ಮೊಬೈಲು ಕಸಿಯಲು ಬಂದ ಬೈಕ್ ದರೋಡೆಕೋರರ ಬೆನ್ನಟ್ಟಿ, ಗುದ್ದಾಡಿದ 15 ವರ್ಷದ ಹುಡುಗಿ | ವೀಡಿಯೊ ನೋಡಿ ನೆಟ್ಟಿಗರು ಫುಲ್ ಖುಷ್

ನವದೆಹಲಿ : ಸಾಮಾನ್ಯವಾಗಿ ಹುಡುಗಿಯರು ದಾಳಿಗೊಳಗಾದ, ದೌರ್ಜನ್ಯಕ್ಕೀಡಾದ ಸುದ್ದಿಯನ್ನೇ ಕೇಳುತ್ತಿರುತ್ತೇವೆ. ಆದರೆ, ಪಂಜಾಬಿನ ಹುಡುಗಿಯೊಬ್ಬಳು ಇಬ್ಬರು ಶಸ್ತ್ರಾಧಾರಿ ಕಳ್ಳರೊಂದಿಗೆ ಹೋರಾಡಿ ಭಾರಿ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಹರಿತವಾದ ಆಯುಧ ಹೊಂದಿದ್ದ ಇಬ್ಬರು ಮೊಬೈಲ್ ಕಳ್ಳರ ವಿರುದ್ಧ ಗುದ್ದಾಡಿದ 15 ವರ್ಷದ ಹುಡುಗಿಯೊಬ್ಬಳ ವೀಡಿಯೊ ಈಗ ಎಲ್ಲೆಡೆ ವೈರಲ್ ಆಗಿದ್ದು, ಹುಡುಗಿಯ ಧೈರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಜಲಂಧರ್ – ಕಪುರ್ತಲ ರಸ್ತೆಯ ದೀನ ದಯಾಳ್ ಉಪಾಧ್ಯಾಯ ನಗರದಲ್ಲಿ ಬೈಕ್ ನಲ್ಲಿದ್ದ ಯುವಕರು ಟ್ಯೂಶನ್ ನಿಂದ ಮರಳುತ್ತಿದ್ದ ಕುಸುಮ್ ಕುಮಾರಿಯ ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಬೈಕ್ ನಲ್ಲಿದ್ದ ಒಬ್ಬಾತನನ್ನು ಎಳೆದು ಕೆಳಗೆ ಹಾಕುವಲ್ಲಿ ಕುಸುಮ್ ಯಶಸ್ವಿಯಾಗಿದ್ದಳು. ಅಷ್ಟರಲ್ಲಿ ಸ್ಥಳೀಯರು ಕುಸುಮ್ ಸಹಾಯಕ್ಕೆ ಧಾವಿಸಿದ್ದಾರೆ. ಈ ಕುರಿತ ಸಿಸಿಟಿವಿ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

- Advertisement -

ನಾನು ಮನೆಗೆ ಹೋಗುತ್ತಿದ್ದಾಗ, ಬೈಕ್ ನಲ್ಲಿ ಇಬ್ಬರು ಬಂದು ನನ್ನ ಮೊಬೈಲ್ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಹಿಂಬದಿ ಸವಾರ ನನ್ನ ಬ್ಯಾಗ್ ಕಿತ್ತುಕೊಂಡು, ಫೋನ್ ಕಸಿದುಕೊಳ್ಳಲು ನೋಡಿದ. ಹೇಗೋ ಮಾಡಿ, ನಾನು ತಡೆದೆ ಮತ್ತು ಆತನ ಕೈ ಹಿಡಿದೆಳೆದೆ. ಸ್ವಲ್ಪ ದೂರದವರೆಗೆ ನಾನು ಅವರನ್ನು ಬೆನ್ನಟ್ಟಿದೆ ಮತ್ತು ಹಿಂಬದಿ ಸವಾರನ ಟೀ ಶರ್ಟ್ ಬಿಗಿಯಾಗಿ ಹಿಡಿದೆ. ಆತ ನನಗೆ ಹಲ್ಲೆ ಮಾಡಿದ ಮತ್ತು ನನ್ನ ಕೈಗೆ ಹರಿತವಾದ ವಸ್ತುವಿನಿಂದ ಗಾಯಗೊಳಿಸಿದ. ಆದರೂ, ನಾನು ಬಿಡಲಿಲ್ಲ, ಆತನನ್ನು ಹಿಡಿದೆಳೆದೆ. ಸ್ವಲ್ಪ ಸಮಯದ ನಂತರ ಹಾದಿಹೋಕರು ಆಗಮಿಸಿ, ಆತನನ್ನು ಹಿಡಿದರು ಮತ್ತು ನನ್ನನ್ನು ರಕ್ಷಿಸಿದರು. ನನ್ನ ಫೋನ್ ನನಗೆ ಸಿಕ್ಕಿತು’’ ಎಂದು ಕುಸುಮ್ ಹೇಳಿಕೊಂಡಿದ್ದಾಳೆ.
ಬಾಲಕಿಯ ಈ ಅಪ್ರತಿಮ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೀಡಿಯೋ ಕೃಪೆ : ಸಿಎನ್ ಎನ್ ನ್ಯೂಸ್ 18

- Advertisement -