‘ಕೋವಿಡ್, ಆರ್ಥಿಕ ಸಂಕಷ್ಟದಲ್ಲಿರುವ ಯುವ ಸಮೂಹಕ್ಕೆ ಉದ್ಯೋಗ ಒದಗಿಸಿ’: ರಾಜ್ಯ ಯುವ ಕಾಂಗ್ರೆಸ್ ಕಾರ್ಯಕಾರಣಿ ಆಗ್ರಹ

Prasthutha|

ಬೆಂಗಳೂರು: ಕೋವಿಡ್ ಸಮಸ್ಯೆ, ಆರ್ಥಿಕ ತೊಂದರೆಗಳಿಂದ ಭಾರೀ ಸಂಕಷ್ಟದಲ್ಲಿರುವ ರಾಜ್ಯದ ಯುವ ಸಮೂಹಕ್ಕೆ ಉದ್ಯೋಗ ಒದಗಿಸಲು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದ್ಯತೆ ನೀಡಬೇಕು ಎಂದು ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕಾರಣಿ ಆಗ್ರಹಿಸಿದೆ.

- Advertisement -

ಸಭೆ ಕುರಿತು ಮಾಹಿತಿ ನೀಡಿರುವ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಯುವ ಸಮೂಹ ಭಾರೀ ನಿರೀಕ್ಷೆ ಹೊಂದಿದೆ. ಎಲ್ಲಾ ವರ್ಗದವರು ಹಿಂದೆಂದೂ ಇಲ್ಲದಷ್ಟು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಕೋವಿಡ್ ನಿಂದಾಗಿ ಸಾಕಷ್ಟು ಕೈಗಾರಿಕೆ, ವ್ಯಾಪಾರ ವಹಿವಾಟು ಮುಚ್ಚಿದ್ದು, ಜನ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದ್ದಾರೆ.

ಕರ್ನಾಟಕ ಹೂಡಿಕೆಗೆ ಪ್ರಶಸ್ತವಾದ ತಾಣವಾಗಿದ್ದು, ನಾವಿನ್ಯತೆ, ಅನ್ವೇಷಣೆ, ನವೋದ್ಯಮ, ತಾಂತ್ರಿಕತೆ, ಪ್ರತಿಭೆಗಳ ತಾಣವಾಗಿದೆ. ಇಂತಹ ನಾಡಿಗೆ ಯುವ ನೇತಾರ ಬಸವರಾಜ ಬೊಮ್ಮಾಯಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಎಲ್ಲಾ ವಲಯಗಳಲ್ಲೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ.

- Advertisement -

ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಬದುಕಿನ ಎಲ್ಲಾ ಆಯಾಮಗಳು, ಎಲ್ಲಾ ಹಂತಗಳ ಮೇಲೂ ಪ್ರತಿಕೂಲ ದುಷ್ಪರಿಣಾಮ ಬೀರಿದ್ದು, ಹೊಸ ಸರ್ಕಾರ ಜನರ ಮೇಲಿನ ಹೊರೆ ಕಡಿಮೆ ಮಾಡಬೇಕು. ಜನರ ಬದುಕಿನಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸಬೇಕು. ರಾಜ್ಯದ ಸಾಲದ ಮೊತ್ತ 4.60 ಲಕ್ಷ ಕೋಟಿ ದಾಟಿದ್ದು, ಕರ್ನಾಟಕವನ್ನು ಸಾಲದ ಸುಳಿಯಿಂದ ಪಾರು ಮಾಡಬೇಕು. ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನೂತನ ಮುಖ್ಯಮಂತ್ರಿ ಅವರಿಗೆ ಇದು ನಿಜಕ್ಕೂ ಸುವರ್ಣಾವಕಾಶವಾಗಿದೆ. ರಾಜ್ಯವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾಮನ್ ಮೂಲಕ ಜಿ.ಎಸ್.ಟಿ. ಪರಿಹಾರವನ್ನು ಸೂಕ್ತ ರೀತಿಯಲ್ಲಿ ಪಡೆಯಲು ಪ್ರಯತ್ನಿಸಬೇಕು.ನ್ಯಾಯವದ್ಧವಾಗಿ ಕೇಂದ್ರದ ಅನುದಾನ ಪಡೆಯಲು ಆದ್ಯತೆ ನೀಡಬೇಕು. ಲೋಕಸಭಾ ಸದಸ್ಯರು, ಆರು  ಕೇಂದ್ರ ಸಚಿವರ ಜತೆ ನಿರಂತರವಾಗಿ ಸಭೆಗಳನ್ನು ನಡೆಸಿ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರದ ಕೈಗೊಂಬೆಯಾಗದೇ ಪರಿಣಾಮಕಾರಿ ಒತ್ತಡ ಹೇರಬೇಕು ಎಂದು ರಕ್ಷಾ ರಾಮಯ್ಯ ಒತ್ತಾಯಿಸಿದ್ದಾರೆ.

ಆಗಸ್ಟ್ 5 ಕ್ಕೆ ಸಂಸತ್ ಘೇರಾವ್: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಯುವ ಕಾಂಗ್ರೆಸ್ ನಿಂದ ಸಂಸತ್ ಘೇರಾವ್ ಹಾಕಲು ತೀರ್ಮಾನಿಸಲಾಗಿದೆ. ಕಾರ್ಯಕಾರಣಿಯಲ್ಲಿ ಈ ಸಂಬಂಧ ಚರ್ಚೆ ನಡೆಸಿದ್ದು, ಯುವ ಕಾಂಗ್ರೆಸ್ ತಂಡ  ದೆಹಲಿಯಲ್ಲೂ ತನ್ನ ಹೋರಾಟ ಮುಂದುವರೆಸಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ತೀರ್ಮಾನಗಳ ವಿರುದ್ಧ ಹೋರಾಟ ತೀವ್ರಗೊಳಿಸಲು ಸಹ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಮೊದಲಿನಿಂದಲೂ ಪ್ರಗತಿಪರ ಆಲೋಚನೆಗಳನ್ನೇ ಮಾಡುತ್ತಾ ಬಂದಿರುವ ವಿಭಿನ್ನ ರಾಜ್ಯವಾಗಿದ್ದು, ಉತ್ತರ ಕರ್ನಾಟಕಕ್ಕೆ ಸೇರಿರುವ ಮುಖ್ಯಮಂತ್ರಿ ಅವರು ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಒತ್ತು ನೀಡಬೇಕು. ಕಲ್ಯಾಣ ಕರ್ನಾಟಕ ಹೆಸರು ಬದಲಾವಣೆ ಮಾಡಿದರೆ ಸಾಲದು ನೈಜ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಜಲ ಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ನೀವು ಕಳಸಾ ಬಂಡೂರಿ ಸೇರಿದಂತೆ ಎಲ್ಲಾ ಜಲ ವಿವಾದಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ, ರಾಷ್ಟ್ರೀಯ ಯುವ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಯಾದವ್ , ಕಾರ್ಯದರ್ಶಿಗಳಾದ ಸುರಭಿ ದ್ವಿವೇದಿ , ವಿದ್ಯಾ ಬಾಲಕೃಷ್ಣ , ಸುಮಯ್ಯ ತಬ್ರೇಜ್  ಮತ್ತಿತರರು ಉಪಸ್ಥಿತರಿದ್ದರು.

Join Whatsapp