ಬೆಂಗಳೂರು ಎಸ್ ಡಿಪಿಐ ಕಚೇರಿಗಳಿಗೆ ಪೊಲೀಸ್ ದಾಳಿ | ವೆಲ್ಫೇರ್ ಪಾರ್ಟಿ ಖಂಡನೆ

Prasthutha|

ಮಂಗಳೂರು : ಇತ್ತಿಚೆಗೆ ನಡೆದ ಬೆಂಗಳೂರು ಗಲಭೆ ಹಿನ್ನೆಲೆಯಲ್ಲಿ ನಗರದ ಎಸ್ ಡಿಪಿಐ ಕಚೇರಿಗೆ ಪೊಲೀಸರು ದಾಳಿ ನಡೆಸಿರುವುದನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಖಂಡಿಸಿದೆ. ಗಲಭೆಗೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಆದರೆ ಈ ನೆಪದಲ್ಲಿ ಒಂದು ನೋಂದಾಯಿತ ರಾಜಕೀಯ ಪಕ್ಷವನ್ನು ಗುರಿಯಾಗಿಸುವುದು ಸರಿಯಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಅಡ್ವೊಕೇಟ್ ತಾಹಿರ್ ಹುಸೇನ್ ಹೇಳಿದ್ದಾರೆ.

ಎಸ್ ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿರುವುದನ್ನು ನಾವು ಖಂಡಿಸುತ್ತೇವೆ. ಯಾಕೆಂದರೆ, ಒಂದು ರಾಜಕೀಯ ಪಕ್ಷ, ಅದರಲ್ಲೂ ಅಲ್ಪಸಂಖ್ಯಾತರ ಹಿನ್ನೆಲೆಯುಳ್ಳ ಪಕ್ಷವನ್ನು ಬಲಿಪಶು ಮಾಡುತ್ತಿರುವುದು ಖಂಡಿತವಾಗಿಯೂ ತಪ್ಪು ಎಂದು ಅವರು ತಿಳಿಸಿದ್ದಾರೆ.

- Advertisement -

ರಾಜಕೀಯ ದುರುದ್ದೇಶದ ಒಂದು ಅಪರಾಧ ನಡೆದಿದೆ. ಅದರ ರೂವಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಒಂದು ನೋಂದಾಯಿತ ಪಕ್ಷಕ್ಕೆ ಕಿರುಕುಳ ನೀಡುವುದು ಸರಿಯಲ್ಲ. ನಾವು ಅದನ್ನು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಗಲಭೆಯ ಬಳಿಕ ಹಲವಾರು ಮಂದಿ ಅಮಾಯಕರ ವಿರುದ್ಧ ಯುಎಪಿಎಯಂತಹ ಕಾನೂನು ಜಾರಿಗೊಳಿಸುತ್ತಿರುವುದು ತಪ್ಪು. ಈ ಗಲಭೆಗೆ ನಿಜವಾಗಿಯೂ ಕಾರಣವಾದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದರ ಬದಲು, ಅಮಾಯಕ ಮುಸ್ಲಿಮ್ ಯುವಕರನ್ನು ಗುರಿಯಾಗಿಸುವುದನ್ನೂ ನಾವು ಖಂಡಿಸುತ್ತೇವೆ. ಈ ಬಂಧನದ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ನಾವು ಸರಕಾರವನ್ನು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಯಾರಿಂದಾಗಿ ಈ ಗಲಭೆಗೆ ಕಾರಣವಾಯಿತೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಗಲಭೆಯಿಂದಾದ ನಷ್ಟದ ವಸೂಲಿಯ ಬಗ್ಗೆ ಮಾತನಾಡಲಾಗುತ್ತಿದೆ. ಆ ಎಲ್ಲ ಶೇ.100ರಷ್ಟು ನಷ್ಟವನ್ನು ಅವರಿಂದಲೇ ವಸೂಲಿ ಮಾಡಬೇಕಾಗಿದೆ. ಯಾಕೆಂದರೆ, ಅವರಿಂದಲೇ ಗಲಭೆಗೆ ಮುಖ್ಯ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಸಂಬಂಧಿಸಿ, ಇತ್ತೀಚೆಗೆ ಬೆಂಗಳೂರಿನ ಎಸ್ ಡಿಪಿಐ ಕಚೇರಿಗಳಿಗೆ ಪೊಲೀಸರು ದಾಳಿ ನಡೆಸಿ, ಪರಿಶೀಲಿಸಿದ್ದರು.

- Advertisement -