ಬಿಜೆಪಿ ಆಡಳಿತದ ಮಧ್ಯಪ್ರದೇಶದ 13 ನಗರಗಳಲ್ಲಿ 100 ರೂ. ಗಡಿ ದಾಟಿದ ಪೆಟ್ರೋಲ್ ಬೆಲೆ

Prasthutha|

ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ದೇಶಾದ್ಯಂತ ಜನ ಸಾಮಾನ್ಯರು ದಿನನಿತ್ಯ ಗೋಳಾಡುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಸರಕಾರ ಬೆಲೆ ಏರಿಕೆಗೆ ತಡೆಯೊಡ್ಡುವ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇನ್ನೊಂದೆಡೆ, ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನ ಸಾಮಾನ್ಯರ ಧ್ವನಿಯಾಗಬೇಕಿದ್ದ ಮುಖ್ಯವಾಹಿನಿ ಮಾಧ್ಯಮಗಳು, ಈ ವಿಚಾರದಲ್ಲೂ ಇನ್ನೂ ತಮ್ಮ ‘ಮಾಧ್ಯಮ ರಾಜಕಾರಣ’ ಮುಂದುವರಿಸುತ್ತಿರುವುದು ವಿಪರ್ಯಾಸ.

- Advertisement -

ಕಳೆದ 51 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 24 ಬಾರಿ ಹೆಚ್ಚಾಗಿದೆ. ಜ.1ರಿಂದೀಚೆಗೆ ಸರಾಸರಿ 7.30 ರೂ. ಏರಿಕೆಯಾಗಿದೆ. ಫೆಬ್ರವರಿಯಲ್ಲಿ 14ನೇ ಬಾರಿ ಏರಿಸಲಾಗಿದೆ. ಕಳೆದ 12 ದಿನಗಳಿಂದ ಸತತವಾಗಿ ಬೆಲೆ ಏರಿಕೆ ಮಾಡುತ್ತಲೇ ಬರಲಾಗಿದೆ. ಈ 12 ದಿನಗಳಲ್ಲಿ 4.34 ರೂ. ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಾಗ ಬೆಲೆ ಏರಿಸುವುದು, ಕಡಿಮೆಯಾದಾಗ ಕಡಿಮೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಕ್ರಮ. ಆದರೆ, ಪ್ರಧಾನಿ ಮೋದಿ ಸರಕಾರ ಈ ಸಂಪ್ರದಾಯ ಮರೆತಿರುವ ಹಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಭಾರತದಲ್ಲಿ ಮಾತ್ರ ಬೆಲೆ ಏರುತ್ತಲೇ ಹೋಗುತ್ತಿದೆ.

- Advertisement -

ದೇಶದಲ್ಲೇ ಗರಿಷ್ಠ ಪೆಟ್ರೋಲ್ ದರ ಇರುವ ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ. ರೇವಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100.02 ರೂ ಆಗಿದೆ. ಅನುಪುರದಲ್ಲಿ ರೂ. 100.95, ಬದ್ವಾನಿಯಲ್ಲಿ ರೂ. 100.09, ಬಾಲಾಘಾಟ್ ನಲ್ಲಿ ರೂ. 100.33, ಬುರ್ಹಾನ್ ಪುರದಲ್ಲಿ 100.21, ಚಿಂದ್ವಾರೆಯಲ್ಲಿ ರೂ. 100.07, ದಿಂಡೋರಿಯಲ್ಲಿ ರೂ. 100.21, ನೀಮಚ್ ನಲ್ಲಿ ರೂ. 100.19, ಪನ್ನಾದಲ್ಲಿ ರೂ. 100.45, ಸಾತ್ನಾದಲ್ಲಿ ರೂ. 100.23, ಶಾದೊಲ್ ನಲ್ಲಿ ರೂ. 100.85, ಶಿವೊಪುರ್ ನಲ್ಲಿ ರೂ. 100.45, ಉಮಾರಿಯಾದಲ್ಲಿ ರೂ. 100.36 ಆಗಿದೆ. ಒಟ್ಟು 13 ನಗರಗಳಲ್ಲಿ ಪೆಟ್ರೋಲ್ ಬೆಲೆ ರೂ. 100ರ ಗಡಿ ದಾಟಿದೆ. ಇನ್ನೂ ಬಹುತೇಕ ನಗರಗಳ ಪೆಟ್ರೋಲ್ ಬೆಲೆ ಶತಕದ ಸಮೀಪದಲ್ಲಿದೆ.

ಇನ್ನೊಂದೆಡೆ, ರಾಜಸ್ಥಾನದಲ್ಲಿ ಗಂಗಾ ನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 101.19 ಮತ್ತು ಹನುಮಗಢದಲ್ಲಿ ರೂ. 100.58 ಆಗಿದೆ. ಇಲ್ಲಿ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 97-98 ರೂ.ಯ ನಡುವಿದೆ.

ಬಿಜೆಪಿ ಆಡಳಿತದ ಮಧ್ಯಪ್ರದೇಶದ 13 ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದ್ದರೂ, ಮುಖ್ಯವಾಹಿನಿ ಮಾಧ್ಯಮಗಳು ಕಾಂಗ್ರೆಸ್ ಆಡಳಿತದ ರಾಜಸ್ಥಾನದ ಗಂಗಾನಗರದ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮಾತ್ರ ಬೆಳಕು ಚೆಲ್ಲುತ್ತಾ, ‘ಮಾಧ್ಯಮ ರಾಜಕಾರಣ’ ಮಾಡುತ್ತಿವೆ. ಈ ಮೂಲಕ ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ರಾಜ್ಯಗಳ ಸಮಸ್ಯೆ, ಅದನ್ನು ರಾಜಸ್ಥಾನ ಸರಕಾರ ಮಾತ್ರ ಇಳಿಕೆ ಮಾಡಬೇಕು ಎಂಬರ್ಥದಲ್ಲಿ ಬಿಜೆಪಿ ಬೆಂಬಲಿಗರು ಚರ್ಚೆ ನಡೆಸುತ್ತಿರುವುದು ಕಂಡುಬರುತ್ತಿದೆ. ಅದಕ್ಕೆ ಪೂರಕವಾಗಿ ಮುಖ್ಯವಾಹಿನಿ ಮಾಧ್ಯಮಗಳ ವರದಿಗಳೂ ಇರುವುದು ಅತ್ಯಂತ ವಿಷಾಧನೀಯ ಸ್ಥಿತಿಯಾಗಿದೆ.

ದೇಶದ ರಾಜ್ಯಗಳ ರಾಜ್ಯ ರಾಜಧಾನಿಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಈ ಕೆಳಗಿನಂತಿದೆ. ಇಲ್ಲಿ ಅತ್ಯಂತ ಮುಖ್ಯವಾದ ವಿಷಯವೊಂದನ್ನು ಮುಖ್ಯವಾಗಿ ಗಮನಿಸಬೇಕು. ರಾಜ್ಯ ರಾಜಧಾನಿಗಳಲ್ಲಿ ಬೆಲೆ ಕಡಿಮೆ ತೋರಿಸಿ, ರಾಜ್ಯದ ಇತರ ಬಹುತೇಕ ನಗರಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಬೆಲೆ ಇದೆ.

ಬೆಂಗಳೂರು – ಪೆಟ್ರೋಲ್ 93.61 ರೂ., ಡೀಸೆಲ್ 85.84 ರೂ.

ಭೋಪಾಲ್ – ಪೆಟ್ರೋಲ್ ರೂ. 98.60 ರೂ., ಡೀಸೆಲ್ 89.23 ರೂ.

ಮುಂಬೈ – ಪೆಟ್ರೋಲ್ 97 ರೂ., ಡೀಸೆಲ್ 88.06 ರೂ.

ಜೈಪುರ – ಪೆಟ್ರೋಲ್ 97.10 ರೂ., ಡೀಸೆಲ್ 89.44 ರೂ.

ಪಾಟ್ನಾ – ಪೆಟ್ರೋಲ್ 92.91 ರೂ., ಡೀಸೆಲ್ 86.22 ರೂ.

ಚೆನ್ನೈ – ಪೆಟ್ರೋಲ್ 92.59 ರೂ., ಡೀಸೆಲ್ 85.98 ರೂ.  

Join Whatsapp