಿತಾ ಅವರ ತಾಯಿ ಸಂಧ್ಯಾ ₹ 1.32 ಲಕ್ಷಕ್ಕೆ ಖರೀದಿಸಿದ್ದರು. ಮನೆಯ ಮುಂಭಾಗವನ್ನಷ್ಟೇ ಸಂಧ್ಯಾ ಅವರು ಖರೀದಿಸಿದ್ದರು. ಬಳಿಕ, ಪಕ್ಕದಲ್ಲಿದ್ದ ಜಾಗಗಳನ್ನು ಖರೀದಿಸಿದ್ದ ಜಯಲಲಿತಾ ಮನೆಯನ್ನು ವಿಸ್ತರಣೆ ಮಾಡಿದ್ದರು.

Join Whatsapp