“ಹರ್ ಘರ್ ತಿರಂಗಾ” ಅಭಿಯಾನಕ್ಕೆ ನಗರಸಭೆ ಅನುದಾನ ಬಳಕೆಯಾಗಿದೆಯೇ ಹೊರತು ಬಿಜೆಪಿ ಶಾಸಕರ ಸ್ವಂತ ಹಣವಲ್ಲ: ಸೈಯ್ಯದ್ ಝಾಕೀರ್ ಸ್ಪಷ್ಟನೆ

Prasthutha|

ಶಿವಮೊಗ್ಗ: ಮನೆಮನೆಗೆ ರಾಷ್ಟ್ರಧ್ವಜ “ಹರ್ ಘರ್ ತಿರಂಗಾ” ಈ ಕಾರ್ಯಕ್ರಮದಡಿ ಸರ್ಕಾರಿ ಹಣದಿಂದ ರಾಷ್ಟ್ರಧ್ವಜಗಳನ್ನು ವಿತರಿಸಲಾಗಿದೆಯೇ ಹೊರತು ಶಾಸಕ ಹಾಲಪ್ಪ ಎಚ್. ಹರತಾಳು ಅವರ ಸ್ವಂತ ಖರ್ಚಿನಿಂದ ಅಲ್ಲ. ಈ ಬಗ್ಗೆ ಬಂದ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಸಾಗರ ನಗರಸಭೆಯ ಜೆಡಿಎಸ್ ಸದಸ್ಯ ಸೈಯ್ಯದ್ ಝಾಕೀರ್ ಸ್ಪಷ್ಟಪಡಿಸಿದ್ದಾರೆ.

- Advertisement -


ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಶಾಸಕ ಹಾಲಪ್ಪ ಅವರು ಸ್ವಂತ ಖರ್ಚಿನಲ್ಲಿ ರಾಷ್ಟ್ರಧ್ವಜ ಖರೀದಿಸಿ ಹಂಚಿದ್ದಾರೆ. ಇದು ಮಾದರಿ ಕಾರ್ಯ ಎಂಬ ವರದಿ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾಗಿತ್ತು.


ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸೈಯ್ಯದ್ ಝಾಕೀರ್, ಸಾಗರದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ಹಲವು ದಿನಗಳಿಂದ ಅಧಿಕಾರಿಗಳು ಅಹರ್ನಿಶಿ ಕೆಲಸ ಮಾಡುತ್ತಿದ್ದಾರೆ. ಶಾಸಕರ ಸಹಕಾರವೂ ಇದೆ. ಆದರೆ ಶಾಸಕರು ಈ ಕಾರ್ಯಕ್ರಮಕ್ಕೆ ಸ್ವಂತ ಹಣ ಖರ್ಚು ಮಾಡಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.

- Advertisement -


ಸಾಗರದ ನಗರಸಭೆಯ ಸಾಮಾನ್ಯ ನಿಧಿಯಿಂದ ಆರು ಲಕ್ಷ ರೂಪಾಯಿಗಳನ್ನು ಹಾಗೂ ತಾಲ್ಲೂಕು ಪಂಚಾಯಿತಿ ಅಡಿಯಲ್ಲಿ ಬರುವ ಗ್ರಾಮ ಪಂಚಾಯತಿಗಳಿಂದ ಸುಮಾರು ಏಳು ಲಕ್ಷ ರೂಪಾಯಿಗಳನ್ನು ಈ ಅಭಿಯಾನಕ್ಕೆ ಬಳಸಿಕೊಳ್ಳಲಾಗಿದೆ. ಆದರೆ ಶಾಸಕರ ಅನುದಾನದಲ್ಲಿ ಯಾವುದೇ ರೀತಿಯ ಹಣವನ್ನು ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಂಡಿರುವುದಿಲ್ಲವಾದ್ದರಿಂದ ಶಾಸಕ ಹಾಲಪ್ಪ ಹೆಚ್. ಹರತಾಳು ಇದಕ್ಕೆ ಕೇವಲ ಫೋಸ್ ನೀಡಿ ಮಾಧ್ಯಮ ಪ್ರಚಾರ ಪಡೆದುಕೊಂಡಿರುತ್ತಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಾಗರ ನಗರಸಭೆಯ ಸದಸ್ಯ ಸೈಯ್ಯದ್ ಜಾಕೀರ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Join Whatsapp