ಯೋಗಿ ಕೈಯಲ್ಲಿ ಉತ್ತರ ಪ್ರದೇಶದ ಹಿಂಸಾ ಯೋಗ

Prasthutha|

ಯತಿಯ ಉಡುಗೆಯೊಳಗಿನ ತೋಳ

- Advertisement -

‘ಅವರು ಒಬ್ಬ ಹಿಂದುವನ್ನು ಕೊಂದರೆ ನಾವು ನೂರು ಜನ ಮುಸ್ಲಿಮರನ್ನು ಕೊಲ್ಲುತ್ತೇವೆ’ ಇದು ಯಾರೋ ಸಾಮಾನ್ಯ ತಲೆ ಕೆಟ್ಟವನು ಹೇಳಿದ ಮಾತಲ್ಲ, ದೇಶದಲ್ಲಿ ಅತಿ ಹೆಚ್ಚು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2017ರಲ್ಲಿ ಹೇಳಿದ ಯೋಗಾಯೋಗದ ಮಾತು ಇದು.

ದೇಶದ ಬೀಮಾರು ರಾಜ್ಯಗಳು ಎನ್ನುವಾಗ ಮೊದಲ ಸ್ಥಾನದಲ್ಲಿ ಈ ಉತ್ತರ ಪ್ರದೇಶ ನಿಲ್ಲುತ್ತದೆ. ಬ್ರಾಹ್ಮಣ್ಯದ ಮತಗಳು, ಮುಸ್ಲಿಮರ ಮತಗಳು (ಕಾಶ್ಮೀರ ಹೊರತುಪಡಿಸಿ) ದಲಿತ ಮತಗಳು ಇತರ ರಾಜ್ಯಗಳಿಗಿಂತ ಹೆಚ್ಚು ಇರುವ ರಾಜ್ಯ ಈ ಉತ್ತರ ಪ್ರದೇಶ. ಆದರೆ ಎಲ್ಲ ಪಕ್ಷಗಳ ಗೆಲುವಿನಲ್ಲೂ ಬ್ರಾಹ್ಮಣ್ಯವು ತಮ್ಮ ಗೆಲುವು ಉಳಿಸಿಕೊಳ್ಳುತ್ತದೆ. ದಲಿತರದು ಮೀಸಲಾತಿಯ ಕಾರಣ ಸಂಖ್ಯೆ ವ್ಯತ್ಯಾಸ ಆಗುವುದಿಲ್ಲ. ಆದರೆ ಇತರರದು ಆಳುವನ್ಯಾರೋ ಮೇಯುವನ್ಯಾರೋ ಸ್ಥಿತಿ.

- Advertisement -

ಆದರೆ ಬಿಜೆಪಿ ರಾಜ್ಯದಲ್ಲಿ ಬಲವಾಗುತ್ತ ಬಂದಂತೆ ಮುಸ್ಲಿಂ ಜನಪ್ರತಿನಿಧಿಗಳ ಪ್ರಮಾಣವು 20 ಶೇಕಡಾದಿಂದ 4 ಶೇಕಡಾಕ್ಕೆ ಬಂದು ನಿಂತಿದೆ. ಈ ರಾಜ್ಯದ 80 ಲೋಕಸಭಾ ಕ್ಷೇತ್ರಗಳಲ್ಲಿ 37 ರಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ. ಬಿಜೆಪಿ ಪ್ರಬಲವಾದ ಮೇಲೆ ‘ಹಿಂದು ಒಂದು’ ಇಲ್ಲೆಲ್ಲ ನಿರ್ಣಾಯಕ ಎನಿಸಿದೆ. ಹಾಗಾದರೆ ಇಲ್ಲಿ ‘ಹಿಂದು ಒಂದು’ ನಿರ್ಣಾಯಕರಾಗಿದ್ದಾರೆಯೇ? ಅದೂ ಇಲ್ಲ, ಓಟಿಗೆ ಹಿಂದು ಒಂದು, ಅಧಿಕಾರಕ್ಕೆ ನಾಗಪುರ ಮುಂದು.

ಉತ್ತರಾಖಂಡದ ಯೋಗಿ

ಯೋಗಿಯ ಕತೆಯನ್ನೇ ನೋಡಿ, ಕ್ಷತ್ರಿಯ ಠಾಕೂರ್ ಹಿನ್ನೆಲೆಯ ಯೋಗಿ ಆದಿತ್ಯನಾಥರು ಹಿಂದುಳಿದ ಜೋಗಿಯೊಳಗೆ ತೂರಿ, ಹಿಂದುಳಿದವರ ಮಠ, ಕೋಟಾ, ಆಸ್ತಿ ಹಿಡಿದಿದ್ದಾರೆ. ಇವರು ಕೂಡ ಆಳುವುದು ಇವರಿಗಾಗಿ ಅಲ್ಲ, ಪುರೋಹಿತರಿಗಾಗಿ. ಇನ್ನೇನು ಈ ವರುಷ ಜಾರುತ್ತಿದ್ದಂತೆಯೇ ಮುಂದಿನ ವರ್ಷ ಕಾಲೂರುತ್ತಿದ್ದಂತೆಯೇ ವಿಧಾನ ಸಭೆಗೆ ಚುನಾವಣೆ. ಯೋಗಿಯ ಬಿಟ್ಟರೆ ಬೇರೆ ಯೋಗ್ಯರಿಲ್ಲ. ಅವರ ಆಡಳಿತದಲ್ಲಿ ಕಾನೂನು ಪಾಲನೆಗಾಗಿ ಮಾತ್ರ ರಕ್ತ ಹರಿದಿದೆ. ಉತ್ತರ ಪ್ರದೇಶದ ಯೋಗಾಯೋಗದಿಂದ ಇಂಥ ಉತ್ತಮರು ಈ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ದೊರಕಿದ್ದಾರೆ ಎಂದು ಇತ್ತೀಚೆಗೆ ಪ್ರಧಾನಿ ಮೋದಿಯವರು ಸ್ತುತಿ ಹಾಡಿದ್ದಾರೆ.

ಮೋದಿಯವರಿಗೂ ಉತ್ತರ ಪ್ರದೇಶ ಅನಿವಾರ್ಯ. ಅವರ ಲೋಕಸಭಾ ಕ್ಷೇತ್ರ ಬನಾರಸ್ (ಕಾಶಿ, ವಾರಣಾಸಿ)ಕೂಡ ಉತ್ತರ ಪ್ರದೇಶದ ಭಾಗವೇ ಆಗಿದೆ.ಮೋದಿಯವರು ಪ್ರಧಾನಿಯಾದ ಮೇಲೆ ಗಂಗೆಯಲ್ಲಿ ಎಷ್ಟು ನೀರು ಹರಿದಿದೆಯೋ, ಎಷ್ಟು ಕೊಳಚೆ ಹರಿದಿದೆಯೋ, ಎಷ್ಟು ಹೆಣಗಳು ತೇಲಿವೆಯೋ, ಅದಕ್ಕೆ ತೀರಾ ಕಡಿಮೆಯಾಗದಂತೆ ಉತ್ತರ ಪ್ರದೇಶದಲ್ಲಿ ಹಿಂಸಾಚಾರ, ನೆತ್ತರು ಹರಿದಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ಅಂದಿನ ಉತ್ತರ ಪ್ರದೇಶದ ಇಂದಿನ ಉತ್ತರಾಖಂಡ ರಾಜ್ಯದ ಪೌರಿ ಗಡವಾಲ್ ಗುಡ್ಡ ಪ್ರದೇಶದಲ್ಲಿ ಠಾಕೂರ್ ಕುಟುಂಬದಲ್ಲಿ 1972ರಲ್ಲಿ ಹುಟ್ಟಿದವರು ಅಜಯ ಮೋಹನ್ ಬಿಸ್ತ್. ಘೋರಕನಾಥ ಮಠದ ದಿಗ್ವಿಜಯನಾಥ್ ಸಂಪರ್ಕಕ್ಕೆ ಬಂದು ಮುಂದೆ ಯೋಗಿ ಆದಿತ್ಯನಾಥ ಆದರು. ಗಾಂಧೀಜಿಯವರ ಕೊಲೆಯಲ್ಲಿ ಹಿಂದೂ ಮಹಾಸಭಾದ ದಿಗ್ವಿಜಯನಾಥರ ಬಂಧನವಾಗಿತ್ತು. ಮುಂದೆ ಅವರು 1967ರಲ್ಲಿ ಹಿಂದು ಮಹಾ ಸಭಾದ ಲೋಕ ಸಭಾ ಸದಸ್ಯರಾಗಿ ಗೆದ್ದರು. ಮುಂದೆ ಅವರ ಹಿಂದೆ ಬಂದ ಬಿಸ್ತ್ ಹಿಂದು ಮಹಾ ಸಭಾದ ಹಿಂದು ಯುವ ವಾಹಿನಿ ಸ್ಥಾಪಿಸಿ ಕಲಿಕೆಯ ದಿನಗಳಲ್ಲಿ ಒಂದು ಮಾದರಿಯ ನಾಯಕರಾದರು. ಏಕೆಂದರೆ ಮೊವ್ ಹಿಂಸಾಚಾರದ ಬಗೆಗಿನ ವರದಿಯಲ್ಲಿ ನಿರುದ್ಯೋಗಿ ಮತ್ತು ಸಣ್ಣ ಅಪರಾಧಿಗಳ ಗುಂಪು ಎಂದು ಈ ಯುವ ವಾಹಿನಿಯನ್ನು ವರ್ಣಿಸಲಾಗಿತ್ತು.

ಮುಂದೆ ಯೋಗಿ ಗುಂಪಿನ ಕಾರ್ಯಕ್ರಮಗಳು ಎಂದರೆ ದನ, ಮಾಂಸ, ಮೊಹರಂ ಮೆರವಣಿಗೆ, ಕಸಾಯಿಖಾನೆ ಇತ್ಯಾದಿ ವಿಷಯಗಳು. 2017ರಲ್ಲಿ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ವಿಧಾನ ಸಭೆಯ 403ರಲ್ಲಿ 325 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತಲೇ ಯೋಗಿ ಆದಿತ್ಯರು ವಿಶ್ವರೂಪ ದರ್ಶನ ತೋರಿದರು. ಅಪರಾಧಿಗಳನ್ನು ಬಿಡುವುದಿಲ್ಲ ಎಂಬುದು ಅವರ ಸಾಮಾನ್ಯ ಮಾತು. ಆದರೆ ಅಪರಾಧಿಗಳು ಎಂದರೆ ಮುಖ್ಯವಾಗಿ ಮುಸ್ಲಿಮರು, ದಲಿತರು ಎಂಬುದು ಅವರ ಪೂರ್ವಗ್ರಹ.

ಬಿಜೆಪಿಯು ಯೋಗಿ ಆದಿತ್ಯನಾಥರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಡುವಲ್ಲಿ ಅವರು ಗಮನಿಸಿದ ಅರ್ಹತೆ ಎಂದರೆ ಮುಸ್ಲಿಮರ ಬಗೆಗೆ ದ್ವೇಷ. ಕಾವಿ, ಕಾಕಿ, ಖಾದಿ ಬಗೆಗೆ ಹಿಂದೆಯೇ ಒಂದು ಬಗೆಯ ಅನುಮಾನ ಜನರಿಗೆ ಇದೆ. ಕಾವಿ ಹಿಂದೆಯೂ ರಾಜಕೀಯದಲ್ಲಿ ಇಣುಕಿದ್ದಿತ್ತು. ಆದರೆ ಕಾವಿಯ ನೇರ ರಾಜಕೀಯ ಹಸ್ತಕ್ಷೇಪ ಬಿಜೆಪಿ ಅವಧಿಯಲ್ಲಿ ಮುಖಕ್ಕೆ ರಾಚುವಂತೆ ಎದ್ದು ಕಂಡಿದೆ. ಇತ್ತೀಚೆಗೆ ಕರ್ನಾಟಕದಲ್ಲೂ ಇದನ್ನು ಕಾಣುವುದು ಸಾಧ್ಯವಾಗಿದೆ.

ಉ.ಪ್ರ.ದ ರಾಜಕೀಯ ಪಕ್ಷಗಳು

ದೇಶದ ಮಟ್ಟಿಗೆ ತಮಿಳುನಾಡು ಮತ್ತು ಉತ್ತರ ಪ್ರದೇಶಗಳು ಅತಿ ಹೆಚ್ಚು ಪ್ರಾದೇಶಿಕ ಪಕ್ಷಗಳನ್ನು ಹೊಂದಿರುವ ರಾಜ್ಯಗಳಾಗಿವೆ. ಹಿಂದು ಮಹಾ ಸಭಾ ಮತ್ತು ಜನಸಂಘಗಳು ಹಾಗೂ ಸಂಘ ಪರಿವಾರದ ಛಾಯಾ ಪಕ್ಷಗಳು ಅಂದಿನಿಂದಲೂ ಚುನಾವಣಾ ಕಣದಲ್ಲಿವೆ. 1977ರಲ್ಲಿ ಸಮಾಜವಾದಿಗಳು ಮತ್ತು ಇಂದಿರಾರಿಂದ ಒಡೆದು ಹೋದ ಸಂಸ್ಥಾ ಕಾಂಗ್ರೆಸ್ಸಿಗರು ಜನತಾ ಪಕ್ಷ ಸ್ಥಾಪಿಸಿದಾಗ ಇಲ್ಲಿ ಬಲಾಢ್ಯವಿದ್ದ ಲೋಕದಳ, ಸಂಯುಕ್ತ ವಿದಾಯಕ ದಳ, ಕಿಸಾನ್ ಪಕ್ಷಗಳ ಸಂಗಡವೇ ಜನಸಂಘವನ್ನೂ ಸೇರಿಸಿಕೊಂಡರು.

ಕೇಂದ್ರದಿಂದ ರಾಜ್ಯಗಳವರೆಗೆ ಜನಸಂಘದ ಕೆಲವರು ಮಂತ್ರಿಗಳಾಗುತ್ತಲೇ ಅವರ ನಿಲುವು ಬದಲಾಯಿತು. ಎರಡೂವರೆ ವರುಷದಲ್ಲಿ ಜನಸಂಘವು ಭಾರತೀಯ ಜನತಾ ಪಕ್ಷ ಎಂಬ ಹೆಸರಿನೊಡನೆ ಹೊಸ ರೂಪ ತಳೆಯಿತು. ಅಧಿಕಾರಕ್ಕಾಗಿ ಎಲ್ಲೆಡೆ ನಾನಾ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳತೊಡಗಿದ ಬಿಜೆಪಿ ಅನಂತರ ಅವುಗಳನ್ನು ಮುಗಿಸುವ ತಂತ್ರವನ್ನು ಕರಗತ ಮಾಡಿಕೊಂಡಿತು. ಉತ್ತರ ಪ್ರದೇಶದಲ್ಲಿ ಹೀಗೆ ಹತ್ತಾರು ಮರಿ ಪಕ್ಷಗಳು ಮತ್ತು ಬಹುಜನ ಸಮಾಜ ಪಕ್ಷವನ್ನು ಬಿಜೆಪಿ ಉಪಯೋಗಿಸಿಕೊಂಡಿತು. ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಮಂಡಲ್ ವರದಿ ಬಗೆಗೆ ಅಪಪ್ರಚಾರ, ರಾಮ ಜನ್ಮ ಭೂಮಿ ವಿವಾದವನ್ನು ಬಳಸಿಕೊಂಡು, ಮುಸ್ಲಿಂ ದ್ವೇಷ, ಹಿಂದು ಒಂದು ಇಷ್ಟರಿಂದಲೇ ಬಿಜೆಪಿ ಬಲಿಷ್ಠ ರಾಜಕೀಯ ಪಕ್ಷವಾಗಿ ಬೆಳೆದಿದೆ.

ಸ್ವಾತಂತ್ರ್ಯದ ಬಿಸಿಯಲ್ಲಿ ಕಾಂಗ್ರೆಸ್ ಬಹುಮತದೊಡನೆ ಇಲ್ಲಿ ಗೆಲ್ಲುತ್ತಿತ್ತು. ಆಗ ಬ್ರಾಹ್ಮಣರದ್ದೇ ಆ ಪಕ್ಷದಲ್ಲಿ ಆಧಿಕ್ಯ. ಆದರೆ ಸಾಮಾಜಿಕ ನ್ಯಾಯ ಎಂಬುದನ್ನು ಅದು ಎಂದೂ ಬಿಟ್ಟು ಕೊಟ್ಟಿಲ್ಲ. ಮುಖ್ಯವಾಗಿ ರೈತರು ಚರಣಸಿಂಗ್‌ ರ ಹಿಂದೆ, ಹಿಂದುಳಿದವರು ಮುಲಾಯಂ ಯಾದವರ ಹಿಂದೆ, ದಲಿತರು ಬಿಎಸ್ಪಿ ಹಿಂದೆ, ಮುಸ್ಲಿಮರು ಎಸ್ಪಿ ಬಿಎಸ್ಪಿಗಳಿಗೆ, ಬ್ರಾಹ್ಮಣರು ಬಿಜೆಪಿಗೆ ಹೋಗುತ್ತ ಹೋದಂತೆ ಕಾಂಗ್ರೆಸ್ಸಿನ ಓಟ್ ಬ್ಯಾಂಕು ಎಲ್ಲ ನಿಟ್ಟಿನಿಂದ ಈ ರಾಜ್ಯದಲ್ಲಿ ಕುಸಿದಿದೆ. ಹಾಗಾಗಿ ಪಕ್ಷವನ್ನು ಹೊಸದಾಗಿಯೇ ಕಟ್ಟಬೇಕಾದ ಅಗತ್ಯವಿದೆ.

ಚರಣ್ ಸಿಂಗ್ ಪ್ರಾಬಲ್ಯ ಅವರ ಸಾವಿನೊಂದಿಗೆ ಕುಂದಿತು. ಮಂಡಲ್ ವರದಿ ಗಲಾಟೆ ಒಂದು ಮಟ್ಟಿನ ಜಾಗತಿಯನ್ನು ಹಿಂದುಳಿದವರಲ್ಲಿ ತಂದಿತು. ಅದು ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷಕ್ಕೆ ಬಲ ನೀಡಿದ್ದರಿಂದ ಎಸ್‌ ಪಿ ಅಧಿಕಾರಕ್ಕೆ ಬಂತು. ಇದನ್ನು ಮೇಲ್ಜಾತಿಯವರು ಮುಸ್ಲಿಮ್ ಪರ ಎಂದು ಪ್ರಚಾರದಲ್ಲಿ ಇಟ್ಟರು. ಎಷ್ಟರ ಮಟ್ಟಿಗೆ ಎಂದರೆ ಒಂದು ಬಾರಿ ಬ್ರಾಹ್ಮಣರಾದಿಯಾಗಿ ಮೇಲ್ಜಾತಿಯವರು ಸಮಾಜವಾದಿ ಪಕ್ಷದ ವಿರುದ್ಧ ಬಹುಜನ ಸಮಾಜ ಪಕ್ಷಕ್ಕೆ ಮತ ಹಾಕಿದರು. ಈಗಲೂ ಎಸ್‌ ಪಿ ಪಕ್ಷವು ಸಾಕಷ್ಟು ಪ್ರಬಲವಾಗಿದೆ.

ಬರೇ ದಲಿತರ ಓಟು ಅಧಿಕಾರಕ್ಕೆ ತಾರದು ಎಂದು ತಿಳಿದಿದ್ದ ಕಾನ್ಶಿರಾಮ್ ಅವರು ತಮ್ಮ ಪಕ್ಷವನ್ನು ಬಹುಜನ ಸಮಾಜ ಪಕ್ಷ ಎಂದರು. ಮಾಯಾವತಿ ಬಿಜೆಪಿ ಹಿಡಿದು ಮುಖ್ಯಮಂತ್ರಿ ಆದರು. ಇದು ಎಸ್‌ ಪಿ ಪಕ್ಷಕ್ಕೆ ಅನುಕೂಲವಾಯಿತು. ಎಸ್‌ ಪಿಗೆ ಅನುಕೂಲವಾದುದನ್ನು ನೋಡಿದ ಮೇಲ್ಜಾತಿಯವರು ಬಿಎಸ್‌ ಪಿಗೆ ಒಮ್ಮೆ ಪೂರ್ಣ ಬಹುಮತ ಸಿಗುವಂತೆ ಮಾಡಿದರು. ಬಿಜೆಪಿ ಬರುತ್ತದೆ ಎಂದು ತಿಳಿಯುತ್ತಲೇ ಎಲ್ಲರೂ ಅಲ್ಲಿಂದ ಇಲ್ಲಿಗೆ ಬಂದರು. ಬಿಎಸ್‌ ಪಿಯ ಕೆಲವರು ಈಗಲೂ ಬ್ರಾಹ್ಮಣರ ಓಟು ನಮ್ಮದು ಎಂದು ತಿಳಿದಿರುವುದು ಅಜ್ಞಾನ. ಬಿಎಸ್‌ ಪಿ ಸಹ ತೀರಾ ದುರ್ಬಲ ಆಗಿಲ್ಲ ಇಲ್ಲಿ.

ಆದರೆ ಯೋಗಿ ಹಿಂದು ಹೆಸರಿನಲ್ಲಿ ನಡೆಸುವ ಅತಿರೇಕಗಳು ಬಿಜೆಪಿ ಬಲವನ್ನು ಹಿಟ್ಲರ್ ಬಲದಂತೆ ಉಳಿಸಿವೆ. ಪಡುವಣ ಉತ್ತರ ಪ್ರದೇಶ ಮತ್ತು ಮೂಡಣ ಉತ್ತರ ಪ್ರದೇಶದಲ್ಲಿ ಹತ್ತಾರು ಮರಿ ಪಕ್ಷಗಳು ಇವೆ. ಅವುಗಳ ವಲಯ ಮಿತಿಯದು. ಚರಣ್ ಸಿಂಗ್‌ ರ ಮೂರನೇ ತಲೆಮಾರಿನಲ್ಲಿ ಅವರ ಉಳಿಕೆ ಲೋಕದಳವು ಪಶ್ಚಿಮ ಉ.ಪ್ರ.ದಲ್ಲಿ ಎಷ್ಟು ಬಲ ಉಳಿಸಿಕೊಂಡಿದೆ ಎನ್ನುವುದು ಇನ್ನಷ್ಟೆ ತಿಳಿಯಬೇಕಾಗಿದೆ. ಏಕೆಂದರೆ ಜಯಂತ್ ಸಿಂಗ್ ಈಗ ಅದರ ಅಧ್ಯಕ್ಷರು, ರಾಜಕೀಯಕ್ಕೆ ಹೊಸಬರು.

ಕೆಟ್ಟದ್ದಕ್ಕೇ ಸುದ್ದಿ

 ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಆದಾಗಿನಿಂದಲೂ ಆ ರಾಜ್ಯವು ಬೇಕಾದ್ದಕ್ಕಿಂತ ಬೇಡವಾದ್ದಕ್ಕೆ ಹೆಚ್ಚು ಸುದ್ದಿ ಮಾಡಿದೆ. ಎನ್ಸೆಫಲಿಟೀಸ್ ಸಾವುಗಳು, ಕೊರೋನಾ ನಿರ್ವಹಣೆ ವಿಫಲತೆ ಅಂತ್ಯಕ್ರಿಯೆ ವಿಧಿಸದೆ ಗಂಗೆಯಲ್ಲಿ ಎಸೆದ ಹೆಣಗಳು, ಮಹಿಳೆಯರ ಮೇಲೆ ದೌರ್ಜನ್ಯ, ರೈತರ ಬೆಳೆ ನಾಶ, ಎನ್ ಕೌಂಟರ್ ಕೊಲೆಗಳು.

ಉತ್ತರ ಪ್ರದೇಶದಲ್ಲಿ ಕೇಸು ದಾಖಲಿಸದಿರುವುದರ ಮೂಲಕವೇ ಅಪರಾಧ ಪ್ರಮಾಣ ಕಡಿಮೆ ಎಂಬುದನ್ನು ತೋರಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪವಿದೆ. ದೇಶದ ಜನಸಂಖ್ಯೆಯ 16 ಶೇಕಡಾ ಜನರು ಈ ರಾಜ್ಯದಲ್ಲಿ ಇದ್ದಾರೆ. ಇಡೀ ದೇಶದ ಅತಿ ಬಡವರಷ್ಟೇ ಸಂಖ್ಯೆಯ ಅತಿ ಬಡವರು ಈ ರಾಜ್ಯದಲ್ಲಿ ಇದ್ದಾರೆ.

10 ಶೇಕಡಾಕ್ಕಿಂತ ಹೆಚ್ಚು ಕ್ರೈಂ ದರ ಇರುವ ರಾಜ್ಯಗಳು ಎರಡು. ಮಹಾರಾಷ್ಟ್ರ 19% ಉತ್ತರ ಪ್ರದೇಶ 10.5. ಶೇಕಡಾ. ಎರಡೂ ದೊಡ್ಡ ರಾಜ್ಯಗಳು ಮತ್ತು ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಾಗಿವೆ. ಮೂರನೆಯ ಸ್ಥಾನದಲ್ಲಿ ಗುಜರಾತ್ ಇದ್ದು ಅಲ್ಲಿಯ ಕ್ರೈಂ ದರ ಶೇ.7.8 ರಷ್ಟು ಇದೆ.

ಮುಖ್ಯವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶದ 25%ಮಹಿಳೆಯರು ಮತ್ತು ಅಷ್ಟೇ ಪ್ರಮಾಣದ ಮಕ್ಕಳು ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ. ದೂರು ಕೊಟ್ಟರೂ ದಾಖಲಾಗುವುದು ನೂರರಲ್ಲಿ ಒಂದು ಎಂಬ ಆರೋಪ ಸತ್ಯವಾದರೆ ಇಲ್ಲಿನ ಜನಸಾಮಾನ್ಯರದು ಶೋಷಣೆ ಯೋಗವೇ ಸರಿ. ಅತ್ಯಾಚಾರಕ್ಕೀಡಾದ 14ರಲ್ಲಿ 6ಜನ ದಲಿತ ಸಮುದಾಯದವರು. ಇಂಥ ಅಪರಾಧಗಳಲ್ಲಿ 10ರಲ್ಲಿ 6ರಲ್ಲಿ ಮಾತ್ರ ಎಫ್‌ ಐಆರ್ ದಾಖಲಾಗುತ್ತದೆ ಎಂದು ಕಾಮನ್ ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ ವರದಿ ನೀಡಿದೆ.

ಯೋಗಿ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ಅಪರಾಧವು ಅಧಿಕವಾಗಿರುವುದು ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೋ ದಾಖಲೆಯಿಂದಲೇ ಸ್ಪಷ್ಟವಿದೆ. 2017ರಲ್ಲಿ 38457 ಇದ್ದ ಅಪರಾಧ ಪ್ರಕರಣಗಳ ಸಂಖ್ಯೆಯು 2019ರಲ್ಲಿ 59853ಕ್ಕೆ ಏರಿದೆ. ಅಪರಾಧಿಗಳನ್ನು ನೇರ ಗುಂಡಿಟ್ಟು ಕೊಲ್ಲಲಾಗುವುದು ಎಂದು ಯೋಗಿ ಹೇಳಿದ್ದು ಬಿಜೆಪಿಗೆ ಸೇರದ ಅಪರಾಧಿಗಳ ಬಗೆಗೆ ಮಾತ್ರ ಎಂಬುದು ಈಗಾಗಲೇ ಸ್ಪಷ್ಟಗೊಂಡಿದೆ. ಯೋಗಿ ಮುಖ್ಯಮಂತ್ರಿ ಆದ ಮೇಲೆ 6476 ಎನ್ ಕೌಂಟರ್‌ ಗಳು ನಡೆದಿವೆ. ಇದರಲ್ಲಿ ಇತರರೇ ಕಾಣುವುದು. ಕಳೆದ ವರುಷ 124ಕೊಲೆಗಳು ನಡೆದಿದ್ದು ಅದರಲ್ಲಿ 37%ಮುಸ್ಲಿಮರ ಕೊಲೆಗಳಾಗಿವೆ. ಪ್ರತಿಯೊಬ್ಬ ಲೇಖಕನೂ ದಿಗ್ಭ್ರಮೆಗೊಳ್ಳಬೇಕು, ಪ್ರತಿಭಟಿಸುವ ಎಲ್ಲರೂ ಮುಗ್ಗರಿಸಬೇಕು, ಪಾಕಿಸ್ತಾನ ಎಂಬ ಉಸಿರು ಯಾರೂ ಬಿಡಬಾರದು ಹೀಗೆ ಯೋಗಿಯ ಮಾತು. ಕಿಸಾನ್ ಪ್ರತಿಭಟನೆ ರಾಜಕೀಯದ್ದು, ಅದಕ್ಕೆ ಜನಬೆಂಬಲ ಎಲ್ಲಿದೆ ಎಂಬುದು ಯೋಗಿ ಪ್ರಶ್ನೆ. ಇಂಥ ಭಾಷಣಕಾರರಿಂದ ಯಾವ ಸುಧಾರಣೆಯನ್ನು ತಾನೆ ನಿರೀಕ್ಷಿಸುವುದು ಸಾಧ್ಯ?

ಹಿಂದು ಯುವ ವಾಹಿನಿ ಕಾಲದಿಂದಲೂ ಯೋಗಿಯವರದು ಅಯೋಧ್ಯೆ, ಟ್ರಿಪಲ್ ತಲಾಖ್, 370ನೇ ವಿಧಿ, ಅನಂತರ ಸಿಎಎ, ಎನ್‌ ಆರ್‌ ಸಿ ಹೊರತು ಅಭಿವದ್ಧಿ ಮಾತೇ ಇಲ್ಲ. ಆದ್ದರಿಂದ ಸಾಕಷ್ಟು ವಿದೇಶಿ ಪತ್ರಿಕೆಗಳವರು ಇವರನ್ನು ‘ಯತಿಯ ಉಡುಗೆಯೊಳಗಿನ ತೋಳ’ ಎಂದು ಹೇಳಿದ್ದಾರೆ.

ತಪ್ಪುಯಾರದು, ಕೇಸು ಯಾರಿಗೆ?

ಉನ್ನಾವ್‌ ನಲ್ಲಿ ಅತ್ಯಾಚಾರ ಮಾಡಿದ್ದು ಬಿಜೆಪಿ ಶಾಸಕ ಕುಲದೀಪ್ ಸೆಂಗರ್, ಎಫ್‌ ಐಆರ್ ದಾಖಲಾದುದು ಅತ್ಯಾಚಾರಕ್ಕೊಳಗಾದ ಯುವತಿಯ ಮೇಲೆ. ಆಮೇಲೆ ಅವರ ಕುಟುಂಬದವರ ಮೇಲೆ ಟ್ರಕ್ ಹತ್ತಿಸಲಾಯಿತು. ಇದು ಯಾವ ಕಾನೂನು ಯೋಗ? ಬಿಜೆಪಿಯ ಚಿನ್ಮಯಾನಂದ ಅತ್ಯಾಚಾರ ನಡೆಸಿದ ಕೇಸಿನಲ್ಲೂ ಮಾನಭಂಗಕ್ಕೀಡಾದ ತರುಣಿಯ ಮೇಲೇ ಮೊಕದ್ದಮೆ ಹಾಕಲಾಯಿತು.

ಅಖ್ಲಾಕ್‌ ನನ್ನು ಬಿಜೆಪಿಯ ಶಾಸಕ ಸಂಗೀತ್ ಸೋಮ್ ಬಾಲ ಭಿಡೆ ಕೊಂದ. ಆದರೆ ಕೊಲೆಯಾದವನ ಮನೆಯವರ ಮೇಲೆ ಎಫ್‌ ಐಆರ್ ದಾಖಲು. ಯೋಗಿ ಕಾನೂನು ವ್ಯವಸ್ಥೆ ಇದು.

 ಗೋರಖಪುರ ವೈದ್ಯಕೀಯ ಆಸ್ಪತ್ರೆಗೆ ಯೋಗಿ ಆಡಳಿತ ಲೋಪದಿಂದ ಆಮ್ಲಜನಕ ಸಿಗದೆ 100ಕ್ಕೂ ಅಧಿಕ ಮಕ್ಕಳು ಸತ್ತರು. ಆದರೆ ಮಕ್ಕಳನ್ನು ಉಳಿಸಲು ಪ್ರಯತ್ನಿಸಿದ ಡಾ.ಕಫಿಲ್ ಖಾನ್ ಮೇಲೇ ಕೇಸು ಹಾಕಿ, ಅಮಾನತು ಮಾಡಲಾಯಿತು. ಅದನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಗುಜರಾತಿನಲ್ಲಿ ಮೋದಿ, ಶಾ ಮಾಡಿದಂತೆಯೇ ಯೋಗಿ ಮುಖ್ಯಮಂತ್ರಿ ಆಗುತ್ತಲೆ ತನ್ನ ಮೇಲಿನ ಕೇಸುಗಳನ್ನೆಲ್ಲ ತಾನೇ ವಜಾ ಮಾಡಿಸಿಕೊಂಡರು!

ರೋಮಿಯೋವಿನ ಅನೈತಿಕ ಪೋಲೀಸುಗಿರಿ

ಅನೈತಿಕ ಪೋಲೀಸುಗಿರಿ ಯೋಗಿ ಆಡಳಿತದ ಹೈಲೈಟ್‌ ಗಳಲ್ಲಿ ಒಂದು. ಹಿಂದು ಹುಡುಗಿ ಮುಸ್ಲಿಮನನ್ನು ಮದುವೆಯಾದರೆ ಮದುವೆ ಮುರಿಯಲು ಎಲ್ಲ ಬಗೆಯ ಅಡ್ಡ ದಾರಿಗಳನ್ನು ಇವರು ಅನುಸರಿಸುತ್ತಾರೆ. ಲವ್ ಜಿಹಾದ್ ಪದ ಮತ್ತು ಅದನ್ನು ತಡೆಯಲು ರೋಮಿಯೋ ಸ್ಕ್ವಾಡ್ ಪ್ರಯೋಗ ಈಗಲೂ ಯೋಗಿ ಆಡಳಿತದಲ್ಲಿ ಇದೆ. ಪ್ರೀತಿಸುವವರನ್ನು ಅದರಲ್ಲೂ ಅನ್ಯ ಮತೀಯರ ನಡುವಣ ಪ್ರೀತಿಯ ವಿರುದ್ಧ ಈ ರೋಮಿಯೋ ಸ್ಕ್ವಾಡ್ ಕಾನೂನುಬಾಹಿರ ದಾಳಿ ಮಾಡುತ್ತದೆ. ಆದರೆ ಯೋಗಿಯವರ ಪ್ರಕಾರ ಅದು ಕಾನೂನು ಸುವ್ಯವಸ್ಥೆಗೆ ಒಂದು ಮಾರ್ಗ. ಕೆಲವು ಕೇಸುಗಳಲ್ಲಿ ಕೋರ್ಟ್ ಅಂಥ ಮದುವೆ ತಡೆಯುವಂತಿಲ್ಲ ಎಂದು ಹೇಳಿದರೂ ಅನೈತಿಕ ಪೋಲೀಸುಗಿರಿ ನಡೆಸುವವರ ಹಾವಳಿ ತಡೆಯುವುದು ಸಾಧ್ಯವಾಗಿಲ್ಲ. ಏಕೆಂದರೆ ಅವರೆಲ್ಲ ಯೋಗಿ ಆಡಳಿತದ ಕಾಲಾಳು ಪಡೆಯವರೇ ಆಗಿದ್ದಾರೆ.

ಯಾರದೆಲ್ಲ ಕೂಟ ಸ್ಪರ್ಧೆ

ಕಳೆದ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಸ್‌ ಪಿ, ವಿಧಾನ ಸಭಾ ಚುನಾವಣೆಯಲ್ಲಿ ಬಿಎಸ್‌ಪಿ, ಎಸ್‌ ಪಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದು ಫಲ ನೀಡಿರಲಿಲ್ಲ.

ಉವೈಸಿಯವರು ಬಿಹಾರ ಚುನಾವಣೆಯಲ್ಲಿ ಐದು ಕಡೆ ಗೆದ್ದು, 25 ಕಡೆ ಲಾಲೂ ಪ್ರಸಾದರ ಆರ್‌ ಜೆಡಿಯನ್ನು ಸೋಲಿಸಿದ್ದರು ಎಂಬುದು ಒಂದು ವಿಶ್ಲೇಷಣೆ. ಉತ್ತರ ಪ್ರದೇಶದಲ್ಲಿ ಉವೈಸಿ ಈ ಬಾರಿ ಜೋರಾಗಿಯೇ ಮಾಡುವರು ಎಂಬುದು ಕೆಲವರ ಲೆಕ್ಕಾಚಾರ, ಬಿಜೆಪಿಯವರ ನಿರೀಕ್ಷೆ.

ಜಾಟ್ ಜನರ ರಾಷ್ಟ್ರೀಯ ಲೋಕದಳದಿಂದ ಹಿಡಿದು ನಾನಾ ಉಪೇಕ್ಷಿತ ಜಾತಿಗಳವರ ಪಕ್ಷಗಳು ಕೊನೆಯ ನಿಮಿಷದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತವೆ ಎನ್ನುವುದು ಕೂಡ ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ.

ಕಾರಣ ಹೇಳದೆ ಜೈಲು

 ಯೋಗಿಯವರ ಆಡಳಿತದಲ್ಲಿ ಕಾರಣ ನೀಡದೆ ಬಂದಿಸಿಟ್ಟ ಪ್ರಕರಣಗಳು ನೂರಾರು ನಡೆದಿವೆ. ಕಳೆದ ಒಂದೇ ವರುಷ ರಾಷ್ಟ್ರೀಯ ಭದ್ರತಾ ಕಾಯ್ದೆ, ದನದ ಮಾಂಸ ಎಂದು 1980 ಜನರನ್ನು ಎಫ್‌ ಐ ಆರ್ ಸಲ್ಲಿಸದೆಯೇ ಒಂದು ವರುಷದಿಂದ ಜೈಲಲ್ಲಿ ಇಡಲಾಗಿದೆ. ಕೇಳಿದರೆ ರಾಷ್ಟ್ರೀಯ ಭದ್ರತೆ. ಆದರೆ ಸಂವಿಧಾನಕ್ಕೆ ಅಪಚಾರವಿದು. 2017ರಲ್ಲಿ ಕಸಾಯಿಖಾನೆ ಬಂದ್ ಎಂಬ ದೊಡ್ಡ ಕೂಗು ಮತ್ತು ಕಾರ್ಯಾಚರಣೆ ನಡೆಯಿತು. ಆದರೆ ದೇಶದಲ್ಲಿ ಅತಿ ಹೆಚ್ಚು ಜಾನುವಾರು ಮಾಂಸ ರಫ್ತು ಮಾಡುವ ರಾಜ್ಯ ಉತ್ತರ ಪ್ರದೇಶ ಮತ್ತು ಸಾಕಷ್ಟು ಜನ ಬಿಜೆಪಿ ನಾಯಕರು ಈ ಮಾಂಸ ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ.

2018ರ ಸೆಪ್ಟಂಬರ್ 20ರಂದು 22 ವರುಷದ ವಿದ್ಯಾರ್ಥಿ ನೌಷಾದ್ ಮತ್ತು ಮುಸ್ತಾಕೀನ್‌ ರನ್ನು ಆಲಿಗಡ ವಿಶ್ವವಿದ್ಯಾನಿಲಯದಲ್ಲಿ ಎನ್ ಕೌಂಟರ್ ಮಾಡಿ ಕೊಲ್ಲಲಾಯಿತು. ಪ್ರತಿಭಟನೆ ಯಾವುದೂ ನಡೆಯಬಾರದು ಎಂಬುದನ್ನು ಗುಂಡಿನ ಸದ್ದಿನ ಮೂಲಕ ಹೇಳಿದ ಸರಕಾರವಿದು. ಸುಮಿತ್ ಎಂಬವನ ಬದಲು ಸುಮಿತ್ ಗುರ್ಜರ್ ಎಂಬವನನ್ನು ಎನ್‌ ಕೌಂಟರ್ ಮಾಡಿ ಆಮೇಲೆ ಪರಿಹಾರದ ನಾಟಕವಾಡಿದ ಸರಕಾರವಿದು. ದಲಿತ ನಾಯಕ ಚಂದ್ರಶೇಖರ ರಾವಣ್‌ ರನ್ನು ಸಾಕಷ್ಟು ಸಲ ಬಂಧಿಸಿ ಬಿಡುವ ನಾಟಕವೂ ಈ ಸರಕಾರದ್ದೇ. ಕೊನೆಗೆ ಇವರ ಪೋಲೀಸು ಸುಭೋದ್ ಸಿಂಗ್ ಎಂಬವರನ್ನೇ ಬಜರಂಗ ದಳದವರು ಕೊಂದು ಹಾಕಿದರು. ಹತ ಪೋಲೀಸರ ಮನೆಯವರು ಏನು ಅತ್ತು ಕರೆದರೂ ನ್ಯಾಯ ಎಲ್ಲಿದೆ?

               ಬೀಫ್ ಚೀಫ್ ಉತ್ತರ ಪ್ರದೇಶ

ಪಡುವಣ ಬಂಗಾಳ, ಕೇರಳ ಮತ್ತು ಈಶಾನ್ಯ ಭಾರತದ ಆರು ಸಣ್ಣ ರಾಜ್ಯಗಳ ಹೊರತಾಗಿ ಬೇರೆಲ್ಲ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಇದೆ. ಅಸ್ಸಾಂ ರಾಜ್ಯದಲ್ಲಿ ಕಳೆದ ವರುಷವಷ್ಟೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿದೆ. ಇದರಿಂದ ಬೀಫ್ ತಿನ್ನುವವರಿಗಿಂತ ದನ ಸಾಕುವ ರೈತರಿಗೆ ತೊಂದರೆ ಆಗಿದೆ. ಜಾನುವಾರು ಮಾಂಸಕ್ಕೆ ತಡೆ ಇಲ್ಲ.

ಆಸ್ಟ್ರೇಲಿಯಾ, ಬ್ರೆಜಿಲ್, ಭಾರತಗಳು ಜಗತ್ತಿನಲ್ಲಿ ಅತಿ ಹೆಚ್ಚು ಜಾನುವಾರು ಮಾಂಸ ರಫ್ತು ಮಾಡುವ ದೇಶಗಳಾಗಿವೆ. ಭಾರತ ಬಹುಪಾಲು ಮೊದಲ ಸ್ಥಾನದಲ್ಲೇ ಇದೆ. ರಫ್ತು ಹೆಚ್ಚಿದಂತೆ ಗೋಶಾಲೆಗಳು ಹೆಚ್ಚಿವೆ. ಅಲ್ಲಿ ಒಳಗೆ ಹೋದ ಹಸುಗಳು ಮುಂದೆ ಏನಾಗುತ್ತವೆ ಎನ್ನುವುದು ಚಿದಂಬರ ರಹಸ್ಯ.

ಅಲ್ ಕಬೀರ್ ಜಾನುವಾರು ಮಾಂಸ ರಫ್ತು ಮಾಡುವ ಕಂಪೆನಿಯ ಮಾಲೀಕನ ಹೆಸರು ಸುನೀಲ್ ಕಪೂರ್. ಬೀಫ್ ವಿರುದ್ಧದ ಕತೆಯಲ್ಲಿ ಇದು ಒಂದು ಸಣ್ಣ ಉದಾಹರಣೆ ಅಷ್ಟೆ. ದೇಶದಲ್ಲಿ 1176 ಕಸಾಯಿಖಾನೆಗಳು ಇದ್ದು, ಅವುಗಳಲ್ಲಿ ಅತ್ಯಾಧುನಿಕ ಅಬಾಟರ್‌ ಗಳ ಸಂಖ್ಯೆ 75 ಮಾತ್ರ. ಮುಖ್ಯವಾಗಿ ದೇಶದ ಬೀಫ್ ರಫ್ತಿನಲ್ಲಿ 64 ಶೇಕಡಾ ಉತ್ತರ ಪ್ರದೇಶದಿಂದ ಆಗುತ್ತದೆ.

Join Whatsapp