5 ಗಂಟೆಗೊಮ್ಮೆ ಅತ್ಯಾಚಾರ | ರಾಷ್ಟ್ರ ರಾಜಧಾನಿಯ ಕ್ರೈಮ್ ರಿಪೋರ್ಟ್ ಹೀಗಿದೆ ನೋಡಿ!

Prasthutha|

- Advertisement -

ಹೊಸದಿಲ್ಲಿ : ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ಪ್ರತಿ ಐದು ಗಂಟೆಗೊಂದು ಅತ್ಯಾಚಾರ, 19 ಗಂಟೆಗೊಂದು ಕೊಲೆ, 15 ನಿಮಿಷಕ್ಕೊಂದು ಕಾರು ಕಳ್ಳತನ, ಗಂಟೆಗೊಂದು ಸರಗಳ್ಳತನ ನಡೆಯುತ್ತಿದೆ ಎಂದು ದಿಲ್ಲಿ ಪೊಲೀಸರು ಆತಂಕಕಾರಿ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದ್ದಾರೆ.

ಸರಗಳ್ಳತನ ಹೊರತುಪಡಿಸಿ ಉಳಿದ ಅಪರಾಧಗಳಲ್ಲಿ ರಾಜಧಾನಿಯ ಸ್ಥಿತಿ ಹಿಂದಿನ ವರ್ಷಕ್ಕಿಂತ ಸುಧಾರಿಸಿದೆ. 2019ರಲ್ಲಿ ನಾಲ್ಕು ಗಂಟೆಗೊಂದು ಅತ್ಯಾಚಾರ, 17 ಗಂಟೆಗೊಂದು ಹತ್ಯೆ ಮತ್ತು 12 ನಿಮಿಷಕ್ಕೊಂದು ವಾಹನ ಕಳ್ಳತನ ನಡೆಯುತ್ತಿತ್ತು. ಆದರೆ ಸರಗಳ್ಳತನ ಪ್ರಕರಣಗಳು 2019ರಲ್ಲಿ ದಿನಕ್ಕೆ ಸರಾರಿ 17 ವರದಿಯಾದರೆ, ಇದೀಗ ಪ್ರತಿದಿನ ಸರಾಸರಿ 24 ಪ್ರಕರಣಗಳು ವರದಿಯಾಗುತ್ತಿವೆ. 2020ರಲ್ಲಿ ಅಪರಾಧಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಇಷ್ಟಾಗಿಯೂ ರಾಷ್ಟ್ರ ರಾಜಧಾನಿಯಲ್ಲಿ 1,699 ಅತ್ಯಾಚಾರ, 2,186 ಲೈಂಗಿಕ ಕಿರುಕುಳ ಮತ್ತು 65 ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳೂ ದಾಖಲಾಗಿವೆ. 2019ರಲ್ಲಿ 2,168 ಅತ್ಯಾಚಾರ, 2,921 ಲೈಂಗಿಕ ಕಿರುಕುಳ ಮತ್ತು 109 ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದವು.

- Advertisement -

ಮಹಿಳೆಯರ ವಿರುದ್ಧದ ಎಲ್ಲಾ ರೀತಿಯ ಪ್ರಕರಣಗಳು ಕಡಿಮೆಯಾಗಿರುವುದು ಇದೇ ಮೊದಲು ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ. 2020ರ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಿಸಿದ್ದರಿಂದ ನಾಲ್ಕು ತಿಂಗಳ ಕಾಲ ಜನ ಮನೆಗಳಲ್ಲೇ ಉಳಿದದ್ದು ಕೂಡಾ ಅಪರಾಧ ಪ್ರಕರಣಗಳು ಕಡಿಮೆಯಾಗಲು ಕಾರಣವಾಗಿದೆ. ಅತ್ಯಾಚಾರ ಪ್ರಕರಣಗಳ ಪೈಕಿ ಶೇಕಡ 2ರಷ್ಟು ಆರೋಪಿಗಳು ಮಾತ್ರ ಸಂತ್ರಸ್ತರಿಗೆ ಅಪರಿಚಿತರು. ಆಗಂತುಕ ಆರೋಪಿಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ. 2019ರಲ್ಲಿ ಆಗಂತುಕ ಅರೋಪಿಗಳ ಪ್ರಮಾಣ 2.20 ಇದ್ದರೆ ಇದೀಗ 1.77ಕ್ಕೆ ಇಳಿದಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ಎನ್.ಎಸ್.ಶ್ರೀವಾಸ್ತವ ಹೇಳಿದ್ದಾರೆ.

Join Whatsapp