700 ಗೋಲು ! ʻಕ್ಲಬ್‌ ಫುಟ್‌ಬಾಲ್‌ʼನಲ್ಲಿ ಹೊಸ ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೊ

Prasthutha|

​​​​​​​ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಸಕ್ರೀಯ ಆಟಗಾರರ ಪೈಕಿ ಅತಿಹೆಚ್ಚು ಗೋಲು ಬಾರಿಸಿದ ಪಟ್ಟಿಯಲ್ಲಿ ಮೊದಲಿಗನಾಗಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೊ, ಕ್ಲಬ್‌ ಫುಟ್‌ಬಾಲ್‌ನಲ್ಲಿ 700 ಗೋಲು ದಾಖಲಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

- Advertisement -

ಭಾನುವಾರ ತಡರಾತ್ರಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಡೆದ ಮ್ಯಾಂಚೆಸ್ಟರ್‌ ಯುನೈಟೆಡ್‌ ಮತ್ತು ಎವರ್ಟನ್‌ ನಡುವಿನ ಪಂದ್ಯದಲ್ಲಿ, ರೊನಾಲ್ಡೊ ಅಪರೂಪದ ಮೈಲಿಗಲ್ಲು ತಲುಪಿದ್ಧಾರೆ.  

ಗೂಡಿಸನ್‌ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಯುನೈಟೆಡ್‌ 2-1 ಅಂತರದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಮೊದಲಾರ್ಧದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ರೊನಾಲ್ಡೊ, 44ನೇ ನಿಮಿಷದಲ್ಲಿ ತಂಡದ ಪರ 2ನೇ ಮತ್ತು ತನ್ನ ವೃತ್ತಿ ಜೀವನದ 700ನೇ ಅವಿಸ್ಮರಣೀಯ ಗೋಲು ದಾಖಲಿಸಿದರು.

- Advertisement -

ತಮ್ಮ ವೃತ್ತಿ ಜೀವನದ ಕ್ಲಬ್‌ ಫುಟ್‌ಬಾಲ್‌ನ 943 ನೇ ಪಂದ್ಯದಲ್ಲಿ ರೊನಾಲ್ಡೊ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ 144ನೇ ಗೋಲು ದಾಖಲಿಸಿದ ರೊನಾಲ್ಡೊ, ರಿಯಲ್‌ ಮ್ಯಾಡ್ರಿಡ್ ಪರ 450 ಗೋಲು, ಜುವೆಂಟಸ್‌ ಪರ 101 ಗೋಲು ಹಾಗೂ ತನ್ನ ಮೊದಲ ಕ್ಲಬ್‌ ಆದ ಸ್ಪೋರ್ಟಿಂಗ್‌ ಲಿಸ್ಬನ್‌ ಪರ 5 ಗೋಲು ದಾಖಲಿಸಿದ್ದಾರೆ.‌ ಈ ನಡುವೆ 222 ಗೋಲುಗಳಿಗೆ ರೊನಾಲ್ಡೊ ಅಸಿಸ್ಟ್‌ ಮಾಡಿದ್ದಾರೆ.

ಕಳೆದ ಎರಡು ದಶಕಗಳಿಂದ ಮೈದಾನದಲ್ಲಿ ಬದ್ಧ ಎದುರಾಳಿಗಳಂದೇ ಫುಟ್‌ಬಾಲ್‌ ಜಗತ್ತಿನಲ್ಲಿ ಚಿರಪರಿಚಿತರಾಗಿರುವ ಲಿಯೊನೆಲ್‌ ಮೆಸ್ಸಿ, ಇದುವರೆಗೂ 825 ಕ್ಲಬ್‌ ಪಂದ್ಯಗಳಲ್ಲಿ 691 ಗೋಲು ಗಳಿಸಿದ್ದಾರೆ. 236 ಗೋಲುಗಳಿಗೆ ಅಸಿಸ್ಟ್‌ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಸಕ್ರಿಯ ಆಟಗಾರರ ಪೈಕಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (117 ಗೋಲು, 191 ಪಂದ್ಯ ) ಮೊದಲ ಸ್ಥಾನದಲ್ಲಿದ್ದಾರೆ. ಆ ಮೂಲಕ ಒಟ್ಟು 1,134 ಪಂದ್ಯಗಳಿಂದ ತಮ್ಮ  ಗೋಲು ಗಳಿಕೆಯನ್ನು 817ಕ್ಕೆ ಏರಿಸಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಲಿಯೋನೆಲ್ ಮೆಸ್ಸಿ ಈವರೆಗೂ 164 ಅಂತಾರಾಷ್ಟ್ರೀಯ ಪಂದ್ಯಗಳಿಂದ 90 ಗೋಲ್‌ ಗಳಿಸಿದ್ದಾರೆ. ಇದವರೆಗೂ ಆಡಿರುವ ಒಟ್ಟು 989 ಪಂದ್ಯಗಳಿಂದ ಮೆಸ್ಸಿ 781 ಗೋಲು ಗಳಿಸಿದ್ದಾರೆ.

Join Whatsapp