ಕ್ರೀಡಾ ವಿವಿ ಆರಂಭಕ್ಕೆ ಎಲ್ಲಾ ರೀತಿಯ ಪ್ರಯತ್ನ: ಅಪ್ಪಚ್ಚು ರಂಜನ್

Prasthutha|

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಆರಂಭಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದ್ದು, ಸರ್ಕಾರದ ಹಂತದಲ್ಲಿ ಗಮನ ಸೆಳೆಯಲಾಗಿದೆ ಎಂದು ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

- Advertisement -

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 2021-2022ನೇ ಸಾಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 2 ದಿನಗಳ ಕ್ರೀಡಾ ತರಬೇತಿ ಶಿಬಿರ ಹಾಗೂ ಯುವ ಸಂಘಗಳಿಗೆ ಮತ್ತು ಶಾಲೆಗಳಿಗೆ ಶುಕ್ರವಾರ ‘ಕ್ರೀಡಾ ಕಿಟ್’ ವಿತರಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ ಶೀಘ್ರ ಕ್ರೀಡಾ ವಿಶ್ವವಿದ್ಯಾಲಯ ಆರಂಭಕ್ಕೆ ಎಲ್ಲಾ ರೀತಿಯ ಪ್ರಯತ್ನಗಳು ನಡೆದಿವೆ. ಕ್ರೀಡಾ ವಿವಿ ಆರಂಭದಿಂದ ಇಲ್ಲಿನ ಯುವ ಜನರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಕಾರಿ ಆಗಲಿದೆ. ವೀರರ ನಾಡು, ಕ್ರೀಡೆಯ ಬೀಡು ಆಗಿದ್ದು, ಸಾಧಿಸುವ ಗುರಿ ಮತ್ತು ಛಲ ಇದ್ದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು  ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು. 

- Advertisement -

ಜಿಲ್ಲೆಯಲ್ಲಿ 3 ಹಾಕಿ ಟರ್ಪ್ ಮೈದಾನಗಳಿವೆ. ಕೊಡಗು ಜಿಲ್ಲೆ ಕ್ರೀಡೆ ಹಾಗೂ ಸೇನಾ ಕ್ಷೇತ್ರದಲ್ಲಿ ಹೆಸರು ಮಾಡಿದೆ. ನಾನು ಕೂಡ ಒಬ್ಬ ಕ್ರೀಡಾಪಟುವಾಗಿದ್ದೇನೆ. ಬಡವರ್ಗದಿಂದ ಬಂದವರು ಕ್ರೀಡೆಯಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ, ಆ ನಿಟ್ಟಿನಲ್ಲಿ ಬಡ ಪ್ರತಿಭಾವಂತರನ್ನು ಗುರುತಿಸಲು ಕ್ರೀಡಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಹಳ್ಳಿಗಾಡಿನವರು ಒಲಂಪಿಕ್ಸ್ ಹಾಗೂ ಇತರ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ. ಹಾಗಾಗಿ ತಮ್ಮ ಪ್ರತಿಭೆಯನ್ನು ವಿಕಸನಗೊಳಿಸಿ, ರಾಜ್ಯಕ್ಕೆ ಹಾಗೂ ದೇಶಕ್ಕೆ  ಹೆಸರು ತರುವಂತಾಗಬೇಕು ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಅವರು ಮಾತನಾಡಿ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ 9.13ಕೋಟಿ ರೂ.ಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

Join Whatsapp