ಮತದಾನದ 48 ಗಂಟೆ ಮುನ್ನ ಚುನಾವಣಾ ಚರ್ಚೆ, ಸಂವಾದ, ಸಮೀಕ್ಷೆಗಳಿಗೆ ನಿರ್ಬಂಧ!

Prasthutha|

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ-10 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯ ಸಮಯದ 48 ಗಂಟೆ ಮುನ್ನ ಅವಧಿಯಲ್ಲಿ ಅಂದರೆ (ಮೇ-8ರ ಸಾಯಂಕಾಲ 6 ಗಂಟೆಯಿಂದ ಮೇ-10ರ ಸಾಯಂಕಾಲ 6.30 ಗಂಟೆ ವರೆಗೆ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಮೇಲೆ ಪ್ರಭಾವ ಬೀರುವ ರೀತಿ, ಟಿ.ವಿ. ವಾಹಿನಿಗಳಲ್ಲಿ, ಸಿನಿಮಾಟೋಗ್ರಾಫಿ, ಚರ್ಚೆ, ಸಂವಾದ, ವಿಶ್ಲೇಷಣೆ, ಚುನಾವಣೋತ್ತರ ಸಮೀಕ್ಷೆ, ಹೀಗೆ ಯಾವುದೇ ಜಾಹೀರಾತು ಹಾಗೂ ಸುದ್ದಿಯನ್ನು ವಿದ್ಯುನ್ಮಾನ ವಾಹಿನಿ, ಕೇಬಲ್ ಟಿ.ವಿ., ರೇಡಿಯೋ, ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಾಗಲಿ ಅಥವಾ ಬಿತ್ತರಿಸುವುದನ್ನು ಪ್ರಜಾ ಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 125ರಂತೆ ನಿರ್ಬಂಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

- Advertisement -

ಒಂದು ವೇಳೆ ನಿಯಮ ಉಲ್ಲಂಘಿಸಿ ಚುನಾವಣಾ ಜಾಹೀರಾತು, ಸಮೀಕ್ಷೇ ಇತ್ಯಾದಿ ಸುದ್ದಿಗಳನ್ನು ಬಿತ್ತರಿಸಿದಲ್ಲಿ ಅಂತಹವರ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆ-1951ರ ಕಲಂ 126ರ ಅನ್ವಯ 2 ವರ್ಷಗಳ ಶಿಕ್ಷೆ ಅಥವಾ ದಂಡ, ಇಲ್ಲವೆ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಮತದಾನ ಪೂರ್ವ 48 ಗಂಟೆ ಅವಧಿಯಲ್ಲಿ ಮಾಧ್ಯಮಗಳು ವಿದ್ಯುನ್ಮಾನ ವಾಹಿನಿ, ಕೇಬಲ್ ಟಿ.ವಿ., ರೇಡಿಯೋ, ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ಮಾಧ್ಯಮ ಇತ್ಯಾದಿಗಳು ಬಿತ್ತರಿಸುವ ಚುನಾವಣಾ ಸುದ್ದಿಯಲ್ಲಿ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ಪರವಾಗಿರುವ ಮತ್ತು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಹ ಪ್ಯಾನಲಿಸ್ಟ್ ಅಭಿಪ್ರಾಯಗಳು, ಮನವಿಗಳು ಇಲ್ಲದಿರುವುದುನ್ನು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ ಯಾವುದೇ ಅಭಿಪ್ರಾಯ ಸಂಗ್ರಹದ ಫಲಿತಾಂಶ ಪ್ರಕಟ, ಸಮೀಕ್ಷೆ ವಿಶ್ಲೇಷಣೆ, ಪ್ರದರ್ಶನ ಮಾಡುವುದನ್ನು ಸಹ ನಿರ್ಬಂಧಿಸಲಾಗಿದೆ.

- Advertisement -

ಎಕ್ಸಿಟ್ ಪೋಲ್ ನಿಷೇಧ

ಮತದಾನದ ಪೂರ್ವ 48 ಗಂಟೆ ಮತ್ತು ಮತದಾನದ ಸಮಯ ಮುಗಿದ ನಂತರದ ಅರ್ಧ ಗಂಟೆ ವರೆಗೂ ಯಾವುದೇ ಸುದ್ದಿ ವಾಹಿನಿ, ಕೇಬಲ್ ಟಿ.ವಿ. ಸೇರಿದಂತೆ ಇನ್ನಿತರ ಡಿಜಿಟಲ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಎಲ್ಲಾ ಮಾಧ್ಯಮ ಸಂಸ್ಥೆಗಳು ಚುನಾವಣಾ ಆಯೋಗವು ಕಾಲ ಕಾಲಕ್ಕೆ ಹೊರಡಿಸುವ ಎಲ್ಲಾ ಮಾರ್ಗದರ್ಶನಗಳನ್ನು ಪಾಲಿಸಬೇಕು.