ದ್ವೇಷ ಹರಡಿದ ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ 17 ದೂರು ನೀಡಿದರೂ ಪ್ರಕರಣ ದಾಖಲಿಸದ ಪೊಲೀಸರು!

Prasthutha|

ಬೆಂಗಳೂರು: ಕರ್ನಾಟಕದ ಕ್ಯಾಂಪೇನ್ ಅಗೇನ್ಸ್ಟ್ ಹೇಟ್ ಸ್ಪೀಚ್ (ಸಿಎಎಚ್ ಎಸ್) ಎಂಬ ಸಂಘಟನೆ ಈ ವರ್ಷ ಕನ್ನಡ ಸುದ್ದಿವಾಹಿನಿಗಳ ವಿರುದ್ಧ ದ್ವೇಷ ಭಾಷಣದ ವಿರುದ್ಧ 17 ದೂರುಗಳನ್ನು ದಾಖಲಿಸಿದ್ದರೂ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಲ್ಲ ಹಾಗೂ ಕಾನೂನು ಕ್ರಮಕೈಗೊಂಡಿಲ್ಲ ಎಂದು ಸಂಘಟನೆ ಆರೋಪಿಸಿದೆ.
ಹೋರಾಟಗಾರರ ಗುಂಪಾದ ಕ್ಯಾಂಪೇನ್ ಎಗೇನ್ ಸ್ಟ್ ಹೇಟ್ ಸ್ಪೀಚ್ (ದ್ವೇಷ ಭಾಷಣ ವಿರುದ್ಧ ಅಭಿಯಾನ/ಸಿಎಎಚ್ಎಸ್) ದ್ವೇಷ ಪ್ರಚೋದಿತ ವರದಿಗಳನ್ನು ಖಂಡಿಸಿ ಒಂದು ವರ್ಷದ ಅವಧಿಯಲ್ಲಿ ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ 17 ದೂರುಗಳನ್ನು ನೀಡಿದ್ದು, ಇದರಲ್ಲಿ ಯಾವುದನ್ನೂ ಪೊಲೀಸರು ಸ್ವೀಕರಿಸಿಲ್ಲ ಎಂದು ಸಂಘಟನೆಯ ಸದಸ್ಯರು ಹೇಳಿರುವುದಾಗಿ ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.
ಬೆಂಗಳೂರಿನಲ್ಲಿ ವೈಯಕ್ತಿಕ ವೈಷಮ್ಯದ ಕಾರಣ ನಡೆದ ಅಪರಾಧ ಕೃತ್ಯದ ವರದಿಯನ್ನು ತಿರುಚಿದ ಸಂಬಂಧ ಕನ್ನಡ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ವಿರುದ್ಧ ಇತ್ತೀಚೆಗೆ ದೂರು ನೀಡಲಾಗಿದೆ. ಮೇ 9 ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ‘ದೇವಾಲಯಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲು ಯೋಜಿಸಿದ ದುಷ್ಕರ್ಮಿಗಳು ಬಂಧನಕ್ಕೊಳಗಾಗಿದ್ದಾರೆ’ ಎಂದು ಸುದ್ದಿ ಪ್ರಕಟಿಸಲಾಯಿತು. ಹಿಂದೂಗಳನ್ನು ಗುರಿಯಾಗಿಸಿ ಕೃತ್ಯ ಎಸಗಲು ಯೋಜಿಸಲಾಗಿತ್ತು ಎಂದು ಯಾವುದೇ ಅಧಿಕೃತತೆ ಇಲ್ಲದೆ ಪಬ್ಲಿಕ್ ಟಿವಿ ವರದಿ ಬಿತ್ತರಿಸಿದೆ ಎಂದು ಸಂಘಟನೆ ಆರೋಪಿಸಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ಸಿ.ಎಚ್.ಪ್ರತಾಪ್ ರೆಡ್ಡಿ ಅವರಿಗೆ ಸಲ್ಲಿಸಿರುವ ದೂರಿನಲ್ಲಿ ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಹಿಂದೂಗಳು ಮತ್ತು ಆರ್ ಎಸ್ ಎಸ್ ಮೇಲೆ ಹಲ್ಲೆ ನಡೆಸಲು ಸಂಚು ಎಂದು ಸುಳ್ಳು ಮತ್ತು ಆಧಾರರಹಿತ ಹೇಳಿಕೆಗಳನ್ನು ನೀಡಲಾಗಿದೆ ಎಂದು ಸಿಎಎಚ್ ಎಸ್ ದೂರಿದೆ. ಆಜಾನ್, ಹಿಜಾಬ್ ವಿವಾದ, ಹುಬ್ಬಳ್ಳಿ, ಶಿವಮೊಗ್ಗ, ಪಾದರಾಯನಪುರ, ಕೆ.ಜಿ.ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಕೋಮು ಉದ್ವಿಗ್ನತೆಗೆ ಜೊತೆಗೆ ಈ ಅಪರಾಧ ಕೃತ್ಯವನ್ನು ನಿರೂಪಕ ವೈಯಕ್ತಿಕ ಕಾರಣಗಳಿಂದಾಗಿ ತಳುಕು ಹಾಕಿದ್ದಾನೆ ಎಂದು ತನಿಖಾಧಿಕಾರಿ ಹೇಳಿರುವುದಾಗಿ ವರದಿಯಾಗಿದೆ.
“ತಮ್ಮ ಸಿದ್ಧಾಂತದ ಕಾರಣದಿಂದಾಗಿ ಅವರು ‘ಕೊಲೆಯ ಮನಸ್ಥಿತಿ’ ಹೊಂದಿದ್ದಾರೆ. ಅವರು ಉತ್ತರಪ್ರದೇಶದಲ್ಲಿ ಏನನ್ನೂ ಮಾಡಲು ಸಾಧ್ಯವಾಗದ ಕಾರಣ ಇಲ್ಲಿದ್ದಾರೆಯೇ ಎಂದು ನಿರೂಪಕ ಕೇಳುತ್ತಾನೆ. ಆತ ಸಮುದಾಯದ ಹೆಸರನ್ನು ಉಲ್ಲೇಖಿಸದಿದ್ದರೂ, ಪ್ರೇಕ್ಷಕರಿಗೆ ಇದು ಸ್ಪಷ್ಟವಾಗುತ್ತದೆ. ಆತ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿದ್ದಾನೆ. ಸಾರಾಯಿಪಾಳ್ಯದಲ್ಲಿರುವ ದೇವಸ್ಥಾನದ ಮೇಲೆ ದಾಳಿ ನಡೆಸಲು ಯೋಜಿಸಲಾಗಿದೆ ಎಂದು ಪಬ್ಲಿಕ್ ಟಿವಿ ಪ್ರತಿನಿಧಿ ಹೇಳಿದ್ದಾನೆ” ಎಂದು ಸಿಎಎಚ್ ಎಸ್ ದೂರಿನಲ್ಲಿ ಉಲ್ಲೇಖಿಸಿದೆ.
“ದಾಳಿಗಳನ್ನು ಯೋಜಿಸಲಾಗಿದೆ ಎನ್ನುವ ವರದಿಗಾರನು ತನ್ನ ಹೇಳಿಕೆಗೆ ಒಂದೇ ಒಂದು ಪೊಲೀಸ್ ಮೂಲವನ್ನು ಉಲ್ಲೇಖಿಸುವುದಿಲ್ಲ. ಬದಲಿಗೆ, ವೈಯಕ್ತಿಕ ದ್ವೇಷದ ಕಾರಣದಿಂದ ಮೂವರನ್ನು ಬಂಧಿಸಲಾಗಿದೆ ಎಂದು ಅವರು ಪೊಲೀಸ್ ಮೂಲಗಳನ್ನು ಹೇಳುತ್ತಿವೆ ಎನ್ನುತ್ತಾನೆ. ಪೊಲೀಸರಿಂದ ಸ್ಪಷ್ಟನೆಗಳು ದೊರೆತರೂ, ಹಿಂದೂಗಳ ವಿರುದ್ಧ ಪಿತೂರಿ ನಡೆದಿರುವುದಾಗಿ ಪ್ರತಿಪಾದಿಸಿ ವರದಿಗಳನ್ನು ಮಾಡಲಾಗಿದೆ” ಎಂದು ದೂರಿನಲ್ಲಿ ವಿವರಿಸಲಾಗಿದೆ.
“ಪೊಲೀಸರ ಕಣ್ಣು ತಪ್ಪಿಸಿ” ಮಂಡ್ಯ ಮೂಲದ ವಿದ್ಯಾರ್ಥಿ ಮುಸ್ಕಾನ್ ಖಾನ್ ಸೌದಿ ಅರೇಬಿಯಾಕ್ಕೆ “ಉಗ್ರರನ್ನು ಭೇಟಿಯಾಗಲು” ಹೋಗಿರುವುದಾಗಿ ಕನ್ನಡ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಮಾಡಿವೆ. ಪರಿಶೀಲಿಸದೆ ಸುದ್ದಿ ಪ್ರಕಟಿಸಿದ ಪವರ್ ಟಿವಿ, ಪಬ್ಲಿಕ್ ಟಿವಿ, ನ್ಯೂಸ್ 18 ಕನ್ನಡ ಮತ್ತು ಏಷ್ಯಾನೆಟ್ ಸುವರ್ಣ ಸಂಪಾದಕರಿಗೆ ಸಿಎಎಚ್ ಎಸ್ ದೂರು ಸಲ್ಲಿಸಿದೆ.
“ವಿದೇಶಕ್ಕೆ ಹಾರಿದ ವಿದ್ಯಾರ್ಥಿನಿ ಮುಷ್ಕಾನ್; ಉಗ್ರಗಾಮಿಗಳ ಭೇಟಿ ಸಂಚು ಇದೆಯಾ?” ಎಂದು ಪವರ್ ಟಿವಿ ವರದಿ ಬರೆದರೆ ಇತರ ಚಾನೆಲ್ ಗಳು ಇದೇ ರೀತಿಯ ಹೇಳಿಕೆಗಳನ್ನು ನೀಡಿವೆ. ಬಲಪಂಥೀಯ ಪೋರ್ಟಲ್ OpIndia ಕೂಡ ಇದೇ ರೀತಿ ವರದಿ ಮಾಡಿದೆ. ಸೌದಿ ಅರೇಬಿಯಾಕ್ಕೆ ಮುಸ್ಕಾನ್ ಪ್ರವಾಸ ಮಾಡಿರುವ ಕುರಿತು ಆಗಿರುವ ಸುಳ್ಳು ಸುದ್ದಿಗಳಿಂದಾಗಿ ಆ ಹೆಣ್ಣು ಮಗಳಿಗೆ ಅಪಾಯ ಉಂಟಾಗಿದೆ. ಇಂತಹ ಬೇಜವಾಬ್ದಾರಿ ಮತ್ತು ದುರುದ್ದೇಶಪೂರಿತ ವರದಿಗಳಿಂದಾಗಿ ಮುಸ್ಕಾನ್ ಜೀವನ ಮತ್ತು ಸುರಕ್ಷತೆಗೆ, ಮುಸ್ಕಾನ್ ಕುಟುಂಬಕ್ಕೆ ಅಪಾಯ ಎದುರಾಗಿದೆ” ಎಂದು ತನ್ನ ದೂರಿನಲ್ಲಿ ಸಿಎಎಚ್ಎಸ್ ತಿಳಿಸಿದೆ.
ವೈಯಕ್ತಿಕ ಕಾರಣಕ್ಕಾಗಿ ಮುಸ್ಕಾನ್ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದು, ಇದಕ್ಕೆ ಪೊಲೀಸರ ಅನುಮತಿ ಅಗತ್ಯವಿಲ್ಲ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತಿಳಿಸಿದ್ದಾರೆ. ಮುಸ್ಕಾನ್ ಮತ್ತು ಆಕೆಯ ಕುಟುಂಬದ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಉಮ್ರಾ ಯಾತ್ರೆಗಾಗಿ ಮುಸ್ಕಾನ್ ಸೌದಿ ಅರೇಬಿಯಾದಲ್ಲಿದ್ದರು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ.
ದ್ವೇಷ ಭಾಷಣ ಬೇಡ ಅಥವಾ ದ್ವೇಷ ಭಾಷಣದ ವಿರುದ್ಧ ಅಭಿಯಾನವನ್ನು ಏಪ್ರಿಲ್ 2020ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಕನ್ನಡ ಸುದ್ದಿ ವಾಹಿನಿಗಳಲ್ಲಿ ಮತಾಂಧತೆ ಮತ್ತು ಕೋಮು ಸಮಸ್ಯೆಗಳ ಸಮಸ್ಯಾತ್ಮಕ ಪ್ರಸಾರದ ನಿದರ್ಶನಗಳ ವಿರುದ್ಧ ಗುಂಪು ನಿರಂತರವಾಗಿ ಧ್ವನಿ ಎತ್ತುತ್ತಿದೆ.

Join Whatsapp