ಚೆನ್ನೈ ಸೂಪರ್ ಕಿಂಗ್ಸ್ ಎದುರು ಗುಜರಾತ್ ಟೈಟನ್ಸ್‌ಗೆ 35 ರನ್‌ಗಳ ಗೆಲುವು

Prasthutha|

ಅಹಮದಾಬಾದ್‌: ಇಲ್ಲಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಐಪಿಎಲ್ 59ನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಅಬ್ಬರದ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡ 35 ರನ್‌ಗಳ ಸೋಲು ಅನುಭವಿಸಿದೆ.

- Advertisement -

ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2024ರಲ್ಲಿ ಆಡಿದ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲು ಕಂಡಿದ್ದು, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ. ಸಿಎಸ್‌ಕೆ ತಂಡ ಆಡಿದ 12 ಪಂದ್ಯಗಳಲ್ಲಿ 6 ಗೆಲುವು ಮತ್ತು 6 ಸೋಲು ಕಂಡು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡದ ಗೆಲುವು ಮತ್ತೊಂದು ಪರಿಣಾಮ ಬೀರಿದ್ದು, ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ಲೇಆಫ್ ಅವಕಾಶಕ್ಕೆ ಸಹಾಯ ಮಾಡಿದೆ.

- Advertisement -

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಸಾಯಿ ಸುದರ್ಶನ್ ಮತ್ತು ನಾಯಕ ಶುಭ್ಮನ್ ಗಿಲ್ ಅವರ ಭರ್ಜರಿ ಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 231 ರನ್ ಕಲೆ ಹಾಕಿತ್ತು.

232 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ (ಡ್ಯಾರಿಲ್ ಮಿಚೆಲ್ ಮತ್ತು ಮೊಯಿನ್ ಅಲಿ ಅವರ ಅಮೋಘ ಅರ್ಧಶತಕಗಳ ಹೊರತಾಗಿಯೂ) ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್‌ಗಳನ್ನಷ್ಟೇ ಮಾತ್ರ ಗಳಿಸಲು ಶಕ್ತವಾಯಿತು.

ಇದೇ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಭರ್ಜರಿ ಆಟ ಎಲ್ಲರಿಗೆ ಕೂಡ ಇಷ್ಟವಾಗಿತ್ತು. ಕೇವಲ 11 ಬಾಲ್‌ಗೆ 26 ರನ್ ಸಿಡಿಸಿದ ಮಹೇಂದ್ರ ಸಿಂಗ್ ಧೋನಿ 236.36 ಸ್ಟ್ರೈಕ್ ರೇಟ್ ಮೂಲಕ 3 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಆದರೂ ಚೆನ್ನೈ ಈ ಪಂದ್ಯದಲ್ಲಿ ಸೋಲು ಕಂಡಿರುವುದು ಧೋನಿ ಅಭಿಮಾನಿಗಳಿಗೆ ಬೇಸರ ತರಿಸಿದೆ.

ಬೌಲಿಂಗ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಮೋಹಿತ್ ಶರ್ಮಾ 4 ಓವರ್‌ಗಳಲ್ಲಿ 31 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಉಮೇಶ್ ಯಾದವ್ ಮತ್ತು ಸಂದೀಪ್ ವಾರಿಯರ್ ತಲಾ ಒಂದೊಂದು ವಿಕೆಟ್ ಪಡೆದರು.

Join Whatsapp