ಸರ್ಕಾರಿ ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ಅಪ್ಪಚ್ಚು ರಂಜನ್ ಭೂಮಿ ಪೂಜೆ

Prasthutha|

ಮಡಿಕೇರಿ: ತಾಲ್ಲೂಕಿನ ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಬಳಿ ಗುರುತಿಸಲಾಗಿರುವ ಸರ್ಕಾರಿ ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

- Advertisement -

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕೊಡಗು ಜಿಲ್ಲಾ ಪ್ರಾಣಿ ದಯಾ ಸಂಘದ ಸಹಕಾರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಪ್ರತೀ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣ ಮಾಡಲು 15 ಕೋಟಿ ರೂ. ನಿಗದಿ ಮಾಡಿದ್ದು, ಮೊದಲ ಹಂತದಲ್ಲಿ ಸರ್ಕಾರ 36ಲಕ್ಷ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದರು. 

ವಯಸ್ಸಾದ ಗೋವುಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಸರ್ಕಾರದಿಂದ ನಡೆಸುವ ಗೋಶಾಲೆಗೆ ಗೋವುಗಳನ್ನು ಬಿಡುವಂತಾಗಬೇಕು. ಗೋವುಗಳನ್ನು ಸರ್ಕಾರದ ವತಿಯಿಂದ ನೋಡಿಕೊಳ್ಳಲಾಗುವುದು. ಗೋಶಾಲೆ ಆರಂಭಿಸುವುದು ಸರ್ಕಾರದ ಮಹಾತ್ವಾಕಾಂಕ್ಷೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಆ ನಿಟ್ಟಿನಲ್ಲಿ ಗೋವುಗಳ ಸಂರಕ್ಷಣೆಗೆ ಸರ್ಕಾರ ಒತ್ತು ನೀಡಿದೆ ಎಂದು ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದರು. 

- Advertisement -

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ 6 ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆ ಪ್ರತಿಕ್ರಿಯಿಸಿದ ಶಾಸಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಶ್ರೀಸಾಮಾನ್ಯರು, ಕೃಷಿಕರು ಎಲ್ಲಾ ಬಡವರ್ಗದ ಜನರ ಶ್ರೇಯೋಭಿವೃದ್ಧಿಗೆ ಹಲವು ಕಾರ್ಯಕ್ರಮ ಜಾರಿಗೊಳಿಸಿ, ಉತ್ತಮ ಅಭಿವೃದ್ಧಿ ಕಾರ್ಯ ಕೈಗೊಂಡಿದೆ ಎಂದು ಶಾಸಕರು ಹೇಳಿದರು. ಸರ್ಕಾರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ, ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ಮುಂದಾಗಿದೆ ಎಂದು ಶಾಸಕರಾದ ಅಪ್ಪಚ್ಚುರಂಜನ್ ಅವರು ತಿಳಿಸಿದರು.

ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಪಿ.ಸುರೇಶ್ ಭಟ್ ಅವರು ಮಾಹಿತಿ ನೀಡಿ ಕೊಡಗು ಜಿಲ್ಲೆಯಲ್ಲಿ ೨೦೨೦ರ ಗಣತಿಯಂತೆ ಜಿಲ್ಲೆಯಲ್ಲಿ ಒಟ್ಟು 77 ಸಾವಿರ ಜಾನುವಾರುಗಳಿದ್ದು, ಇದರ ಕನಿಷ್ಟ ಶೇ.0.75 ರಷ್ಟು, ಹೆಚ್ಚು ಕಡಿಮೆ ೫೦೦ ಜಾನುವಾರು ಗಳನ್ನಾದರೂ ಸಾಕುವಷ್ಟು ಅವಕಾಶವಿರುವ ಹಟ್ಟಿಯ ರಚನೆಯ ಮತ್ತು ಇತರ ಮೂಲಭೂತ ಸೌಕರ್ಯಗಳ ಅವಶ್ಯಕತೆಯಿದ್ದು, ಈ ಸಂಬಂಧ ಅಗತ್ಯ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದರು.

Join Whatsapp