ಸೋಲಿನ ಭಯದಿಂದ ಯಡಿಯೂರಪ್ಪ ಅಧಿಕಾರಿಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ : ಡಿಕೆಶಿ ಆರೋಪ

Prasthutha|

ಸಂವಿಧಾನ ಬದ್ಧವಾಗಿ ಮಾಡಿದ ಪ್ರಮಾಣ ವಚನವನ್ನು ದಿಕ್ಕರಿಸುತ್ತಿದ್ದಾರೆ. ಸೋಲಿನ ಭಯ ಯಡಿಯೂರಪ್ಪರನ್ನು ಆವರಿಸಿದೆ. ಅಧಿಕಾರಿಗಳನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

- Advertisement -

ಅವರು ಸದಾಶಿವನಗರದ ತನ್ನ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ವಿರುದ್ಧ ಜಾತಿ ಸಭೆ ಮಾಡಿರುವುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಲೆಕ್ಷನ್ ಅಧಿಕಾರಿಗೆ ಮನವಿ ಮಾಡುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.

- Advertisement -

ದೇಶದಲ್ಲಿ ಖಾಸಗೀಕರಣ ಮಾಡಲಾಗುತ್ತಿದೆ. ಎಲ್ಲವನ್ನೂ ಬ್ಯುಸಿನೆಸ್ ರೀತಿಯಲ್ಲಿ ಸರಕಾರ ನೋಡುತ್ತಿದೆ. ಬ್ಯುಸಿನೆಸ್‌ ಇವರಿಗೆ ಮುಖ್ಯವಾಗಿದೆ. ಸಾರಿಗೆ ನೌಕರರನ್ನು ಕರೆದು ಮಾತನಾಡಿ ಅವರ ಬೇಡಿಕೆ ಏನು ಎಂದು ಕೇಳಲು ಸರಕಾರ ಮುಂದಾಗುತ್ತಿಲ್ಲ. ಬಂಡವಾಳಶಾಹಿಗಳಿಗೆ ಸರಕಾರಿ ಸಂಸ್ಥೆಗಳನ್ನು ಮಾರುವ ಒಳ ಸಂಚು ಮಾಡುವ ಬಗ್ಗೆ ನನಗೆ ಅನುಮಾನ ಕಾಡುತ್ತಿದೆ. ಇದೀಗಾಗಲೇ ಹಲವು ಸಂಸ್ಥೆಗಳನ್ನು ಮಾರಿದ್ದಾರೆ.

ಕೇಂದ್ರ ಸರಕಾರ ಬಂದ ಬಳಿಕ ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಸರಕಾರ ಸಂಪೂರ್ಣ ವೈಫಲ್ಯವಾಗಿದೆ.‌ಇಂತಹ ಕೆಟ್ಟ ಸರಕಾರವನ್ನು ಇದುವರೆಗೆ ನಾನು ನೋಡಿಯೇ ಇಲ್ಲ. ಕೊರೊನ ಸಂದರ್ಭದಲ್ಲಿ ಮಾತು ಕೊಟ್ಟ ಸರಕಾರ ತನ್ನ ಮಾತನ್ನು ಉಳಿಸಿಕೊಳ್ಳದೆ ಸಾರಿಗೆ ನೌಕರರ ಮೇಲೆ ದಬ್ಬಾಳಿಕೆ ಮಾಡಿದೆ.‌ ಕೋರೊನಾ ಎಂಬ ನೆಪವನ್ನು ನೀಡುತ್ತಿದೆ. ವೈಜ್ಞಾನಿಕವಾಗಿ ಯಾವುದೇ ತಿಳುವಳಿಕೆಯಿಲ್ಲದೆ ಸರಕಾರ ಜನರಿಗೆ ಮೋಸ ಮಾಡಿದೆ. ಪ್ರತಿಯೊಂದು ಬಳಕೆಯ ವಸ್ತುಗಳಿಗೆ ದರ ಹೆಚ್ಚಿಸಿದೆ.

ತೈಲ ಬೆಲೆ ಏರಿಕೆಯ ಬಗ್ಗೆ ರಾಜ್ಯದಲ್ಲಿರುವ ಒಬ್ಬ ಸಂಸದರೂ ಮಾತನ್ನು ಎತ್ತುತ್ತಿಲ್ಲ.‌ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಒಂದು ಹೇಳಿಕೆಯನ್ನೂ ನೀಡಿಲ್ಲ ಯಾಕೆ?. ಜನರನ್ನು ಹಿಂಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಸರಕಾರ ಮಾಡಿರುವ ಜನಪರ ಯೋಜನೆಯನ್ನು ಜನತೆಗೆ ತಿಳಿಸಲಿ. ಅದನ್ನು ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ಬಿತ್ತರಿಸುವ ತಾಕತ್ತು ಈ ಸರಕಾರಕ್ಕೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಪ್ರತಿಭಟನೆಗೆ ಮುಂದಾದ ಸಾರಿಗೆ ನೌಕರರನ್ನು ಬಂಧಿಸುವ ಮೂಲಕ ಸರಕಾರ ಪ್ರತಿಭಟನೆಯನ್ನು ಸರಕಾರ ಹತ್ತಿಕ್ಕುವ ಕೆಲಸ ಮಾಡಿದೆ. ಜನರ ಹಕ್ಕನ್ನು ಈ ಸರಕಾರ ಕಿತ್ತುಕೊಳ್ಳುತ್ತಿದೆ. ಕನಿಷ್ಠ ಕರೆದು ಮಾತನಾಡದ ಈ ಸರಕಾರದ ಬಗ್ಗೆ ಏನೂ ಹೇಳಬೇಕೆಂದೇ ತೋಚುತ್ತಿಲ್ಲ ಎಂದು ಹೇಳಿದ್ದಾರೆ. ಸಾರಿಗೆ ನೌಕರರ ಹೋರಾಟದೊಂದಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅವರ ಹೋರಾಟದಲ್ಲಿ ನಾವೂ ಕೈ ಜೋಡಿಸುತ್ತೇವೆ.

ಚಪ್ಪಾಳೆ ತಟ್ಟಿ, ಜಗಾಟೆ ಬಾರಿಸಿ ಎಂದ ಪ್ರಧಾನಿ ಮೋದಿ ಯಾಕೆ ಮಾತನಾಡುತ್ತಿಲ್ಲ? ಕೊರೊನಾ ಹೆಸರಿನಲ್ಲಿ ಮತ್ತೊಮ್ಮೆ ಭ್ರಷ್ಟಾಚಾರ ನಡೆಯುವ ಅನುಮಾನವಿದೆ. ರಾತ್ರಿ ಹೊತ್ತು ಬರುತ್ತದೆ ಹಗಲು ಹೊತ್ತು ಬರುವುದು ಎಂದು ಯಾವ ವೈಜ್ಞಾನಿಕವಾಗಿ ಸರಕಾರ ಹೇಳುತ್ತಿದೆ ಎಂದು ಪ್ರಶ್ನಿಸಿದ ಡಿಕೆಶಿ ಸರಕಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.

Join Whatsapp