ಅಜ್ಮೀರ್ ದರ್ಗಾದ ಮೇಲೆಯೂ ಸಂಘಪರಿವಾರ ಕಣ್ಣು; ಸಮೀಕ್ಷೆಗೆ ಒತ್ತಾಯ

Prasthutha|

ಜೈಪುರ: ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ನಂತರ ಇದೀಗ ಭಾರತದ ಮಕ್ಕಾ ಎಂದೇ ಖ್ಯಾತವಾದ ಅಜ್ಮೀರ್ ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ದರ್ಗಾದ ಸಮೀಕ್ಷೆ ನಡೆಸುವಂತೆ ಸಂಘಪರಿವಾರ ಸಂಘಟನೆಗಳಿಂದ ಒತ್ತಾಯ ಕೇಳಿಬಂದಿದೆ.
ಭಾರತದ ಮಕ್ಕಾ ಎಂದೇ ಖ್ಯಾತವಾದ ಅಜ್ಮೀರ್ ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ದರ್ಗಾ ಕೂಡ ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿತ್ತು ಎಂದು ಹೊಸ ತಗಾದೆಯನ್ನು ಸಂಘಪರಿವಾರ ಆರಂಭಿಸಿದ ಸೂಚನೆ ಕಾಣುತ್ತಿದೆ. ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ)ಯು ದರ್ಗಾ ಆವರಣವನ್ನು ಸರ್ವೆ ಮಾಡಬೇಕು ಎಂದು ಸಂಘಟನೆಯೊಂದು ಒತ್ತಾಯಿಸಿದೆ.
“ಅಜ್ಮೀರ್ ದರ್ಗಾದ ಗೋಡೆಗಳು ಮತ್ತು ಕಿಟಕಿಗಳ ಮೇಲೆ ಹಿಂದೂ ಚಿಹ್ನೆಗಳು ಇವೆ” ಎಂದು ಮಹಾರಾಣಾ ಪ್ರತಾಪ್ ಸೇನೆಯ ರಾಜವರ್ಧನ್ ಸಿಂಗ್ ಪರ್ಮಾರ್ ಪ್ರತಿಪಾದಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆತ “ಅಜ್ಮೀರದ ಖ್ವಾಜಾ ಗರೀಬ್ ನವಾಜ್ ದರ್ಗಾ ಈ ಹಿಂದೆ ಪ್ರಾಚೀನ ಹಿಂದೂ ದೇವಾಲಯವಾಗಿತ್ತು. ಇದರ ಗೋಡೆಗಳು ಮತ್ತು ಕಿಟಕಿಗಳ ಮೇಲೆ ಸ್ವಸ್ತಿಕ್ ಚಿಹ್ನೆಗಳು ಇವೆ. ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆಯು ದರ್ಗಾದ ಸಮೀಕ್ಷೆಯನ್ನು ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಒತ್ತಾಯಿಸಿದ್ದಾರೆ.
ಅಜ್ಮೀರ್ ದರ್ಗಾದ ಆಡಳಿತ ಮಂಡಳಿಯು ಈ ಹೇಳಿಕೆಯನ್ನು ತಿರಸ್ಕರಿಸಿದೆ. ಅಂತಹ ಯಾವುದೇ ಚಿಹ್ನೆ ದರ್ಗಾದ ಗೋಡೆಗಳು ಮತ್ತು ಕಿಟಕಿಗಳಲ್ಲಿ ಇಲ್ಲ ಎಂದು ಹೇಳಿದೆ.
ದರ್ಗಾದಲ್ಲಿ ಅಂತಹ ಯಾವುದೇ ಚಿಹ್ನೆಗಳಿಲ್ಲ. ಹಾಗಾಗಿ ಈ ಹಕ್ಕು ನಿರಾಧಾರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಹಿಂದೂಗಳು ಮತ್ತು ಮುಸ್ಲಿಮರು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡುತ್ತಾರೆ,” ಎಂದು ಅಂಜುಮನ್ ಸೈಯದ್ ಝುಡ್ಗಾನ್‌ಗೆ ಅಧ್ಯಕ್ಷ ಮೊಯಿನ್ ಚಿಸ್ತಿ ಹೇಳಿದ್ದಾರೆ.
“ದರ್ಗಾದಲ್ಲಿ ಸ್ವಸ್ತಿಕ್ ಚಿಹ್ನೆ ಎಲ್ಲೂ ಇಲ್ಲ ಎಂದು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. 850 ವರ್ಷಗಳಿಂದ ದರ್ಗಾ ಇದ್ದು, ಅಂತಹ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಹಿಂದೆ ಎಂದೂ ಇಲ್ಲದ ವಾತಾವರಣವು ಇಂದು ದೇಶದಲ್ಲಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

“ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಎಂದರೆ ಧರ್ಮಾತೀತವಾಗಿ ಅಲ್ಲಿ ಪ್ರಾರ್ಥನೆ ಸಲ್ಲಿಸುವ ಕೋಟ್ಯಂತರ ಜನರ ಭಾವನೆಗಳನ್ನು ನೋಯಿಸುವುದು ಎಂದರ್ಥ. ಈ ರೀತಿಯ ಅಂಶಗಳ ಬಗ್ಗೆ ಸರಕಾರ ಸ್ಪಂದಿಸಬೇಕು,” ಎಂದು ಮೊಯಿನ್ ಚಿಸ್ತಿ ಸರಕಾರವನ್ನು ಕೇಳಿಕೊಂಡಿದ್ಧಾರೆ.

ಕೋಮು ಸೌಹಾರ್ದತೆ ಕದುಡುವ ಪ್ರಯತ್ನ: “ಈ ರೀತಿಯ ಹೇಳಿಕೆಗಳು ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದುಡುವ ಪ್ರಯತ್ನವಾಗಿದೆ,” ಎಂದು ಖ್ವಾಜಾ ಗರೀಬ್ ನವಾಜ್ ದರ್ಗಾದ ಕಾರ್ಯದರ್ಶಿ ವಾಹಿದ್ ಹುಸೇನ್ ಚಿಸ್ತಿ ಹೇಳಿದರು.

- Advertisement -

ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ನಂತರ ಇದೀಗ ರಾಜಸ್ಥಾನದ ಅಜ್ಮೀರ್ ದರ್ಗಾದ ಸಮೀಕ್ಷೆಗೆ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ವಿವಾದವೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಸಾಧ್ಯತೆಗಳು ದಟ್ಟವಾಗಿದೆ.

Join Whatsapp