ರೈತ ಸರ್ಕಾರ ಎಂದು ಟೋಪಿ ಹಾಕುವ ಬದಲು ಬೆಳೆನಷ್ಟದ ಸಮೀಕ್ಷೆ ಮಾಡಿ, ಪರಿಹಾರ ನೀಡಿ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಬಿಜೆಪಿಯರು ತಮ್ಮದು ರೈತರ ಸರ್ಕಾರ ಎಂದು ಹೇಳಿ ರೈತರಿಗೆ ಟೋಪಿ ಹಾಕುವ ಕೆಲಸ ಮಾಡುವ ಬದಲು ಮಳೆಹಾನಿಯಿಂದಾಗಿ ಕಂಗಾಲಾಗಿರುವ ರೈತರಿಗೆ ಗರಿಷ್ಠ ಪರಿಹಾರ ನೀಡಲು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಅಕಾಲಿಕ ಮಳೆಯಿಂದ ಹಾನಿಗೊಳಗಾಗಿರುವ ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ರೈತರಿಂದ ಮಾಹಿತಿ ಪಡೆದ ಸಿದ್ದರಾಮಯ್ಯ, ಬೆಳೆ ನಷ್ಟದ ಅಧ್ಯಯನದ ಬಗ್ಗೆ ಗೊಂದಲಕಾರಿ ಮಾಹಿತಿ ನೀಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಮಾಧ್ಯ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಿರಂತರ ಸುರಿದ ಮಳೆಯಿಂದಾಗಿ ಈ ಭಾಗದ ರೈತರ ಬೆಳೆಯಲ್ಲಿ ಶೇ. 60 ರಷ್ಟು ನಷ್ಟವಾಗಿದೆ. ಲಕ್ಷಾಂತರ ರೂಪಾಯಿ ಸಾಲಮಾಡಿ ರೈತರು ಕಲ್ಕತ್ತಾದಿಂದ ಹೂಗಿಡಗಳನ್ನು ತರಿಸಿ ಹೊಲದಲ್ಲಿ ಹಾಕಿದ್ದರು. ಮಳೆಯಿಂದಾಗಿ ಕೈಸೇರಬೇಕಿದ್ದ ಬೆಳೆ ಕೊಚ್ಚಿಹೋಗಿದೆ. ಸಾಲ ಮಾಡಿ ಕೆಲಸಗಾರರಿಗೆ ಕೂಲಿ ಕೊಟ್ಟು, ಗೊಬ್ಬರ ಖರೀದಿಸಿ, ಉಳುಮೆ ಮಾಡಿದ್ದ  ರೈತರು ಬೆಳೆಯಿಲ್ಲದೆ ಕಂಗಾಲಾಗಿದ್ದಾರೆ.

- Advertisement -

ಕಳೆದ 25 ದಿನಗಳಿಂದ ಮಳೆಯಾಗುತ್ತಿದ್ದು ಬೆಳೆ ನಾಶವಾಗಿದೆ. ಸರ್ಕಾರ ಈಗಾಗಲೇ ಬೆಳೆನಷ್ಟದ ಸಮೀಕ್ಷೆ ಮಾಡಿಸಬೇಕಿತ್ತು, ಜಿಲ್ಲಾ ಉಸ್ತುವಾರಿ ಸಚಿವರು, ಮಂತ್ರಿಗಳು ರೈತರ ಸಂಕಷ್ಟ ಆಲಿಸಬೇಕಿತ್ತು. ಇದ್ಯಾವುದನ್ನೂ ಸರ್ಕಾರ ಮಾಡಿಲ್ಲ. ಮೊನ್ನೆ ನಾನು ಟೀಕೆ ಮಾಡಿದ ಮೇಲೆ ಮುಖ್ಯಮಂತ್ರಿಗಳು ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ ಕಡೆಗೆ ಬಂದು ಹೋಗಿದ್ದಾರೆ. ಇಲ್ಲಿ ಮಾತ್ರವಲ್ಲ ರಾಜ್ಯದ ಇನ್ನೂ ಅನೇಕ ಜಿಲ್ಲೆಗಳಲ್ಲಿ ಮಳೆ ಹಾನಿ ಸಂಭವಿಸಿದೆ, ಅಲ್ಲಿಗೂ ಭೇಟಿನೀಡಿ ಜನರ ಕಷ್ಟ ಕೇಳಬೇಕು.

ಇನ್ನೂ ತಡಮಾಡದೆ ರಾಜ್ಯ ಸರ್ಕಾರ ತಕ್ಷಣ ಬೆಳೆನಷ್ಟದ ಸಮೀಕ್ಷೆ ಮಾಡಿ, ರೈತರಿಗೆ ಪರಿಹಾರದ ಹಣ ನೀಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ. 2015-16 ರಲ್ಲಿ ರಾಯಚೂರು, ಸಿಂಧನೂರು ಭಾಗದಲ್ಲಿ ಆಲಿಕಲ್ಲು ಮಳೆಯಿಂದಾಗಿ ಭತ್ತದ ಬೆಳೆನಷ್ಟವಾಗಿತ್ತು, ಆಗ ನಮ್ಮ ಸರ್ಕಾರ ಪ್ರತೀ ಹೆಕ್ಟೇರ್ ಗೆ ರೂ. 25,000 ಪರಿಹಾರ ನೀಡಿತ್ತು.

ಎನ್.ಡಿ.ಆರ್.ಎಫ್ ನಾರ್ಮ್ಸ್ ನಲ್ಲಿ ಸೂಚಿಸಿರುವುದಕ್ಕಿಂತ ಹೆಚ್ಚು ಪರಿಹಾರ ನಾವು ಮಾನವೀಯ ನೆಲೆಯಲ್ಲಿ ನೀಡಿದ್ದೆವು. ಈಗ ನಾನೇ ಮುಖ್ಯಮಂತ್ರಿ ಆಗಿದ್ದರೆ  ರೈತರಿಗೆ ತಕ್ಷಣ ಪರಿಹಾರ ನೀಡುತ್ತಿದ್ದೆ.

ಬಿಜೆಪಿಯವರು ನಷ್ಟದಲ್ಲಿರುವ ರೈತರಿಗೆ ಗರಿಷ್ಠ ಪರಿಹಾರ ನೀಡಬೇಕು. ತಮ್ಮದು ರೈತರ ಸರ್ಕಾರ ಎಂದು ಹೇಳಿ ರೈತರಿಗೆ ಟೋಪಿ ಹಾಕುವ ಕೆಲಸ ಮಾಡಬಾರದು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡುತ್ತೇನೆ. ಅದಕ್ಕೆ ಅವರು ಸ್ಪಂದಿಸದಿದ್ದರೆ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು

Join Whatsapp