ಲಾರಿ – ಪಿಕ್’ಅಪ್ ನಡುವೆ ಅಪಘಾತ: ಒಂದೇ ಕುಟುಂಬದ 11 ಮಂದಿ ಸಾವು

Prasthutha|

ಭಟಪಾರಾ(ಛತ್ತೀಸ್​ಗಢ): ಲಾರಿ ಹಾಗೂ ಪಿಕ್ ಅಪ್ ಸರಕು ವಾಹನದ ನಡುವೆ ಡಿಕ್ಕಿ ಸಂಭವಿಸಿ 11 ಮಂದಿ ಸಾವನ್ನಪ್ಪಿರುವ ದುರ್ಘಟನೆ ಭಟಪಾರಾದ ಖಮಾರಿಯಾ ಗ್ರಾಮದ ಬಳಿ ಸಂಭವಿಸಿದೆ.

- Advertisement -

ರಸ್ತೆ ಅಪಘಾತದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಭಟಪಾರಾ ಆಸ್ಪತ್ರೆ ಬಲೋಡಾ ಬಜಾರ್‌ ಚಿಕಿತ್ಸಾಲಯಕ್ಕೆ ದಾಖಲಿಸಲಾಗಿದೆ.

ಭಟಪಾರಾ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೃತಪಟ್ಟವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಎಸ್‌ ಐ ಸಂಜೀವ್ ಸಿಂಗ್ ರಜಪೂತ್ ತಿಳಿಸಿದ್ದಾರೆ.

- Advertisement -

ಸತ್ತವರ ನಿಖರ ಸಂಖ್ಯೆಯನ್ನು ತಿಳಿಯಲು ಸಮಯ ತೆಗೆದುಕೊಳ್ಳುತ್ತದೆ. ಆದರೆ, ಬಲೋಡಾ ಬಜಾರ್ ಎಸ್ಪಿ ದೀಪಕ್ ಝಾ ಅವರು 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಪಿಕಪ್‌ ವಾಹನದಲ್ಲಿದ್ದ ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಖಿಲೋರಾ ಗ್ರಾಮದಿಂದ ಅರ್ಜುನಿ ಗ್ರಾಮಕ್ಕೆ ತೆರಳಿದ್ದರು.

ಅಪಘಾತದ ಬಗ್ಗೆ ಮಾಹಿತಿ ಪಡೆದ ಭಟಪಾರ ಪೊಲೀಸರು ತಡರಾತ್ರಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಈ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ.

ಗಾಯಗೊಂಡವರನ್ನು ವಾಹನದಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಲೋದಬಜಾರ್ ಎಸ್ಪಿ ದೀಪಕ್ ಝಾ ಅವರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮ ಮುಗಿಸಿ ಸಂಬಂಧಿಕರು ಪಿಕಪ್‌ ವಾಹನದಲ್ಲಿ ಅರ್ಜುನಿಯಿಂದ ತಮ್ಮ ಗ್ರಾಮ ಖಿಲೋರಾಗೆ ಹಿಂದಿರುಗುತ್ತಿದ್ದರು. ಈ ಮಧ್ಯೆ, ರಾತ್ರಿ 12 ಗಂಟೆ ಸುಮಾರಿಗೆ ಖಮಾರಿಯಾದ ಡಿಪಿಡಬ್ಲ್ಯುಎಸ್ ಶಾಲೆಯ ಬಳಿ ವೇಗವಾಗಿ ಬಂದ ಟ್ರಕ್‌ ಮತ್ತು ಪಿಕಪ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನ ಉರುಳಿ ಬಿದ್ದಿತ್ತು. ಅಪಘಾತದಲ್ಲಿ 4 ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಿಲ್ಲಾಸ್ಪತ್ರೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೂವರು ಗಾಯಾಳುಗಳನ್ನು ರಾಯ್‌ಪುರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp