ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ: ಬೊಮ್ಮಾಯಿ

Prasthutha|

ಬೆಂಗಳೂರು: ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು ಕರ್ನಾಟಕ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

- Advertisement -

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌ ಪರವಾಗಿ ಎಂ. ನಾಗರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ತೆರಿಗೆ ವಂಚಕರು ತಪ್ಪಿಸಿಕೊಳ್ಳದಂತೆ ಬಿಗಿ ಕ್ರಮಗಳನ್ನು ಕೈಗೊಂಡ ಪರಿಣಾಮವಾಗಿ ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಅಧಿಕಾರಿಗಳ ದಕ್ಷತೆ, ತಂತ್ರಜ್ಞಾನದ ಸಮರ್ಥ ಬಳಕೆ ಮತ್ತು ವಿಚಕ್ಷಣೆ ಹೆಚ್ಚು ಮಾಡಿದ್ದರಿಂದ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಕೆಲವು ವಸ್ತುಗಳನ್ನು ತೆರಿಗೆ ಇಲ್ಲದೆ ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರಿಯವಾಗಿತ್ತು. ಆ ಜಾಲವನ್ನು ಪತ್ತೆಹಚ್ಚಿ ಬಿಗಿ ಕ್ರಮಗಳನ್ನು ಕೈಗೊಂಡು ಅಂತಹ ವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಉದಾಹರಣೆಗೆ ಅಡಿಕೆಯನ್ನು ತೆರಿಗೆಯಿಂದ ಹೊರಗಿಟ್ಟು ಮಾರಾಟ ಮಾಡಲಾಗುತ್ತಿತ್ತು. ವಿಶೇಷ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮ ಈಗ ಪ್ರತಿದಿನ 8 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ.

- Advertisement -

ಅದೇ ರೀತಿ ರಾಜ್ಯದಿಂದ ದೇಶ-ವಿದೇಶಕ್ಕೆ ಹೋಗುತ್ತಿದ್ದ ಗುಜರಿ ಬಗ್ಗೆ ಲೆಕ್ಕವೇ ಸಿಗುತ್ತಿರಲಿಲ್ಲ. ಮಂಗಳೂರಿನಿಂದ ದಿಲ್ಲಿವರೆಗೆ ತೆರಿಗೆ ಇಲ್ಲದೆ ಗುಜರಿ ಹೋಗುತ್ತಿತ್ತು. ಇದನ್ನು ಪತ್ತೆ ಹಚ್ಚಿ ಬಿಗಿ ಕ್ರಮಗಳನ್ನು ಜರುಗಿಸಿದ್ದರಿಂದ ವರ್ಷಕ್ಕೆ 800 ಕೋಟಿ ರೂ. ತೆರಿಗೆ ಬರುತ್ತಿದೆ. ಬೆಂಗಳೂರಿನಲ್ಲಿ ಮಾರಾಟ ಮಳಿಗೆಯ ಲೆಕ್ಕವೇ ಬೇರೆ, ದಾಸ್ತಾನು ಮಳಿಗೆಗಳ ಲೆಕ್ಕವೇ ಬೇರೆ ಇರುತ್ತಿತ್ತು. ತಂತ್ರಜ್ಞಾನದ ಬಳಕೆಯ ಮೂಲಕ ಇದನ್ನು ಸರಿಪಡಿಸಲಾಗಿದೆ. ಈ ರೀತಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂತಹ ಶೋಧನೆಗಳು ಮುಂದುವರಿದಿದೆ ಎಂದರು.



Join Whatsapp