ಬಂಟ್ವಾಳ: ಇಬ್ಬರು ಮುಸ್ಲಿಮ್ ಯುವಕರಿಗೆ ಮಾರಣಾಂತಿಕ ಹಲ್ಲೆ

Prasthutha|

30 ಮಂದಿಯ ತಂಡದಿಂದ ಕೃತ್ಯ

- Advertisement -

ಬಂಟ್ವಾಳ: ಅಪಘಾತ ಸಂಭವಿಸಿದಾಗ ಉಂಟಾಗಿದ್ದ ವಿವಾದ ಬಗೆಹರಿದ ಬಳಿಕ ಸಂಘಪರಿವಾರದ ಕಾರ್ಯಕರ್ತರು ಇಬ್ಬರು ಮುಸ್ಲಿಮ್ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಾಕುವಿನಿಂದ ಇರಿದ ಘಟನೆ ಬಂಟ್ವಾಳ ಲೊರೆಟ್ಟೋ ಪದವಿನಲ್ಲಿ ಶನಿವಾರ ನಡೆದಿದೆ.

ಗಾಯಗೊಂಡವರನ್ನು ಬಂಟ್ವಾಳ ನಿವಾಸಿಗಳಾದ ಇರ್ಷಾದ್ ಮತ್ತು ಸಾಹಿಲ್ ಎಂದು ಗುರುತಿಸಲಾಗಿದ್ದು, ಬಂಟ್ವಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಲೊರೆಟ್ಟೋ ಪದವು ಎಂಬಲ್ಲಿ ಆಟೋ ರಿಕ್ಷಾ ಮತ್ತು ದ್ವಿ ಚಕ್ರ ವಾಹನದ ನಡುವೆ ಇಂದು ಸಂಜೆ ಅಪಘಾತ ಸಂಭವಿಸಿತ್ತು. ದ್ವಿ ಚಕ್ರ ವಾಹನದಲ್ಲಿದ್ದ ಇರ್ಷಾದ್ ಮತ್ತು ಆಟೋ ಚಾಲಕ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿದ್ದಂತೆ ಮೂರನೇ ವ್ಯಕ್ತಿಯೊಬ್ಬ ಮಧ್ಯಪ್ರವೇಶಿಸಿ ಆಟೋ ಚಾಲಕನನ್ನು ಪ್ರಚೋದಿಸಿ, ಅಲ್ಲಿಂದ ತೆರಳಿದ್ದಾನೆ. ಆಗ ಇರ್ಷಾದ್ , ಆ ವ್ಯಕ್ತಿಯೊಂದಿಗೆ ಅಪಘಾತ ವಿಷಯದಲ್ಲಿ ಮಧ್ಯಪ್ರವೇಶಿಸಲು ನೀನು ಯಾರು ಎಂದು ಕೇಳಿದ್ದಾರೆ. ಅದನ್ನು ನಿನಗೆ ತಿಳಿಸುತ್ತೇನೆ ಎಂದು ಹೇಳಿ ಆ ವ್ಯಕ್ತಿ ಅಲ್ಲಿಂದ ತೆರಳಿದ್ದಾನೆ.

ಬಳಿಕ ಬೈಕ್ ಸವಾರರಾದ ಇರ್ಷಾದ್ ಮತ್ತು ಸಾಹಿಲ್ ತಮ್ಮ ವಾಹನದಲ್ಲಿ ಹೋಗುತ್ತಿದ್ದಾಗ ಲೊರಟ್ಟೋ ಭಜನಾ ಮಂದಿರದ ಬಳಿ ಅಡ್ಡಗಟ್ಟಿದ ಸಂಘಪರಿವಾರದ ಸುಮಾರು 30 ಮಂದಿಯ ತಂಡ ಇರ್ಷಾದ್ ಮತ್ತು ಸಾಹಿಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದೆ.

ತೀವ್ರ ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಹರೀಶ್ ಮಂಡಾಡಿ ಅಲಿಯಾಸ್ ಪಕ್ಕಿ ಹರೀಶ್,ಧನುಶ್,ಸೂರಜ್, ನರೇಶ್, ಅನಿಲ್, ಭರತ್, ಗಣೇಶ್ ಕಮಾಜೆ ಸೇರಿದಂತೆ 30 ದುಷ್ಕರ್ಮಿಗಳ ತಂಡ ನಮ್ಮ ಮೇಲೆ ತ್ರಿಶೂಲದಿಂದ ಇರಿದಿದೆ ಎಂದು ಗಾಯಾಳುಗಳು ಆರೋಪಿಸಿದ್ದು, ಹಲ್ಲೆಮಾಡಿದವರು ಕೂಡ ಪ್ರತಿ ದೂರು ನೀಡಲು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಯ ಬಳಿ ಎರಡೂ ಕಡೆಯವರು ಜಮಾಯಿಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನು ಅಲ್ಲಿಂದ ಚದುರಿಸಿದ್ದಾರೆ.

ನಾಲ್ವರು ವಶಕ್ಕೆ

ಘಟನೆ ಸಂಬಂಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿದ್ದು, ನಾಲ್ವರನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಧನುಷ್ ಆಚಾರ್ಯ ಮತ್ತು ಮುಹಮ್ಮದ್ ಇರ್ಷಾದ್ ದೂರು ನೀಡಿದ್ದಾರೆ.



Join Whatsapp